ಶೋಷಿತರನ್ನು ಅಧಿಕಾರದಿಂದ, ಶಿಕ್ಷಣದಿಂದ ವಂಚಿಸಲು ಸಂಘಪರಿವಾರ ಷಡ್ಯಂತ್ರ: ಡಾ.ಜಿ.ರಾಮಕೃಷ್ಣ
‘ಸಮಾಜ ಪರಿವರ್ತಿಸುವ ಶಿಕ್ಷಣಕ್ಕಾಗಿ ಪ್ರಜಾತಾಂತ್ರಿಕ ಕ್ಯಾಂಪಸ್‌ಗಳು; ವರ್ತಮಾನದ ಸವಾಲುಗಳು’ ವಿಚಾರ ಸಂಕಿರಣ

ಬೆಂಗಳೂರು, ಫೆ.17: ದೇಶದ ಶೋಷಿತ ಸಮುದಾಯಗಳನ್ನು ಅಧಿಕಾರದಿಂದ ವಂಚಿತರನ್ನಾಗಿ ಮಾಡುವ ಉದ್ದೇಶದಿಂದ ಸಂಘಪರಿವಾರ ನಿರಂತರವಾಗಿ ಷಡ್ಯಂತ್ರಗಳನ್ನು ರೂಪಿಸುತ್ತಿದ್ದು, ಅದರ ಭಾಗವಾಗಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗಿದೆ ಎಂದು ಚಿಂತಕ ಡಾ.ಜಿ.ರಾಮಕೃಷ್ಣ ಆರೋಪಿಸಿದ್ದಾರೆ.
ಕರ್ನಾಟಕ ವಿದ್ಯಾರ್ಥಿ ಸಂಘಟನೆ ನಗರದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಹೋರಾಟಗಾರ ರೋಹಿತ್ ವೇಮುಲಾ ನೆನಪಿನಲ್ಲಿ ‘ಸಮಾಜ ಪರಿವರ್ತಿಸುವ ಶಿಕ್ಷಣಕ್ಕಾಗಿ ಪ್ರಜಾತಾಂತ್ರಿಕ ಕ್ಯಾಂಪಸ್‌ಗಳು; ವರ್ತಮಾನದ ಸವಾಲುಗಳು’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಭಾರತದಲ್ಲಿ ಕೇವಲ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವವಿದ್ದು, ನಿಜವಾದ, ಜನಪರವಾದ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡುವವರ ಮೇಲೆ ಕೋಮುವಾದಿಗಳು ಹಲ್ಲೆ ನಡೆಸುತ್ತಿದ್ದಾರೆ. ಮುಖ್ಯವಾಗಿ ದಲಿತ ಹಾಗೂ ಹಿಂದುಳಿದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಂದೆ ಬರದಂತೆ ತಡೆಯುವುದೇ ಅವರ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ದೇಶದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳು ಕೋಮುವಾದಿಗಳ ಹಿಡಿತದಲ್ಲಿದ್ದು, ಇಲ್ಲೆಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುವಂತಹ ಕಾರ್ಯದಲ್ಲಿ ತೊಡಗಿವೆ. ತಮಗಾಗುತ್ತಿರುವ ಅನ್ಯಾಯದ ಕುರಿತು ಪ್ರತಿಭಟಿಸುವವರನ್ನು ಕೋಮುವಾದಿಗಳು ದೇಶದ್ರೋಹದ ಪಟ್ಟ ಕಟ್ಟುತ್ತಿದ್ದಾರೆ ಎಂದು ಡಾ.ಜಿ.ರಾಮಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
ಮದ್ರಾಸ್ ಐಐಟಿ ಅಂಬೇಡ್ಕರ್ ಹಾಗೂ ಪೆರಿಯಾರ್ ಸ್ಟಡಿ ಸೆಂಟರ್ ವಿದ್ಯಾರ್ಥಿ ರಮೇಶ್ ಮಾತನಾಡಿ, ಇಂದು ಭಾರತ ಕೋಮುವಾದಿಗಳ ಆಳ್ವಿಕೆಯಲ್ಲಿದ್ದು, ಇವರಿಗೆ ದೇಶದ ಜನತೆಯ ಹಿತಕ್ಕಿಂತ ಸಾಮ್ರಾಜ್ಯಶಾಹಿಗಳ ಹಿತವೇ ಮುಖ್ಯವಾಗಿದೆ. ಹೀಗಾಗಿ ಕೋಮುವಾದಿಗಳ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳೆಂಬ ಪಟ್ಟ ಕಟ್ಟಲಾಗುತ್ತಿದೆ ಎಂದು ತಿಳಿಸಿದರು.
ಮದ್ರಾಸ್ ಐಐಟಿನಲ್ಲಿ ಅಂಬೇಡ್ಕರ್ ಹಾಗೂ ಪೆರಿಯಾರ್ ಸ್ಟಡಿ ಸೆಂಟರ್ ಮಾಡಿಕೊಂಡು ದೇಶದ ರಾಜಕೀಯ ಪರಿಸ್ಥಿತಿಯ ಕುರಿತು ಚರ್ಚಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಜನವಿರೋಧಿ ನೀತಿಯ ಕುರಿತು ಗಂಭೀರವಾಗಿ ವಿಮರ್ಶೆಗಳನ್ನು ಮಾಡುತ್ತಿದ್ದೆವು. ಇದನ್ನೇ ನೆಪವಾಗಿಟ್ಟು ನಮ್ಮ ಸ್ಟಡಿ ಸೆಂಟರ್‌ನ್ನು ಸರಕಾರ ನಿಷೇಧಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಶ್ರೀಕಾಂತ್, ರಾಷ್ಟ್ರೀಯ ಕಾನೂನು ಶಾಲೆಯ ಪ್ರದೀಪ್ ರಾಮಾವತ್, ಪ್ರಜಾತಾಂತ್ರಿಕ ಜನರ ವೇದಿಕೆಯ ಶ್ರೀಧರ್, ಕರ್ನಾಟಕ ಜನಶಕ್ತಿಯ ಗೌರಿ ಮತ್ತಿತರರಿದ್ದರು.





