ಚುಟಕು ಸುದ್ದಿಗಳು
ನಾಳೆ ಮಾನವೀಯ ಐಕ್ಯ ಸಂದೇಶ ಯಾತ್ರೆ
ಕಾಸರಗೋಡು, ಫೆ.17: ಯುವ ಜೆಡಿಯು ಕೇರಳ ರಾಜ್ಯಾಧ್ಯಕ್ಷ ಸಲೀಮ್ ಮಡವೂರು ನೇತೃತ್ವದಲ್ಲಿ ‘ಭಯಮುಕ್ತ ಸಮಾಜ ಯುವ ಜನರು ಕಾವಲು’ ಎಂಬ ಘೋಷಣೆಯೊಂದಿಗೆ ನಡೆಯುವ ‘ಮಾನವೀಯ ಐಕ್ಯ ಸಂದೇಶ ಯಾತ್ರೆ’ ಫೆ.19ರಂದು ಕುಂಬಳೆಯಿಂದ ಆರಂಭಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಫೆ.29ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.
ಫೆ.19ರಂದು ಸಂಜೆ 4ಕ್ಕೆ ಕುಂಬಳೆಯಲ್ಲಿ ನಡೆಯುವ ಸಮಾರಂಭದಲ್ಲಿ ಜನತಾದಳ(ಯು) ರಾಜ್ಯಾಧ್ಯಕ್ಷ ಎಂ.ಪಿ. ವಿರೇಂದ್ರ ಕುಮಾರ್ ಜಾಥಾಕ್ಕೆ ಚಾಲನೆ ನೀಡುವರು. ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಾವೇದ್ ರೋಜ್ ಅತಿಥಿಯಾಗಿ ಪಾಲ್ಗೊಳ್ಳುವರು.
ನಾಳೆ ಉಚಿತ ನೇತ್ರ ಚಿಕಿತ್ಸಾ ಶಿಬಿರ
ಬಜ್ಪೆ, ಫೆ.17: ಸ್ವಾಮಿ ವಿವೇಕಾನಂದ ಸೇವಾಸಂಸ್ಥೆ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಸಂಚಾರಿ ನೇತ್ರ ಘಟಕ, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಲಯನ್ಸ್ ಕ್ಲಬ್ ನೀರುಡೆ-ಮುಚ್ಚೂರು ಇವುಗಳ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಫೆ.19ರಂದು ಬೆಳಗ್ಗೆ 9:30ರಿಂದ 12:30ರವರೆಗೆ ಬಜ್ಪೆ ಗ್ರಾಪಂ ಸಭಾಭವನದಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.
ತಿರುಮಲೇಶ್ವರ ಭಟ್ಟರಿಗೆ ಅಭಿನಂದನೆ
ಉಡುಪಿ, ಫೆ.17: ಬಹುಮುಖ ಪ್ರತಿಭೆ ನಿವೃತ್ತ ಅಧ್ಯಾಪಕ, ತಂತ್ರಾಂಶ ಪರಿಣಿತ ಡಾ.ನೀರ್ಕಜೆ ತಿರುಮಲೇಶ್ವರ ಭಟ್ಟರ ಅಭಿನಂದನಾ ಸಮಾರಂಭ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಫೆ.21ರಂದು ನಡೆಯಲಿದೆ. ಅಂದು ಬೆಳಗ್ಗೆ 9:30ಕ್ಕೆ ಡಾ.ಕೆ.ಎಸ್.ಭಟ್ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಕುಲಪತಿ ಡಾ.ಬಿ.ವಿವೇಕ ರೈ ಅಭಿನಂದನಾ ಗ್ರಂಥ ಅನಾವರಣ ಮಾಡುವರು. ಸಂಜೆ 5ಕ್ಕೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ದಿಗಂತ್ ವಿ.ಎಸ್: ಸ್ಕೇಟಿಂಗ್ ಪದಕ
ಸುಬ್ರಹ್ಮಣ್ಯ, ಫೆ.17: ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ ಮಂಗಳೂರು ಕದ್ರಿ ಪಾರ್ಕ್ ಸಮೀಪದ ಸ್ಕೇಟಿಂಗ್ ರಿಂಕ್ ಹಾಗೂ ಪಣಂಬೂರು ಬೀಚ್ ರೋಡ್‌ನಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಅಂತರ್ ಶಾಲಾ ಸ್ಕೇಟಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ಪುತ್ತೂರು ಬೆಥನಿ ಹಿರಿಯ ಪ್ರಾಥಮಿಕ ಶಾಲೆಯ 2ನೆ ತರಗತಿ ವಿದ್ಯಾರ್ಥಿ ದಿಗಂತ್ ವಿ ಎಸ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿರುತ್ತಾರೆ. ಅವರು ಎಸ್‌ಸಿಡಿಸಿಸಿ ಬ್ಯಾಂಕಿನ ಕಬಕ ಶಾಖಾ ವ್ಯವಸ್ಥಾಪಕ ವಿಶ್ವನಾಥ ಎಸ್ ಹಾಗೂ ಪುತ್ತೂರಿನ ಕ್ಯಾಂಪ್ಕೊ ಚಾಕಲೇಟ್ ಪ್ಯಾಕ್ಟರಿಯ ಉದ್ಯೋಗಿ ವೀಣಾ ಕುಮಾರಿ ದಂಪತಿಗಳ ಪುತ್ರ. ಮಂಗಳೂರಿನ ಅಂತರಾಷ್ಟ್ರೀಯ ಸ್ಕೇಟರ್ ಮಹೇಶ್ ಕುಮಾರ್ ಮತ್ತು ಪುತ್ತೂರಿನ ತರಬೇತುದಾರ ಸುರೇಶ್‌ಕುಮಾರ್ ಶಿಷ್ಯ.
ಕರಾವಳಿ ಕಾಲೇಜಿಗೆ ಶೇ. 100 ಫಲಿತಾಂಶ
ಮಂಗಳೂರು, ಫೆ.17: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿ.ಎಡ್. ಪಬ್ಲಿಕ್ ಪರೀಕ್ಷೆಯಲ್ಲಿ ಕೊಟ್ಟಾರ ಚೌಕಿಯ ಕರಾವಳಿ ಶಿಕ್ಷಣ ಮಹಾ ವಿದ್ಯಾಲಯ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 92 ವಿದ್ಯಾರ್ಥಿಗಳ ಪೈಕಿ 54 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಮೂವರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ಅಧಿಕಾರ ಸ್ವೀಕಾರ
ಉಡುಪಿ, ಫೆ.17: ಕುಂದಾಪುರ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿಯಾಗಿ ಮಂಜುನಾಥ ಎಂ.ಎಲ್. ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ.
ಫೆ.27: ಹಳೆ ವಿದ್ಯಾರ್ಥಿಗಳ ಸಮ್ಮಿಲನ
ಸುಳ್ಯ, ಫೆ.17: ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಫೆ.27ರಂದು ಸಂಜೆ 5 ಗಂಟೆಗೆ ಮಡಿಕೇರಿಯ ಹೋಟೆಲ್ ಮಯೂರ ವ್ಯಾಲಿವ್ಯೆನಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲ ಡಾ. ಎನ್.ಎ.ಜ್ಞಾನೇಶ್ ತಿಳಿಸಿದ್ದಾರೆ.
ಶಕ್ತಿ ಪತ್ರಿಕೆಯ ಜನರಲ್ ಮ್ಯಾನೇಜರ್ ಚಿದ್ವಿಲಾಸ ಸಮ್ಮಿಲನ ಉದ್ಘಾಟಿಸಲಿದ್ದು, ಅಕಾಡಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾಪ್ರಸಾದ್ ಕೆ.ವಿ. ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನಲ್ಲಿ 28 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಕಾಡಮಿಕ್ ಡೀನ್ ಡಾ.ಶ್ರೀಧರ್ ಮತ್ತು ವಿಜಯ ಕೆ. ಅವರನ್ನು ಸನ್ಮಾನಿಸಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಉಪ ಪ್ರಾಂಶುಪಾಲ ಡಾ. ಎಚ್.ಆರ್.ಶಿವಕುಮಾರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ.ಸೌಮ್ಯಾ ಎನ್.ಜೆ., ಕಾರ್ಯದರ್ಶಿ ಮಹಾಬಲ ಕಿರಣ್ ಎ.ಎಸ್. ಉಪಸ್ಥಿತರಿದ್ದರು
ಮುಸ್ಲಿಮ್ ಲೀಗ್- ಜಿಲ್ಲಾ ಸಮಿತಿ ಸಭೆ
ಮಂಗಳೂರು, ಫೆ. 17: ದ.ಕ. ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಜಿಲ್ಲಾ ಸಮಿತಿ ಸಭೆಯು ಇತ್ತೀಚೆಗೆ ಜಿಲ್ಲಾಧ್ಯಕ್ಷ ಅಹ್ಮದ್ ಜಮಾಲ್‌ರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ ಜಾತ್ಯತೀತ ಪಕ್ಷಕ್ಕೆ ಬೆಂಬಲ ನೀಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ರಮಾನಾಥ ರೈ ಸಂಘ ಪರಿವಾರದೊಂದಿಗೆ ಕೈಜೋಡಿಸಿ ಜಿಲ್ಲೆಯಲ್ಲಿ ಮುಸ್ಲಿಮರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸುತ್ತಿದೆ ಎಂದು ಸಭೆ ಆಪಾದಿಸಿತು.
ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಶೀರ್ ಉಳ್ಳಾಲ್, ಎಂ.ಎ.ಅಶ್ರಫ್ ಬೆಂಗರೆ, ಹಾಜಿ ಕೆ. ಇಬ್ರಾಹೀಂ ಬೆಂಗರೆ, ಪಿ.ಪಿ.ಅಬ್ದುರ್ರಹ್ಮಾನ್ ಬಾವ ಮತ್ತು ಡಿ. ಬಾವ ಮೊದಲಾದವರು ಉಪಸ್ಥಿತರಿದ್ದರು.
ಚುನಾವಣಾ ವೀಕ್ಷಕರಿಂದ ಪರಿಶೀಲನೆ
ಮೂಡುಬಿದಿರೆ, ಫೆ.17: ಮೂಡುಬಿದಿರೆ ವಿಧಾನ ಸಭಾಕ್ಷೇತ್ರದ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿರುವ ಕೆಎಎಸ್ ಅಧಿಕಾರಿ, ಬೆಂಗಳೂರು ಸಂಜಯ ಗಾಂಧಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜ್ ಮಂಗಳವಾರ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೈವಿಧ್ಯಮಯ ಕಾರ್ಯಕ್ರಮ
ಪುತ್ತೂರು, ಫೆ.17: ಪುಣಚ ಬೈಲುಗುತ್ತಿನ ದೈವಸ್ಥಾನದಲ್ಲಿ ಶಮಾ ಫರ್ವೀನ್ ತಾಜ್ ನಿರ್ದೇಶನದ ಕಲಾಸೃಷ್ಟಿ ತಂಡದಿಂದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆಯಿತು.
ತಂಡದ ಹಿರಿಯ ಜಾದೂಗಾರ್ತಿ ಮುಬೀನಾ ಫರ್ವೀನ್‌ತಾಜ್‌ರ ‘ಕಿಚನ್ ಮ್ಯಾಜಿಕ್’, ‘ರೈತ ಗೀತೆ’ ಗಮನಸೆಳೆಯಿತು. ತಂಡದ ಕಿರಿಯ ಸದಸ್ಯ ರೋಶನ್ ಶರೀರ ಜಾದೂ ಪ್ರದರ್ಶನ, ಹಾಡು ಪ್ರೇಕ್ಷಕರನ್ನು ಆಕರ್ಷಿಸಿತು. ವೈಷ್ಣವಿ ಹಾಗೂ ಅನುಶ್ರೀರವರ ಜನಪದ ಹಾಡು ಮತ್ತು ನೃತ್ಯಗಳು ಮನರಂಜಿಸಿದವು.
ಮಹೇಶ್ ಕಾಲೇಜ್‌ನಲ್ಲಿ ರಕ್ತದಾನ ಶಿಬಿರ
ಮಂಗಳೂರು, ಫೆ.17: ನಗರದ ಮಹೇಶ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ರಾಷ್ಟೀಯ ಸೇವಾ ಯೋಜನಾ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಎಜೆ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಸಹಯೋಗ ದೊಂದಿಗೆ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ರಕ್ತನಿಧಿ ವಿಭಾಗದ ಡಾ. ಅರವಿಂದ್‌ಪಿ., ರಕ್ತದಾನದ ಮಹತ್ವ ಮತ್ತು ಅಗತ್ಯದ ಕುರಿತು ಮಾಹಿತಿ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆರಾಲ್ಡ್ ಫೆೆರ್ನಾಂಡಿಸ್ ವಹಿಸಿದ್ದರು.
ಕೋಟಿಮುರದಲ್ಲಿ ಸಮುದಾಯ ಭವನ ಉದ್ಘಾಟನೆ
ಮಂಗಳೂರು, ಫೆ.17: 2012-13ನೆ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ಕ್ರೊಢೀಕೃತ ಅನುದಾನದಿಂದ ಕುಲಶೇಖರದ ಕೋಟಿಮುರದಲ್ಲಿ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಸಮುದಾಯ ಭವನವನ್ನು ಶಾಸಕ ಜೆ.ಆರ್.ಲೋಬೊ ಇತ್ತೀಚೆಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮನಪಾ ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಮನಪಾ ಸದಸ್ಯ ಭಾಸ್ಕರ್ ಕೆ., ಗುತ್ತಿಗೆದಾರ ನೆಲ್ಸನ್ ಮೊಂತೆರೊ, ಯುವಕಾಂಗ್ರೆಸ್ ಉಪಾಧ್ಯಕ್ಷ ರಮಾನಂದ ಪೂಜಾರಿ, ರಾಮ, ವಿಶ್ವನಾಥ್, ವಾಲ್ಟರ್ ಡಿಕುನ್ಹ, ಆಲ್ವಿನ್ ರೇಗೊ, ಆಲ್ವಿನ್ ಪಾಯಸ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸತೀಶ್ ನಿರೂಪಿಸಿದರು.
ಎಸ್ಸೆಸ್ಸೆಫ್ ಮಾಣಿ ಸೆಕ್ಟರ್‌ನಿಂದ ಅನುಸ್ಮರಣಾ ಕಾರ್ಯಕ್ರಮ
ಮಾಣಿ, ಫೆ.17: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ ಬುಡೋಳಿಯ ಶೇರಾ ಎಂಬಲ್ಲಿ ಅನುಸ್ಮರಣಾ ಕಾರ್ಯಕ್ರಮ ಹಾಗೂ ಬುರ್ದಾ ಮಜ್ಲಿಸ್ ಜರಗಿತು.ಇಬ್ರಾಹೀಂ ಹಾಜಿ ಶೇರಾ ಅಧ್ಯಕ್ಷತೆ ವಹಿಸಿದ್ದರು. ಸುಲೈಮಾನ್ ಸಅದಿ ಪಾಟ್ರಕೋಡಿ ಉದ್ಘಾಟಿಸಿದರು. ಟಿ.ಎಂ.ಮುಹಿಯುದ್ದೀನ್ ಕಾಮಿಲ ಸಖಾಫಿ ತೋಕೆ ಮುಖ್ಯ ಭಾಷಣ ಮಾಡಿದರು. ಅತಿಥಿಗಳಾಗಿ ದಾರುಲ್ ಇರ್ಶಾದ್ ನಿರ್ವಹಣಾ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಸಖಾಫಿ ಮಾಣಿ, ಹನೀಫ್ ಸಖಾಫಿ ಪೇರಮೊಗರು, ಮದ್ರಸಾ ಅಧ್ಯಕ್ಷ ಹಬೀಬ್ ಶೇರಾ, ಪುತ್ತುಂಞಾಕ ಶೇರಾ, ಇಬ್ರಾಹೀಂ, ಕಾಸಿಂ ಮುಸ್ಲಿಯಾರ್ ಸೂರ್ಯ, ಇಸ್ಮಾಯೀಲ್‌ಹಾಜಿ ಕಲ್ಲಾಜೆ, ರಶೀದ್ ಸಖಾಫಿ ಗಡಿಯಾರ್, ಉಮರುಲ್ ಫಾರೂಕ್ ಸೂರಿಕುಮೇರು, ರಫೀಕ್ ಬೀಟಿಗೆ, ಮುಸ್ತಫಾ ಪೆರ್ನೆ, ಕಲಂದರ್ ಶಾಫಿ ಬುಡೋಳಿ, ರಿಯಾಝ್ ಗಡಿಯಾರ್, ಅಶ್ರಫ್ ಜಿ ಎಂ ಪೇರಮೊಗರು, ಯೂಸುಫ್ ನೇರಳಕಟ್ಟೆ, ಲತೀಫ್ ಸಅದಿ ಶೇರಾ,ಇಬ್ರಾಹೀಂ ಖಲೀಲ್ ಮದನಿ ಶೇರಾ, ರಫೀಕ್ ಮದನಿ ಶೇರಾ ಭಾಗವಹಿಸಿದರು,
ಸಲೀಂ ಮಾಣಿ ‘ಸುಲ್ತಾನುಲ್ ಉಲಮಾ’ ಎಂಬ ಕವನ ವಾಚಿಸಿದರು. ಮಹ್‌ಶೂಕೆ ರಸೂಲ್ ಶಾಂತಿನಗರ ಕಂಬಳಬೆಟ್ಟು ಬುರ್ದಾ ತಂಡ ಬುರ್ದಾ ಆಲಾಪನೆ ಮಾಡಿತು.ತಸ್ನೀಮ್, ತನ್ವೀರ್, ನೌಶಾದ್, ನಅತೇ ಶರೀ ಹಾಡಿದರು. ಅಸ್ಸೈಯದ್ ಹಂಝ ಹಾದಿ ತಂಙಳ್ ದುಆ ನೆರವೇರಿಸಿದರು. ಸೆಕ್ಟರ್ ಅಧ್ಯಕ್ಷ ಹಾರಿಸ್ ಮದನಿ ಸ್ವಾಗತಿಸಿದರು. ಹಾರಿಸ್ ಮದನಿ ಪಾಟ್ರಕೋಡಿ ಕಾರ್ಯಕ್ರಮ ನಿರೂಪಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಗಡಿಯಾರ್ ವಂದಿಸಿದರು.
ಕಳಪೆ ಕಾಮಗಾರಿ ಗ್ರಾಮಸ್ಥರಿಂದ ದೂರು
ಸುಳ್ಯ, ಫೆ.17: ಕಳಂಜ ಗ್ರಾಮದ ತಂಟೆಪ್ಪಾಡಿ - ನಾಲ್ಗುತ್ತು ರಸ್ತೆಯ 55 ಮೀಟರ್ ಉದ್ದಕ್ಕೆ ಕಾಂಕ್ರೀಟಿಕರಣ ಮಾಡಲಾಗಿದ್ದು, ಕಾಂಕ್ರೀಟ್ ರಸ್ತೆಯಿಂದ ಮಣ್ಣಿನ ರಸ್ತೆಗೆ ಇಳಿಸುವಲ್ಲಿ ಸರಿಯಾಗಿ ಕಾಮಗಾರಿಯನ್ನು ಮುಗಿಸದೇ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಗ್ರಾಮಸ್ಥರು ಜಿಪಂ ಸಿಇಒಗೆ ದೂರು ಸಲ್ಲಿಸಿದ್ದಾರೆ.
ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಕಾಮಗಾರಿಯನ್ನು ಸರಿಯಾಗಿ ಮಾಡದಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಕಾಂಕ್ರೀಟ್ ರಸ್ತೆಯಿಂದ ಇಳಿಯುವಲ್ಲಿ ಹೊಂಡ ನಿರ್ಮಾಣವಾಗಿದ್ದು ಬೈಕ್ ಹಾಗೂ ಇತರ ವಾಹನಗಳು ಅಪಘಾತಕ್ಕೀಡಾಗುವ ಸಂಭವವಿದೆ. ಈ ಬಗ್ಗೆ ಗ್ರಾಮಸ್ಥರು ಗ್ರಾಮ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದು, ಒಂದು ತಿಂಗಳಲ್ಲಿ ಸರಿಪಡಿಸಿಕೊಡುವ ಭರವಸೆಯನ್ನು ಇಂಜಿನಿಯರ್ ನೀಡಿದ್ದರು. ಆದರೆ ಗ್ರಾಮ ಸಭೆೆ ಕಳೆದು ನಾಲ್ಕು ತಿಂಗಳಾದರೂ ಈ ಬಗ್ಗೆ ಗಮನ ಹರಿಸದ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ರಸ್ತೆಯನ್ನು ಕೂಡಲೇ ಸರಿಪಡಿಸಿ ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಜಿಪಂ ಸಿಇಒಗೆ ಮನವಿ ಸಲ್ಲಿಸಿದ್ದಾರೆ.







