ಜೆಎನ್‌ಯು: ಮೂವರು ಎಬಿವಿಪಿ ನಾಯಕರ ರಾಜೀನಾಮೆ

ಹೊಸದಿಲ್ಲಿ,ಫೆ.17: ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ನಾಯಕ ಕನ್ಹಯ್ಯಾ ಕುಮಾರ್ ಬಂಧನ ಹಾಗೂ ಹೈದರಾಬಾದ್ ವಿವಿಯ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ಕೇಂದ್ರದ ಬಿಜೆಪಿ ಸರಕಾರದ ನಿಲುವನ್ನು ಪ್ರತಿಭಟಿಸಿ, ಎಬಿವಿಪಿಯ ಜೆಎನ್‌ಯು ಘಟಕದ ಮೂವರು ಪದಾಧಿಕಾರಿಗಳು ಬುಧವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಎಬಿವಿಪಿಯ ಎಲ್ಲಾ ಚಟುವಟಿಕೆಗಳಿಂದಲೂ ತಾವು ದೂರವಿರುವುದಾಗಿ ಅವರು ಘೋಷಿಸಿದ್ದಾರೆ. ಕೇಂದ್ರ ಸರಕಾರವು ವಿದ್ಯಾರ್ಥಿ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದೆಯೆಂದು ಅವರು ಆಪಾದಿಸಿದ್ದಾರೆ.
ಜೆಎನ್‌ಯು ಎಬಿವಿಪಿ ಘಟಕದ ಜಂಟಿಕಾರ್ಯದರ್ಶಿ ಪ್ರದೀಪ್ ನವಲ್, ಹುದ್ದೆ ತ್ಯಜಿಸುವ ತನ್ನ ನಿರ್ಧಾರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಅವರ ಜೊತೆಗೆ, ವಿವಿಯ ಸಮಾಜಶಾಸ್ತ್ರ ವಿಭಾಗದಲ್ಲಿ ಎಬಿವಿಪಿ ಘಟಕದ ಅಧ್ಯಕ್ಷರ ರಾಹುಲ್‌ಯಾದವ್ ಹಾಗೂ ಅಂಕಿತ್ ಹನ್ಸ್ ಕೂಡಾ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಮೂವರು ವಿದ್ಯಾರ್ಥಿ ನಾಯಕರ ರಾಜೀನಾಮೆಯು, ಸಂಘಪರಿವಾರದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯಲ್ಲಿ ಒಡಕು ಮೂಡಿರುವುದನ್ನು ಇದೇ ಮೊದಲ ಬಾರಿಗೆ ಬಹಿರಂಗಗೊಳಿಸಿದೆ. ‘‘ ವಿದ್ಯಾರ್ಥಿ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಸರಕಾರದ ಮುಖವಾಣಿಯಾಗಿ ವರ್ತಿಸಲು ತಮಗೆ ಸಾಧ್ಯವಿಲ್ಲ’’ ಎಂದು ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಟಿಯಾಲ ಹೌಸ್ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನಕಾರರ ಮೇಲೆ ಬಿಜೆಪಿ ಶಾಸಕ ಓ.ಪಿ.ಶರ್ಮಾ ಹಲ್ಲೆ ನಡೆಸಿದ ಘಟನೆಯನ್ನೂ ಅವರು ಖಂಡಿಸಿದ್ದಾರೆ. ಸರಕಾರವು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಬಲಪಂಥೀಯ ಫ್ಯಾಶಿಸ್ಟ್ ಶಕ್ತಿಗಳು ನಡೆಸುತ್ತಿರುವ ದಬ್ಬಾಳಿಕೆಯನ್ನು ಕಾನೂನುಬದ್ಧಗೊಳಿಸಿದೆ. ಜೆಎನ್‌ಯು ವಿದ್ಯಾರ್ಥಿಗಳನ್ನು ಥಳಿಸಲು ಪ್ರತಿದಿನವೂ ಜನರು ರಾಷ್ಟ್ರಧ್ವಜಗಳನ್ನು ಹಿಡಿದು ನಿಂತಿರುತ್ತಾರೆ. ಈ ರೀತಿಯ ಗೂಂಡಾಗಿರಿಯನ್ನು ರಾಷ್ಟ್ರೀಯವಾದವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು, ಈ ಮೂವರು ವಿದ್ಯಾರ್ಥಿ ನಾಯಕರು ತಿಳಿಸಿದ್ದಾರೆ. ಅದೇ ರೀತಿಯ ಜೆಎನ್‌ಯು ಆವರಣದಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದುದನ್ನೂ ಅವರು ಬಲವಾಗಿ ಖಂಡಿಸಿದ್ದಾರೆ.







