ಕನ್ಹಯ್ಯ ಪರ ಮತ್ತು ವಿರೋಧಿ ವಕೀಲರ ನಡುವೆ ಕಾಳಗ

ಹೊಸದಿಲ್ಲಿ,ಫೆ.17: ದಿಲ್ಲಿಯ ಪಟಿಯಾಳಾ ಹೌಸ್ ನ್ಯಾಯಾಲಯ ಬುಧವಾರ ಅಸಹ್ಯಕರ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.ವಕೀಲರ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ತಮ್ಮನ್ನು ‘‘ದೇಶಭಕ್ತರು’’ಎಂದು ಹೇಳಿಕೊಂಡ ವಕೀಲರ ಗುಂಪೊಂದು ಭಾರತಪರ ಘೋಷಣೆಗಳನ್ನು ಮೊಳಗಿಸಿತಲ್ಲದೆ, ತಮಗೆ ತಡೆಯೊಡ್ಡಿದವರನ್ನು ‘‘ದೇಶದ್ರೋಹಿಗಳು’’ ಎಂದು ಬಣ್ಣಿಸಿತು.
ಸೋಮವಾರ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದ ವಕೀಲರ ಗುಂಪು ಬುಧವಾರವೂ ನ್ಯಾಯಾಲಯದ ಆವರಣದಲ್ಲಿ ಉಪಸ್ಥಿತವಿದ್ದು, ತಮ್ಮನ್ನು ‘‘ಗೂಂಡಾಗಳು’’ಎಂದು ಕರೆಯುವಂತಿಲ್ಲ ಎಂದು ಪ್ರತಿಪಾದಿಸಿತು. ‘‘ಪಾಕಿಸ್ತಾನ್ ಜಿಂದಾಬಾದ್’’ಎಂದವರನ್ನು ಹಿರೋಗಳನ್ನಾಗಿ ಮಾಡಲಾಗಿದೆ ಮತ್ತು ತಮ್ಮನ್ನು ಗೂಂಡಾಗಳೆಂದು ಕರೆಯಲಾಗುತ್ತಿದೆ ಎಂದು ಈ ಗುಂಪು ಹೇಳಿತು. ತಮ್ಮನ್ನು ಗೂಂಡಾಗಳೆಂದು ಕರೆಯದಂತೆ ಘೋಷಣೆಗಳನ್ನೂ ಈ ಗುಂಪು ಕೂಗಿತು.
ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಗೆ ಮುನ್ನ ಘರ್ಷಣೆ ಭುಗಿಲ್ಲೆದ್ದಿತು. ಹೊಡೆದಾಟದಲ್ಲಿ ಕನ್ಹಯ್ಯೋ ಪರ ಮತ್ತು ಕನ್ಹಯ್ಯೋ ವಿರೋಧಿ ಗುಂಪುಗಳು ಭಾಗಿಯಾಗಿದ್ದವು ಎನ್ನಲಾಗಿದೆ.
ಪರಿಸ್ಥಿತಿಯು ನಿಯಂತ್ರಣ ಮೀರಿದಾಗ ಪೊಲೀಸರು ನ್ಯಾಯಾಲಯ ಕಟ್ಟಡದ ಪ್ರವೇಶ ದ್ವಾರಗಳನ್ನು ಮುಚ್ಚಿದರು. ಇದಾದ ಬಳಿಕ ತಮ್ಮ ಆಕ್ರೋಶವನ್ನು ಘಟನೆಯ ವರದಿ ಮಾಡುತ್ತಿದ್ದ ಪತ್ರಕರ್ತರತ್ತ ತಿರುಗಿಸಿದ ಕುಪಿತ ವಕೀಲರು ಪತ್ರಕರ್ತ ತಾರಿಕ್ ಅನ್ವರ್ ಎನ್ನುವವರನ್ನು ಹಿಡಿದು ಥಳಿಸಿದರು. ವಕೀಲರು ತನ್ನನ್ನು ಥಳಿಸುವಾಗ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದು ಅವರು ದೂರಿಕೊಂಡರು.
ಪಟಿಯಾಳಾ ಹೌಸ್ ನ್ಯಾಯಾಲಯ ಸಂಕೀರ್ಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಯನ್ನು ಹೆಚ್ಚಿಸುವಂತೆ ಸರ್ವೋಚ್ಚ ನ್ಯಾಯಾಲಯವು ದಿಲ್ಲಿ ಪೊಲೀಸರಿಗೆ ನಿರ್ದಿಷ್ಟವಾಗಿ ಸೂಚಿಸಿತ್ತು. ಆದರೆ ಪೊಲೀಸರ ಕಣ್ಣೆದುರೇ ಈ ಎಲ್ಲ ಘಟನೆಗಳು ನಡೆದು ಹೋಗಿವೆ.







