Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನನ್ನ ಹಿರಿಯಣ್ಣ ಅರಸು-ಎಚ್.ಡಿ.ದೇವೇಗೌಡ

ನನ್ನ ಹಿರಿಯಣ್ಣ ಅರಸು-ಎಚ್.ಡಿ.ದೇವೇಗೌಡ

ನಿರೂಪಣೆ: ಬಸು ಮೇಗಲ್ಕೇರಿನಿರೂಪಣೆ: ಬಸು ಮೇಗಲ್ಕೇರಿ17 Feb 2016 11:10 PM IST
share
ನನ್ನ ಹಿರಿಯಣ್ಣ ಅರಸು-ಎಚ್.ಡಿ.ದೇವೇಗೌಡ

ಭಾಗ 1
ಫಿಯಟ್ ಕಾರ್ ಮತ್ತು ಅರಸು
 ನಿಜಲಿಂಗಪ್ಪನವರ ಕ್ಯಾಬಿನೆಟ್‌ನಲ್ಲಿ ದೇವರಾಜ ಅರಸು ಸಾರಿಗೆ ಮಂತ್ರಿಯಾಗಿದ್ದರು. ಆಗ ನಾನು ಶಾಸಕನಾಗಿದ್ದೆ. ಜನರಲ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಊರಿಗೆ ಬಸ್ ಹಾಕಿಸಿಕೊಳ್ಳಲು, ಊರಿನ ಕಡೆಯ ಹುಡುಗರಿಗೆ ಕಂಡಕ್ಟರ್ ಕೆಲಸ ಕೊಡಿಸಲು ಅರಸು ಅವರನ್ನು ಆಗಾಗ ಕಾಣಲು ಹೋಗುತ್ತಿದ್ದೆ. ನನಗೆ ಅವರು ಆಗಿನಿಂದಲೂ ಪರಿಚಯ. ನನ್ನ ಅವರ ನಡುವೆ ಒಳ್ಳೆಯ ಸಂಬಂಧವಿತ್ತು. ನಿಜಲಿಂಗಪ್ಪನವರ ವಿರುದ್ಧ ಫೈಟ್ ಮಾಡಿ ಬಂಡಾಯವೆದ್ದು ಗೆದ್ದು ಬಂದಿದ್ದನಲ್ಲ, ನನ್ನಲ್ಲೇನೋ ಶಕ್ತಿ ಇದೆ ಅನ್ನೋದು ಅರಸುಗೆ ಗೊತ್ತಿತ್ತು. ಆ ಕಾರಣದಿಂದ ನನ್ನ ಕಂಡರೆ ಕರೆದು ಮಾತನಾಡಿಸುವಷ್ಟು ಪ್ರೀತಿ. ಆಗ, ಒಂದು ನೂರು ಅಶೋಕ್ ಲಾಯ್‌ಲೆಂಡ್ ಬಸ್ ಖರೀದಿಸಿದರೆ 3 ಫಿಯಟ್ ಕಾರ್‌ಗಳನ್ನು ಗಿಫ್ಟ್ ಆಗಿ ಕೊಡುತ್ತಿದ್ದರು. ಆ ಬಂದ ಮೂರು ಕಾರು ಏನಾದವು ಅನ್ನೋದು ಪ್ರಶ್ನೆ. ಒಂದನ್ನು ಅರಸು ಇಟ್ಕೊಂಡರು ಅನ್ನೋ ಆರೋಪ ಕೇಳಿಬಂದಿತ್ತು. ಆ ಆರೋಪದ ಹಿನ್ನೆಲೆಯಲ್ಲಿ 1967ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿನಿಂದ ದೇವರಾಜ ಅರಸು ಅವರಿಗೆ ಟಿಕೆಟ್ ತಪ್ಪಿಸಬೇಕೆಂದು ನಿಜಲಿಂಗಪ್ಪನವರು ತೀರ್ಮಾನಿಸಿದರು. ಅರಸು ಅವರ ಸ್ನೇಹಿತರಾಗಿದ್ದ ಡಾ. ತಿಮ್ಮೇಗೌಡರನ್ನು ಕೇಳಿಕೊಂಡರು. ಆಗ ಅವರು, ‘ಕೊಟ್ಟರೆ ಅರಸುಗೆ ಕೊಡಿ, ನಾನಂತೂ ಅವರ ವಿರುದ್ಧ ನಿಲ್ಲಲ್ಲ’ ಎಂದಿದ್ದರು. ನಿಜಲಿಂಗಪ್ಪನವರಿಗೆ ಅರಸು ಬಗ್ಗೆ ಗೌರವವಿತ್ತು. ಆದರೆ ನಿಜಲಿಂಗಪ್ಪನವರು ಎಐಸಿಸಿ ಅಧ್ಯಕ್ಷರಾಗಿ ದೆಹಲಿಗೆ ತೆರಳಿದ ಮೇಲೆ, ಇಲ್ಲಿ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎದುರಾದಾಗ, ಅರಸು, ನಾನು ಮಹಾರಾಜರ ವಿರುದ್ಧ ಹೋರಾಡಿದವನು, ಮುಖ್ಯಮಂತ್ರಿಯಾಗಬೇಕು ಎಂದರು. ಕೊನೆಗೆ ಇಂದಿರಾ ಗುಂಪಿನ ಬಿ.ಡಿ.ಜತ್ತಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಾಗ, ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಆದ ಅವಮಾನ ಮುಚ್ಚಿಕೊಳ್ಳಲು ಇಂದಿರಾ ಗಾಂಧಿ ಗುಂಪು ಜತ್ತಿಯವರನ್ನು ಪಾಂಡಿಚೇರಿಗೆ ಗೌರ್ನರ್ ಮಾಡಿ ಕಳುಹಿಸಿಕೊಡಲಾಯಿತು.

ಆಗ ಇಲ್ಲಿ ಉಳಿದವರು ಅರಸು, ಅವರೇ ನಾಯಕರಾದರು. ನಿಜಲಿಂಗಪ್ಪನವರು ಕೆಳಗಿಳಿದು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದಾಗ ಅರಸು ವಿರೋಧಿ ಗುಂಪಿನ ನಾಯಕರಾದರು. ಅದೇ ಸಮಯಕ್ಕೆ ಸರಿಯಾಗಿ 1969 ರಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು. ಆಗ ಅರಸು ನನ್ನ ಕಾಣಲು ಫಿಯಟ್ ಕಾರಿನಲ್ಲಿ ಜನರಲ್ ಹಾಸ್ಟೆಲ್‌ಗೆ ಬಂದಿದ್ದರು. ಕಾರಿನಲ್ಲಿ ಕೂರಿಸಿಕೊಂಡು ಕಬ್ಬನ್ ಪಾರ್ಕಿಗೆ ಕರೆದುಕೊಂಡು ಹೋದರು. ಎರಡು ರೂಪಾಯಿ ಕೊಟ್ಟು ಕಡ್ಲೇಕಾಯಿ ಖರೀದಿಸಿ ನನ್ನ ಮುಂದೆ ಸುರಿದು, ‘ನೋಡು ಗೌಡ, ನಿನ್ನನ್ನು ಹಾಸನ ಜಿಲ್ಲಾಧ್ಯಕ್ಷನನ್ನಾಗಿಸುತ್ತೇನೆ, ನಮ್ಮ ಪಕ್ಷ (ಇಂಡಿಕೇಟ್-ಇಂದಿರಾ ಗ್ರೂಪ್ ಕಾಂಗ್ರೆಸ್) ಅಧಿಕಾರಕ್ಕೆ ಬಂದರೆ ಮೊದಲು ನಿನ್ನನ್ನು ಮಂತ್ರಿ ಮಾಡುತ್ತೇನೆ, ನನ್ನ ಜೊತೆ ಬಂದುಬಿಡು’ ಎಂದು ತಮ್ಮನಿಗೆ ಅಣ್ಣ ಬುದ್ಧಿ ಹೇಳುವಂತೆ ಹೇಳಿದರು. ಎರಡು ಗಂಟೆ ಕೂತ್ವಿ.

ನಾನು, ‘ಏನ್ಸಾರ್, ಇಂದಿರಾ ಗಾಂಧಿ ಅವರೇ ಅಭ್ಯರ್ಥಿ ನಿಲ್ಲಿಸಿ, ಅವರೇ ಆತ್ಮಸಾಕ್ಷಿ ಓಟು ಹಾಕಲು ಹೇಳಿದ್ದು ಅನ್ಯಾಯವಲ್ಲವೇ, ಸೋಲಿಸಿದ್ದು ಸರಿನಾ ಸಾರ್, ಅಶಿಸ್ತಿನ ಬೀಜ ಬಿತ್ತಿದಾಕೆಯ ಪರ ನಿಲ್ಲವುದು ನಿಮ್ಮ ಕಾನ್ಶಿಯಸ್‌ಗೆ ಒಪ್ಪುತ್ತದೆಯೇ’ ಎಂದೆ. ಅದಕ್ಕವರು, ‘ಓ.. ಇವನು ಭಾರೀ ಭವಿಷ್ಯದ ಬಗ್ಗೆ ಯೋಚಿಸ್ತಿದ್ದಾನೆ, ನಾವು ಮೊದಲು ಮುಖ್ಯಮಂತ್ರಿ, ಮಂತ್ರಿಯಾಗೋದು ನೋಡಪ್ಪ’ ಎಂದು ಮಹಾಭಾರತದ ಧರ್ಮರಾಯನ ಕತೆ, ಕೃಷ್ಣನ ನೀತಿಯನ್ನು ಸ್ವಾರಸ್ಯಕರವಾಗಿ ಹೇಳಿದರು. ನಾನು ಒಪ್ಪಲಿಲ್ಲ. ಅರಸು ದೊಡ್ಡತನ ನೋಡಿ, ಬಲವಂತ ಮಾಡಲಿಲ್ಲ, ಬಿಟ್ಟರು. ಅವರು ಇಂದಿರಾ ಜೊತೆ ಹೋದರು, ನಾನು ವೀರೇಂದ್ರ ಪಾಟೀಲರ ಜೊತೆ ಉಳಿದೆ. ಆದರೆ ನಮ್ಮಿಬ್ಬರ ಸ್ನೇಹ ಮಾತ್ರ ಹಾಗೆಯೇ ಇತ್ತು. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ. ಅರಸು ಕಲ್ಲಳ್ಳಿಗೆ ಹೋಗಬೇಕಾದಾಗಲೆಲ್ಲ, ನಮ್ಮ ಊರು, ಹೊಳೆನರಸೀಪುರದ ಮೂಲಕ ಹೋಗುತ್ತಿದ್ದರು. ಹೋಗುವುದಕ್ಕೆ ಮುಂಚೆ ನನಗೆ ವಿಷಯ ಮುಟ್ಟಿಸಿ, ‘ಲೇ ಗೌಡ, ಕೋಳಿ ಮಾಡ್ಸೋ, ಊಟಕ್ಕೆ ಬರ್ತೇನೆ’ ಎನ್ನುತ್ತಿದ್ದರು. ನಾನು ನನ್ನೂರಿನ ಸಾಬರ ಕೈಲಿ ಒಳ್ಳೆ ನಾಟಿ ಕೋಳಿ ಸಾರು ಮಾಡಿಸಿ ಕಾಯುತ್ತಾ ಕೂರುತ್ತಿದ್ದೆ. ಅವರು ಬಂದು ಊಟ ಮಾಡಿ, ಪೈಪ್ ಹಿಡಿದು ಕೂರೋರು. ಡನ್‌ಹಿಲ್ ಸಿಗರೇಟು ತೆಗೆದು ನನಗೊಂದು ಕೊಟ್ಟು, ‘ಹಚ್ಚೋ ಗೌಡ’ ಎನ್ನುತ್ತಿದ್ದರು. ಆ ಕಾಲದ, ಆ ವಯಸ್ಸಿನ ರಾಜಕಾರಣವೇ ಬೇರೆ.


 ಲಘುವಾಗಿ ಮಾತನಾಡಿದರೆ ಅರಸು?

 1972 ರಲ್ಲಿ ದೇವರಾಜ ಅರಸು ಬಹುಮತದಿಂದ ಗೆದ್ದು ಸರಕಾರ ರಚಿಸಿದರು. ಆದರೆ ನಾವು, ನಿಜಲಿಂಗಪ್ಪನವರ ಗುಂಪಿನಲ್ಲಿ ಗೆದ್ದವರು 24 ಶಾಸಕರು. ನಮ್ಮ ನಾಯಕರಾಗಿದ್ದ ಎಸ್.ಶಿವಪ್ಪನವರು, ಲೋಕಸಭೆ ಚುನಾವಣೆಯಲ್ಲಿ ಸೋತು, ಶ್ರೀಕಂಠಯ್ಯನ ಆಮಿಷಕ್ಕೆ ಬಲಿಬಿದ್ದು, ‘ನಾನು ಇಂದಿರಾ ಕಾಂಗ್ರೆಸ್ ಪಕ್ಷಕ್ಕೆ ಭುಜಕ್ಕೆ ಭುಜ ಕೊಟ್ಟು ನಿಲ್ಲಲು ನಿರ್ಣಯಿಸಿದ್ದೇನೆ’ ಎಂದು ವಿಧಾನಸಭೆಯಲ್ಲಿಯೇ ಘೋಷಿಸಿಬಿಟ್ಟರು. ಆಗಿನ ಸ್ಥಿತಿ ಹೇಗಿತ್ತು ಅಂದರೆ, ನಮ್ಮ ಪಕ್ಷಕ್ಕೆ ನಾಯಕರೆ ಇಲ್ಲದಂತಾಗಿತ್ತು. ಆಗ ನಮ್ಮ ಪಕ್ಷದ ಅಧ್ಯಕ್ಷರಾದ ವೀರೇಂದ್ರ ಪಾಟೀಲರು ನನ್ನನ್ನು ಕರೆಸಿದರು. ಸೋತು ಸುಸ್ತಾಗಿದ್ದರು. ಉತ್ಸಾಹ ಬತ್ತಿಹೋಗಿತ್ತು. ಆ ಸಭೆಯಲ್ಲಿ ಮಂಡ್ಯದ ಶಂಕರಗೌಡ, ಹಾಸನದ ಸಿದ್ದನಂಜಪ್ಪರಂತಹ ಹಿರಿಯರಿದ್ದರೂ, ಯಾರೂ ಸಿದ್ಧರಿಲ್ಲ. ಕೊನೆಗೆ ವಿಧಾನಸಭೆಯ ವಿರೋಧಪಕ್ಷದ ನಾಯಕನ ಸ್ಥಾನ ನನ್ನ ಹೆಗಲಿಗೆ ಬಿತ್ತು. ನಾನು ಹೊಣೆಗಾರಿಕೆ ಹೊರಲು ಸಿದ್ಧ ಎಂದೆ. ಕಾಸಿಲ್ಲ, ಕರೀಮಣಿ ಇಲ್ಲ, ವಿರೋಧ ಪಕ್ಷದ ನಾಯಕ. ನನಗೆ ನಾನೇ ಗೇಲಿ ಮಾಡಿಕೊಳ್ಳುವಂತಹ ಸ್ಥಿತಿ ಅದು. ದೇವೇಗೌಡ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಂಬುದು ಮುಖ್ಯಮಂತ್ರಿ ಅರಸು ಅವರ ಕಿವಿಗೆ ಬಿತ್ತು. ಅವರು ‘ಅರೆ ದೇವೇಗೌಡ, ಅಪೋಸಿಷನ್ ಲೀಡರ್’ ಎಂದು ನಕ್ಕರಂತೆ. ಅವರ ಮನಸ್ಸಿನಲ್ಲಿ ಏನಿತ್ತೋ ನನಗೆ ಗೊತ್ತಿಲ್ಲ. ಅವರ ಮಾತಿನ ಧಾಟಿ ವ್ಯಂಗ್ಯವಾಗಿತ್ತೊ, ಗೌರವಪೂರ್ವಕವಾಗಿತ್ತೊ ಅದೂ ಗೊತ್ತಿಲ್ಲ. ಆ ಪತ್ರಿಕಾಗೋಷ್ಠಿಗೆ ಹೋಗಿದ್ದ ನನ್ನ ಮಿತ್ರ, ಕನ್ನಡಪ್ರಭ ವರದಿಗಾರ ರಾಂಪ್ರಸಾದ್ ಬಂದು, ‘ಏನ್ ದೇವೇಗೌಡ್ರೆ, ನಿಮ್ಮ ಬಗ್ಗೆ ಅರಸು ಲಘುವಾದ ಶಬ್ದ ಬಳಕೆ ಮಾಡಿದರಲ್ಲ’ ಎಂದರು. ಅರಸು ಹೀಗಂದರೆ ಎಂದು ನನ್ನ ಮನಸ್ಸು ವಿಚಲಿತಗೊಂಡಿತು. ಅವರನ್ನು ಎದುರಿಸುವ ಬಗೆ ಹೇಗೆ ಎಂಬುದೇ ತಿಳಿಯದಾಯಿತು. ರಾಂಪ್ರಸಾದ್‌ರನ್ನು ಏರ್‌ಲೈನ್ಸ್ ಹೊಟೇಲ್‌ಗೆ ಕರೆದುಕೊಂಡು ಹೋಗಿ, ‘24 ಶಾಸಕರ ನಾಯಕ ನಾನು, ಒಪ್ಕೋಂಡುಬಿಟ್ಟಿದೀನಿ, ಏನಪ್ಪಾ ನನ್ನ ಗತಿ’ ಎಂದೆ. ‘ನೋಡೋಣ ಗೌಡ್ರೆ, ನಾನು ಗೈಡ್ ಮಾಡ್ತೇನೆ’ ಎಂದು ಧೈರ್ಯ ತುಂಬಿದರು.

ದಿನಕ್ಕೊಂದು ಪ್ರಕರಣ

ನಾನು ವಿಧಾನಸಭೆಯಲ್ಲಿ ಮೊದಲು ಮಾಡಿದ ಭಾಷಣ ಕಾವೇರಿ ಮೇಲೆ. ಒಂದೂವರೆ ಗಂಟೆಗಳ ಕಾಲ, ನಿರರ್ಗಳವಾಗಿ ಮಾತನಾಡಿದೆ. ಅದು, ಹೌಸ್‌ನಲ್ಲಿದ್ದವರಿಗೆ ನನ್ನ ಮೇಲೆ ವಿಶ್ವಾಸ ಹುಟ್ಟಿಸಿತು. ನನಗೂ ಧೈರ್ಯ ಬಂತು. ಆದರೂ ಆರು ತಿಂಗಳು ನಾನು ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿಲ್ಲ. ಈ ಆರು ತಿಂಗಳಲ್ಲಿ ಅರಸು ಸಂಪುಟದಲ್ಲಿ ಸಚಿವರಾಗಿದ್ದರಲ್ಲ, ಯಾವುದಾವುದೋ ಹೆಸರಿಲ್ಲದ ಸಮಾಜಗಳಿಂದ ಬಂದವರು, ಅವರು ಸರಕಾರ ನಮ್ಮ ಮನೆ ಆಸ್ತಿ ಎಂಬಂತೆ ವರ್ತಿಸತೊಡಗಿದರು. ಮಿತ್ರ ರಾಂಪ್ರಸಾದ್ ಬಂದು, ‘ಪ್ರತಿಯೊಂದು ಪೇಪರ್ ತರಿಸಿ ಓದಬೇಕು, ಯಾವ್ಯಾವ ಮಂತ್ರಿ ಏನೇನು ಮಾಡ್ತನೆ ನೋಟ್ಸ್ ಮಾಡಬೇಕು, ಕಟ್ ಮಾಡಿ ಫೈಲ್ ಮಾಡಬೇಕು, ಡಿಪಾರ್ಟ್‌ಮೆಂಟ್‌ವೈಸ್’ ಎಂದಿದ್ದರು. ಅವರು ಹೇಳಿದಂತೆಯೇ ಮಾಡಿದೆ. ವಿರೋಧ ಪಕ್ಷದ ನಾಯಕನಲ್ಲವಾ, ಆಡಿಟ್ ಕಮಿಟಿಯ ವರದಿಯೂ ಬರುತ್ತಿತ್ತು. ಅವುಗಳಿಂದ ಯಾವ್ಯಾವ ಪಾಯಿಂಟ್‌ಗಳನ್ನು ಹೆಕ್ಕಿ ತೆಗೀಬೇಕು ಎಂದು ನಾನು ಕಲಿತದ್ದು ಆಗಲೇ. ಅಂದಿನಿಂದ ವಿಧಾನಸಭೆಯಲ್ಲಿ ಎದ್ದುನಿಂತು ದಿನಕ್ಕೊಂದು ಪ್ರಕರಣ ಬಯಲು ಮಾಡತೊಡಗಿದೆ. ಅರಸು ತತ್ತರಿಸಿಹೋಗಿದ್ದರು. ತಮ್ಮ ಅಧಿಕಾರಿಗಳನ್ನು ಕರೆದು, ‘ಏನ್ರಿ, ಏನ್ರಿ ಉತ್ತರ ಕೊಡೋದು, ಗೌಡ ಬಿಡಲ್ಲ ನಮಗೆ’ ಎಂದು ಕಟುವಾಗಿ, ಏರಿದ ಧ್ವನಿಯಲ್ಲಿ ಗದರಿಸುತ್ತಿದ್ದರು. ಹಾಗೆ ನೋಡಿದರೆ, ನಾನೊಬ್ಬ ಯಕಃಶ್ಚಿತ್. ಮನಸ್ಸು ಮಾಡಿದರೆ, ನನ್ನ ಬಾಯಿ ಮುಚ್ಚಿಸೋದು ಅಷ್ಟು ದೊಡ್ಡ ಕೆಲಸವಲ್ಲ. ಆದರೆ, ಅವರು ಹಾಗೆ ಮಾಡಲಿಲ್ಲ. ಅವರಲ್ಲಿ ನಾನು ಕಂಡ ವಿಶೇಷವಾದ ಗುಣ ಎಂದರೆ, ಅಷ್ಟೆಲ್ಲ ಹಗರಣಗಳನ್ನು ಬಿಚ್ಚಿಡುತ್ತಿದ್ದರೆ, ಸಾವಕಾಶವಾಗಿ ಕೇಳುತ್ತಿದ್ದರು. ಅದಕ್ಕೆ ಸಮಂಜಸ ಉತ್ತರ ಕೊಡದೆ ಎಂದೂ ಹೌಸ್‌ನ ಅರ್ಜನ್ಡ್ ಮಾಡ್ತಿರಲಿಲ್ಲ. ನನ್ನ ರಾಜಕೀಯ ಬದುಕಿನಲ್ಲಿ ಅರಸುಗೆ ನಾನು ಅತಿಹೆಚ್ಚು ಅಂಕಗಳನ್ನು ಕೊಡುತ್ತೇನೆ, ಅಂತಹ ದೊಡ್ಡ ಮನುಷ್ಯ.

‘ಏನ್ ಗೌಡ್ರೆ, ಹೊಸ ಸೃಷ್ಟಿ’

ಏತನ್ಮಧ್ಯೆ ನಮ್ಮೂರಿನ ಅಯ್ಯಂಗಾರರು, ಸರ್ವೋದಯ ನಾಯಕರು ಬಂದು ಆಡಳಿತ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರು- ಇಬ್ಬರನ್ನು ಒಂದೇ ವೇದಿಕೆಗೆ ಕರೆದು ಸನ್ಮಾನ ಮಾಡಬೇಕೆಂದಿದ್ದೇವೆ ಎಂದರು. ‘ನಾನಂತೂ ಅರಸು ಅವರನ್ನು ಕರೆಯಲ್ಲ, ವಿಧಾನಸಭೆಯಲ್ಲಿ ಎದುರಾ ಬದುರಾ ನಿಂತು ಹೋರಾಡುವವನು, ತಪ್ಪು ಸಂದೇಶ ರವಾನೆಯಾಗುತ್ತದೆ, ಆಗಲ್ಲ’ ಎಂದೆ. ಅವರು ‘ನಾವು ಒಪ್ಪಿಸುತ್ತೇವೆ, ನೀವು ವೇದಿಕೆಗೆ ಬರಬೇಕು’ ಎಂದರು.

‘ಅವರು ಒಪ್ಪಿದರೆ, ನನಗೇನೂ ಅಭ್ಯಂತರವಿಲ್ಲ’ ಎಂದೆ. ಊರಿನ ಜನ ಅರಸು ಅವರನ್ನು ಕಂಡು, ವಿಷಯ ಪ್ರಸ್ತಾಪಿಸಿದರಂತೆ. ಆಗ ಅರಸು, ‘ನಿಮ್ಮ ಗೌಡ್ರು ಒಪ್ಕೋತಾರೋ’ ಎಂದು ಹುಬ್ಬು ಮೇಲೇರಿಸಿ ಪ್ರಶ್ನಿಸಿದರಂತೆ. ಅಂದರೆ ವಿಧಾನ ಸಭೆಯಲ್ಲಿ ಆ ಮಟ್ಟಕ್ಕೆ ನಮ್ಮ-ಅವರ ಜಟಾಪಟಿ ನಡೆದಿತ್ತು. ಆಗ ಜನ ‘ನೀವು ಹೇಳಿದ್ರೆ ಒಪ್ಕೋತಾರೆ ಬುದ್ಧಿ’ ಎಂದರಂತೆ. ಆಗ ಅರಸು ಫೋನ್ ತಗೊಂಡು, ‘ಏನ್ ಗೌಡ್ರೆ, ಹೊಸ ಸೃಷ್ಟಿ’ ಎಂದವರು, ‘ನಮ್ಮ ನಿಮ್ಮ ಫೈಟ್ ಏನಿದ್ರು ರಾಜಕಾರಣಕ್ಕೆ ಸಂಬಂಧಿಸಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅದು ತೊಡಕಾಗಬಾರದು. ನೀವು ವಿರೋಧ ಪಕ್ಷದ ನಾಯಕರು ವಿಧಾನಸಭೆಯಲ್ಲಿ, ಹೊರಗಲ್ಲ’ ಎಂದರು ಊರಿಗೆ ಬರಲು ಒಪ್ಪಿಕೊಂಡರು. ಊರಿನ ಜನ ಬಹಳ ಹುಮ್ಮಸ್ಸಿನಿಂದ ಕಾರ್ಯಕ್ರಮ ಆಯೋಜಿಸತೊಡಗಿದರು. ಆದರೆ ಹೊಳೆನರಸೀಪುರದ ಅರಸು ಕಾಂಗ್ರೆಸ್ ಕಾರ್ಯಕರ್ತರು ಇದನ್ನು ವಿರೋಧಿಸಿದರು. ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದರು. ಅರಸು ಅದಾವುದಕ್ಕೂ ಕೇರ್ ಮಾಡದೆ, ಪೊಲೀಸರಿಗೆ ಹೇಳಿ ಅವರನ್ನು ಬಂಧಿಸಿ, ಕಾರ್ಯಕ್ರಮಕ್ಕೆ ಬಂದು ಮುಕ್ತಕಂಠದಿಂದ ಹೊಗಳಿ ಮಾತಾಡಿದರು. ಮಹಾಭಾರತದ ಶಲ್ಯನ ಕತೆ ಹೇಳಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ಮಾಡಿದರು. ಬಹಳ ದೊಡ್ಡ ಮನಸ್ಸು ಮತ್ತು ಮನುಷ್ಯತ್ವವಿದ್ದ ವ್ಯಕ್ತಿ. ನಾನು ಅವರಿಂದ ಕಲಿತದ್ದು ಅಪಾರ.
 

ವರದಿ ಮತ್ತು ಬ್ರೀಫ್ ಕೇಸ್ ನನಗೂ-ಅರಸರಿಗೂ ಪಂಥವೇ ಬಿದ್ದೋಯ್ತು. ಅವರ ಸರಕಾರದ ಮಂತ್ರಿಗಳ ಹಗರಣಗಳನ್ನು ಒಂದೊಂದಾಗಿ ಹೊರಗೆಳೆದು ಮುಜುಗರ, ಮುಖಭಂಗಕ್ಕೀಡು ಮಾಡುವುದು ಹೆಚ್ಚಾದಾಗ ಅರಸು, ನನ್ನ ಬಗೆಗಿನ ಮಾಹಿತಿ ಕಲೆಹಾಕಲು ಮುಂದಾದರು. ಹಾಸನದ ಡಿಸಿಗೆ, ಇಂಟಲಿಜೆನ್ಸ್‌ಗೆ, ಸಿಒಡಿಗೆ ನನ್ನ ವಿರುದ್ಧ ಏನೇನಿದೆ ಜಾಲಾಡಿ ಎಂದು ಆದೇಶಿಸಿದರು. ನನಗೆ ಆಸ್ತಿ ಎಷ್ಟಿದೆ, ಸಾಲ ಎಷ್ಟಿದೆ, ಎಷ್ಟು ಮಕ್ಕಳಿದ್ದಾರೆ ಎಂಬುದನ್ನೆಲ್ಲ ತರಿಸಿದರು. ಒಂದು ದಿನ ಬೆಳಗ್ಗೆ ಫೋನ್ ಮಾಡಿ, ‘ದೇವರಾಜ ಅರಸು ಸ್ಪೀಕಿಂಗ್, ಬರೋಣವಾಗುತ್ತೋ’ ಅಂದರು. ಧ್ವನಿ ಗಡುಸಾಗಿತ್ತು. ‘ಈಗ ಎದ್ದು ಕಣ್ಣುಬಿಡ್ತಿದೀನಿ, ಸ್ನಾನ ಮಾಡಿಲ್ಲ, ಕಾರಿಲ್ಲ, ಏನಿಲ್ಲ ಹೆಂಗ್ ಬರಲಿ’ ಎಂದೆ. ‘ನಂದೇ ಕಳಸ್ತೀನಿ’ ಎಂದು ಫಿಯಟ್ ಕಾರ್ ಕಳುಹಿಸಿದರು. ಅದೇ ಕಾರಲ್ಲಿ ಅವರೇ ಡ್ರೈವ್ ಮಾಡಿಕೊಂಡು ಅರಮನೆ ಮೈದಾನಕ್ಕೆ ಕರೆದುಕೊಂಡು ಹೋದರು. ವಾಕ್ ಶುರು ಮಾಡಿದೆವು. ಆಗ 7:45. ಸೂರ್ಯನ ಕಡೆ ಮುಖ ಮಾಡಿ ನಿಂತು, ‘ಲೇ ದೇವೇಗೌಡ, ನನ್ನ, ನೀನು ಭ್ರಷ್ಟ ಅನ್ನುವವರೆಗೂ ತೆಗೆದುಕೊಂಡು ಹೋಗ್ಬುಟ್ಟೆ. ನಾನು ಒಂದು ಮಾತು ಹೇಳ್ತೀನಿ ಕೇಳು, ನಾನು ಭ್ರಷ್ಟ ಅಲ್ಲ. ನೋಡು ಮೈಸೂರು ಮಹಾರಾಜರು ಕೊಟ್ಟ ಉಂಗುರ ಬಿಟ್ಟರೆ ನನ್ನ ಹತ್ರ ಏನೂ ಇಲ್ಲ. ಒಂದು ಸೈಟಿತ್ತು ಮಕ್ಕಳಿಗೆ ಮೂರು ಭಾಗ ಮಾಡಿಕೊಟ್ಟಿದ್ದೀನಿ’ ಎಂದು ಹೇಳಿ ಮನುಷ್ಯ ಸಡನ್ನಾಗಿ ವಿಷಯಾಂತರಿಸಿ, ‘ನಮ್ಮ ಮೈಸೂರು ಮಹಾರಾಜರಿಗೆ 10 ಕೋಟಿ ಸಾಲ ಇದೆ, ಏನು ಮಾಡದು ಗೊತ್ತಾಗ್ತಿಲ್ಲ’ ಅಂದರು. ‘ನಮ್ಮ ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರಿಗೆ ಒಳ್ಳೆದಾಗೋದಾದ್ರೆ, ಅದರ ಪರ ನಾನು ನಿಲ್ತೀನಿ, ಹೌಸ್‌ನಲ್ಲೂ ಪ್ರಸ್ತಾಪ ಮಾಡ್ತೀನಿ, ನೀವೇನಾದ್ರು ಹೇಳಿ ಸಾರ್, ಅದೊಂದು ವಿಷಯದಲ್ಲಿ ನಾನು ನಿಮ್ಮ ಜೊತೆ ನಿಲ್ತೀನಿ’ ಅಂದೆ.


ಹಂಗೇ ತಿರುಗಾಡಿಕೊಂಡು ಅರಮನೆ ಮೈದಾನದ ಮೂಲೆಗೆ ಹೋದೆವು. ಅಲ್ಲೊಂದು ನಾಯರ್ ಹೊಟೇಲ್ ಇತ್ತು. ಅಲ್ಲಿಗೆ ಹೋಗಿ ಕಾಫಿಗೆ ಆರ್ಡರ್ ಮಾಡಿದ್ರು. ಜೇಬಲ್ಲಿದ್ದ ಪೈಪ್ ಹೊರತೆಗೆದು ಕಿಟ್ಟ ಕುಟ್ಟಿ ಚೆಲ್ಲಿ, ತಂಬಾಕು ತುಂಬಿ ಬೆಂಕಿ ಹಚ್ಚಿದರು. ಮುಂದೆ ಡನ್ ಹಿಲ್ ಸಿಗರೇಟ್ ಪ್ಯಾಕ್ ಬಿದ್ದಿತ್ತು, ಒಂದು ಸಿಗರೇಟ್ ಎಳೆದ್ರು, ‘ಹಚ್ಚೋ ಗೌಡ’ ಅಂದ್ರು. ‘ಇಲ್ಲ ಸಾರ್, ಬಿಟ್ಟುಬಿಟ್ಟೆ’ ಅಂದೆ. ‘ಏ, ಹಚ್ಚೊ, ಇವತ್ತು ನನಗೋಸ್ಕರ ಒಂದ್ ಸೇದೊ’ ಎಂದು ಬಾಯಿಗಿಟ್ಟು ಬೆಂಕಿನೂ ಹಚ್ಚಿದರು. ಸ್ವಲ್ಪ ಹೊತ್ತಾದ ಮೇಲೆ, ‘ಏ ಗೌಡ, ಸ್ಪಷ್ಟವಾಗಿ ಮಾತನಾಡ್ತೀನಿ ಕೇಳು, ಇದು ನಿಮ್ಮ ಡಿಸಿಯಿಂದ ತರಿಸಿರದು, ಇದು ನಮ್ಮ ಇಂಟಲಿಜೆನ್ಸ್‌ನಿಂದ ತರಿಸಿದ್ದು, ಇದು ಸಿಒಡಿದ್ದು’ ಎಂದು ಹೇಳಿ ಮೂರು ಫೈಲ್‌ಗಳನ್ನು ನನ್ನ ಮುಂದೆ ಎಸೆದರು. ‘ನಿನ್ನ ಮೇಲೆ ಏನೂ ಪತ್ತೆ ಹಚ್ಚಲಿಕ್ಕೆ ಸಾಧ್ಯವಾಗಿಲ್ವಲ್ಲೋ, ನಿನ್ನ ತಲೆ ಮೇಲೆ ಒಂದು ಲಕ್ಷದ ಮೂವತ್ತು ಸಾವಿರ ಸಾಲ ಇದೆಯಲ್ಲೋ, ಆರು ಮಕ್ಕಳಿದಾವೆ, ಆ ಮಕ್ಕಳ ಬಾಯಿಗೆ ಮಣ್ಣಾಕ್ತಿಯಾ. ಇಂದಿರಾ ಗಾಂಧಿ ಅವರಪ್ಪನ ಮನೆಯಿಂದ ತಂದು ರಾಜಕಾರಣ ಮಾಡ್ತಳಾ, ಏನ್ ನಿಮ್ಮ ವೀರೇಂದ್ರ ಪಾಟೀಲು ಅವರ ತಾತನ ಮನೆಯಿಂದ ತಂದಾಕ್ತರ. ಬುದ್ಧಿ ಇದೆಯೇನೋ ನಿಂಗೆ’ ಅಂದು ಒಂದು ಬ್ರೀಫ್ ಕೇಸ್ ತೆಗೆದು ನನ್ನ ಮುಂದಿಟ್ಟು, ‘ತಗೊಂಡೋಗಿ.... ಮೊದಲು ಆ ಸಾಲ ತೀರಿಸು, ಮಕ್ಕಳನ್ನ ಚೆನ್ನಾಗಿ ಓದಿಸು’ ಅಂದರು. ನನ್ನ ಕಣ್ಣಲ್ಲಿ ನೀರು... ತಡೆಯಕ್ಕಾಗಲಿಲ್ಲ. ನನ್ನ ಹಿರಿಯಣ್ಣನ ಥರ ಬುದ್ಧಿ ಹೇಳಿದರು. (ಇದನ್ನು ಹೇಳುವಾಗ ಗೌಡರು ನಿಜಕ್ಕೂ ಕಣ್ಣೀರಾಕುತ್ತಿದ್ದರು, ಟವಲ್‌ನಿಂದ ಒರೆಸಿಕೊಳ್ಳುತ್ತಿದ್ದರು). 

(ಮುಂದುವರಿಯುವುದು)
 

share
ನಿರೂಪಣೆ: ಬಸು ಮೇಗಲ್ಕೇರಿ
ನಿರೂಪಣೆ: ಬಸು ಮೇಗಲ್ಕೇರಿ
Next Story
X