ಫೆ.20ರಂದು ಎರಡನೆ ಹಂತದ ಮತದಾನ
ಜಿಪಂ-ತಾಪಂ ಚುನಾವಣೆ
ಬೆಂಗಳೂರು, ಫೆ.17: ಜಿಲ್ಲಾ ಮತ್ತು ತಾಲೂಕು ಪಂಚಾ ಯತ್‌ನ ಎರಡನೆ ಹಂತದ ಮತದಾನವು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಉಡುಪಿ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೀದರ್, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಫೆ.20ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆರ್.ಚಂದ್ರಶೇಖರ್ ತಿಳಿಸಿದ್ದಾರೆ.
ಚುನಾವಣಾ ಪ್ರಚಾರವು ಮತದಾನ ಆರಂಭಗೊಳ್ಳುವ 48 ಗಂಟೆಗಳ ಮುಂಚಿತವಾಗಿ ಅಂದರೆ ಫೆ.18ರಂದು ಬೆಳಗ್ಗೆ 7 ಗಂಟೆಗೆ ಮುಕ್ತಾಯಗೊಳ್ಳಲಿದೆ. ನಿಗದಿತ ಸಮಯ ಮುಗಿದ ನಂತರ, ಯಾವುದೇ ರಾಜಕೀಯ ಪಕ್ಷಗಳಾಗಲಿ, ಅಭ್ಯರ್ಥಿಯಾಗಲಿ ಅಥವಾ ಅವರ ಪರವಾಗಿ ಯಾರೇ ಆಗಲಿ ಬಹಿರಂಗವಾಗಿ ಚುನಾವಣಾ ಪ್ರಚಾರ ಮಾಡುವಂತಿಲ್ಲ ಎಂದು ಅವರು ಸೂಚನೆ ನೀಡಿದ್ದಾರೆ.
ಅಲ್ಲದೆ, ಚುನಾವಣಾ ಪ್ರಚಾರದ ಜಾಹೀರಾತುಗಳನ್ನು ಪಕ್ಷದಿಂದಾಗಲಿ, ಅಭ್ಯರ್ಥಿಯಿಂದಾಗಲಿ ಅಥವಾ ಯಾವುದೇ ಮೂಲದಿಂದಾಗಲಿ ದಿನಪತ್ರಿಕೆಗಳಲ್ಲಿ, ದೂರದರ್ಶನ, ರೇಡಿಯೊ ಇತ್ಯಾದಿ ದೃಶ್ಯ ಮತ್ತು ಶ್ರವಣ ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





