ಸವಿವರ ಯೋಜನಾ ವರದಿ ಸಿದ್ಧ
‘ಬೆಂಗಳೂರು ಉಪನಗರ ರೈಲು ಸಂಚಾರ ವ್ಯವಸ್ಥೆ’
ಬೆಂಗಳೂರು, ಫೆ.17: ಬೆಂಗಳೂರು ಉಪನಗರ ರೈಲು ಸಂಚಾರ ವ್ಯವಸ್ಥೆ ಅನುಷ್ಠಾಗೊಳಿಸುವ ಮೂಲಕ ಬೆಂಗಳೂರು ಸುತ್ತಲಿನ ಇತರ ನಗರಗಳು ಹಾಗೂ ಪಟ್ಟಣಗಳೊಂದಿಗೆ ಜೋಡಿಸುವ ಯೋಜನೆಗೆ ಭಾರತ ಸರಕಾರದ ರೈಲ್ವೆ ಮಂತ್ರಾಲಯದ ಸಹಮತಿಯನ್ನು ಪಡೆಯಲು ರಾಜ್ಯ ಸರಕಾರವು ತನ್ನ ಪ್ರಯತ್ನ ಮುಂದುವರಿಸಿದೆ.
ರಾಜ್ಯ ಸರಕಾರವು ತಾನಾಗಿಯೇ ಬೆಂಗಳೂರು ಉಪನಗರ ರೈಲು ಯೋಜನೆಯ ಒಂದನೆ ಹಂತವನ್ನು ಶೀಘ್ರ ಅನುಷ್ಠಾನಗೊಳಿಸುವ ಸಲುವಾಗಿ ಸವಿವರ ಯೋಜನಾ ವರದಿ(ಡಿಪಿಆರ್)ಯೊಂದನ್ನು ಸಿದ್ಧಪಡಿಸಿದೆ. ಕಳೆದ ಸಾಲಿನ ಆ.14ರಂದು ರೈಲ್ವೆ ರಾಜ್ಯ ಸಚಿವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಸವಿವರ ಯೋಜನಾ ವರದಿಯನ್ನು ಒಪ್ಪಿಸುವಂತೆ ಕೋರಿದ್ದರು.
ರೈಟ್ಸ್ ಸಂಸ್ಥೆಯವರು ಈ ಸಂಬಂಧ ಕರಡು ಸವಿವರ ಯೋಜನಾ ವರದಿಯನ್ನು ತಯಾರಿಸಿದ್ದು, ಈ ವರದಿಯನ್ನು ರೈಲ್ವೆ ಮಂತ್ರಾಲಯದ ರೈಲ್ವೆ ಮಂಡಳಿಯ ಸಲಹೆಗಾರರು ಹಾಗೂ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ(ಜನರಲ್ ಮ್ಯಾನೇಜರ್) ಅವರೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ.
ಈ ವರದಿಯ ಕುರಿತು ರೈಲ್ವೆಯ ದಂಡು ಪ್ರದೇಶದ ನಿರ್ಮಾಣ/ಯೋಜನೆಯ ಮುಖ್ಯ ಇಂಜಿನಿಯರ್ ಕೆಲವು ಅಂಶಗಳ ಮೇಲೆ ಸ್ಪಷ್ಟೀಕರಣ ಕೋರಿದ್ದು, ಅವುಗಳ ಅನುಪಾಲನೆಗಾಗಿ ರೈಟ್ಸ್ ಸಂಸ್ಥೆಯವರು ಪುನರ್ ಪರಿಶೀಲಿಸಿ ಅಗತ್ಯ ಅನುಪಾಲನಾ ವರದಿಯನ್ನು ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಹಾಗೂ ಬೆಂಗಳೂರಿನ ನೈಋತ್ಯ (ಸೌತ್ ವೆಸ್ಟ್ರನ್) ರೈಲ್ವೆ ಮುಖ್ಯ ಇಂಜಿನಿಯರ್(ನಿರ್ಮಾಣ/ಯೋಜನಾ)ಗೆ ಪ್ರಸ್ತುತ ಸಾಲಿನ ಜ.27ರಂದು ಸಲ್ಲಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ರೈಲ್ವೆ ಸಚಿವರಿಗೆ ಪತ್ರ ಬರೆದು ಈ ಯೋಜನೆ ಅನುಷ್ಠಾನದಲ್ಲಿ ಎದುರಾಗಬಹುದಾದ ಕೆಲವು ಗುರುತರ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಸರಿಯಾದ ಹಂತದಲ್ಲಿ ರಾಜ್ಯ ಸರಕಾರವು ತೆಗೆದುಕೊಳ್ಳುವುದಾಗಿ ತಿಳಿಸಿ ಈ ಪ್ರಸ್ತಾವನೆಗೆ ಒಪ್ಪಿಗೆಯನ್ನು ನೀಡಬೇಕೆಂದು ಕೋರಿದ್ದಾರೆ.
ಬೆಂಗಳೂರಿನ ಬಹು ದಿನದ ಬೇಡಿಕೆಯಾದ ಈ ಯೋಜನೆಗೆ ಭಾರತ ಸರಕಾರದ ಸಹಮತಿಯನ್ನು ನೀಡಬೇಕೆಂದು ಕೋರಿ ಫೆ.4ರಂದು ರೈಲ್ವೆ ಸಚಿವರು ಬೆಂಗಳೂರಿಗೆ ಭೇಟಿ ನೀಡದಿದ್ದಾಗ ಭಿನ್ನವತ್ತಳೆಯನ್ನು ಅರ್ಪಿಸಲಾಗಿದೆ ಎಂದು ರಾಜ್ಯ ನಗರ ಭೂ ಸಾರಿಗೆ ನಿರ್ದೇಶನಾಲಯದ ಪ್ರಕಟನೆ ತಿಳಿಸಿದೆ.





