ಅನುದಾನ ಬಿಡುಗಡೆ ಕೋರಿ ಸರಕಾರಕ್ಕೆ ಪತ್ರ: ಡಾ.ಯೂಸುಫ್
‘ವೇತನವಿಲ್ಲದೆ ಪರದಾಡುತ್ತಿರುವ ವಕ್ಫ್‌ಬೋರ್ಡ್ ಸಿಬ್ಬಂದಿ’

ಬೆಂಗಳೂರು, ಫೆ.17: ನೂತನವಾಗಿ ನೇಮಕವಾದ ಸಿಬ್ಬಂದಿಗೆ ಅನು ದಾನದ ಕೊರತೆಯಿಂದ ಕಳೆದ ಆರು ತಿಂಗಳಿಂದ ವೇತನ ನೀಡಲು ಸಾಧ್ಯವಾಗಿಲ್ಲ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಸಾಲಿನ ಜೂನ್‌ನಲ್ಲಿ 167 ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ವಕ್ಫ್‌ಬೋರ್ಡ್ ಕೇಂದ್ರ ಕಚೇರಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 67 ಸಿಬ್ಬಂದಿಗೆ ವೇತನ ಸಕಾಲಕ್ಕೆ ಸಿಗುತ್ತಿದೆ ಎಂದರು.
ಆದರೆ, ಇತರ ಜಿಲ್ಲಾ ಹಾಗೂ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 100 ಮಂದಿ ಸಿಬ್ಬಂದಿಗೆ ಕಳೆದ ಆರು ತಿಂಗಳಿಂದ ವೇತನ ನೀಡಲು ಸಾಧ್ಯವಾಗಿಲ್ಲ. 2015-16ನೆ ಸಾಲಿನ ಬಜೆಟ್‌ನಲ್ಲಿ ವಕ್ಫ್‌ಬೋರ್ಡ್‌ಗೆ ಅನುದಾನ ನೀಡಲು ಉದ್ದೇಶಿಸಲಾಗಿದ್ದು, ಈ ಸಂಬಂಧ 14 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ವಕ್ಫ್ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ವಕ್ಫ್ ಬೋರ್ಡ್‌ನಲ್ಲಿರುವ ಕೊಡುಗೆ ನಿಧಿಯಿಂದ ವೇತನವನ್ನು ಪಾವತಿಸಲು ಸದ್ಯಕ್ಕೆ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಆರು ತಿಂಗಳ ವೇತನಕ್ಕಾಗಿ 1.50 ಕೋಟಿ ರೂ.ಗಳ ಅಗತ್ಯವಿದೆ. ಹಣಕಾಸು ಇಲಾಖೆಯೂ ಆದಷ್ಟು ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಿದ್ದಲ್ಲಿ ಸಿಬ್ಬಂದಿಯ ವೇತನದ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಮುಹಮ್ಮದ್ ಯೂಸುಫ್ ತಿಳಿಸಿದರು.





