ರಣಜಿ ಟ್ರೋಫಿ: ಮುಂಬೈ ತಂಡ ಫೈನಲ್‌ಗೆ

ಪ್ರಶಸ್ತಿ ಸುತ್ತಿನಲ್ಲಿ ಸೌರಾಷ್ಟ್ರ ಎದುರಾಳಿ
ಮುಂಬೈ, ಫೆ.17: ರಣಜಿ ಕ್ರಿಕೆಟ್ ಚರಿತ್ರೆಯಲ್ಲಿ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿರುವ ಮುಂಬೈ ಫೈನಲ್‌ಗೆ ಲಗ್ಗೆ ಇಟ್ಟಿದೆ. ಕಟಕ್‌ನಲ್ಲಿ ನಡೆದ ರಣಜಿ ಟ್ರೋಫಿಯ ಎರಡನೆ ಸೆಮಿಫೈನಲ್‌ನಲ್ಲಿ ಶತಕ ಸಿಡಿಸಿದ ಮಧ್ಯಪ್ರದೇಶದ ನಮನ್ ಓಜಾ(113)ಹಾಗೂ ಹರ್‌ಪ್ರೀತ್ ಸಿಂಗ್(105) ಪಂದ್ಯವನ್ನು ಡ್ರಾಗೊಳಿಸಿ ಮುಂಬೈಗೆ ಗೆಲುವು ನಿರಾಕರಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಮುಂಬೈ ತಂಡ ಮೂರು ವರ್ಷಗಳ ಅಂತರದ ಬಳಿಕ ಫೈನಲ್‌ಗೆ ಪ್ರವೇಶಿಸಿದೆ. ರಣಜಿ ಟೂರ್ನಿಯ 82ನೆ ಆವೃತ್ತಿಯಲ್ಲಿ 45ನೆ ಬಾರಿ ಮುಂಬೈ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈಗಾಗಲೇ 40 ಬಾರಿ ರಣಜಿ ಚಾಂಪಿಯನ್ ಆಗಿರುವ ಮುಂಬೈ ಈ ವರ್ಷವೂ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ಮುಂಬೈ ತಂಡ ಫೆ.24 ರಂದು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. 2012-13ರ ಋತುವಿನಲ್ಲಿ ಈ ಎರಡು ತಂಡಗಳು ರಣಜಿ ಫೈನಲ್‌ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು.
ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲಲು 571 ರನ್ ಕಠಿಣ ಗುರಿ ಪಡೆದಿದ್ದ ಮಧ್ಯಪ್ರದೇಶ ತಂಡ 109 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 361 ರನ್ ಕಲೆ ಹಾಕಿ ಪಂದ್ಯವನ್ನು ಡ್ರಾಗೊಳಿಸಿತು.
ಐದನೆ ಹಾಗೂ ಅಂತಿಮ ದಿನವಾದ ಬುಧವಾರ ಮಧ್ಯಪ್ರದೇಶ ತಂಡ 2 ವಿಕೆಟ್ ನಷ್ಟಕ್ಕೆ 99 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿತು. ಆಟ ಆರಂಭವಾದ ಕೆಲವೇ ಸಮಯದಲ್ಲಿ ಆರಂಭಿಕ ಆಟಗಾರ ಆದಿತ್ಯ ಶ್ರೀವಾಸ್ತವ(68) ವಿಕೆಟ್ ಕಬಳಿಸಿದ ಆಲಂ ಮುಂಬೈಗೆ ಸಂಪೂರ್ಣ ಅಂಕ ಗಳಿಸುವ ವಿಶ್ವಾಸ ಮೂಡಿಸಿದ್ದರು.
ಆದರೆ, 15ನೆ ಶತಕವನ್ನು ಸಿಡಿಸಿದ ವಿಕೆಟ್‌ಕೀಪರ್-ದಾಂಡಿಗ ನಮನ್ ಓಜಾ ಮುಂಬೈಗೆ ಮೇಲುಗೈ ನಿರಾಕರಿಸಿದರು. ಇನ್ನೋರ್ವ ಶತಕವೀರ ಹರ್‌ಪ್ರೀತ್ ಸಿಂಗ್ ಅವರೊಂದಿಗೆ 4ನೆ ವಿಕೆಟ್‌ಗೆ 159 ರನ್ ಜೊತೆಯಾಟ ನಡೆಸಿದ ಓಜಾ ತಂಡಕ್ಕೆ ಆಸರೆಯಾದರು.
ಮುಂಬೈ ಬೌಲರ್‌ಗಳಾದ ಆಲಂ, ಶಾರ್ದೂಲ್ ಠಾಕೂರ್, ಬಲ್ವಿಂದರ್ ಸಂಧು ಹಾಗೂ ಅಭಿಷೇಕ್ ನಾಯರ್‌ಗೆ ಈ ಜೋಡಿಯನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಪಾರ್ಟ್-ಟೈಮ್ ಸ್ಪಿನ್ ಬೌಲರ್ ಸೂರ್ಯಕುಮಾರ್ ಯಾದವ್‌ಗೆ ವಿಕೆಟ್ ಒಪ್ಪಿಸಿದ ಓಜಾ 185 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.
ಈ ಋತುವಿನಲ್ಲಿ ಎರಡನೆ ಶತಕ ಸಿಡಿಸಿದ ಹರ್‌ಪ್ರೀತ್ ಮುಂಬೈ ಬೌಲರ್‌ಗಳನ್ನು ನಿರಾಸೆಗೊಳಿಸಿದರು.
189 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್‌ಗಳನ್ನು ಒಳಗೊಂಡ 105 ರನ್ ಗಳಿಸಿದ ಹರ್‌ಪ್ರೀತ್ ಮಧ್ಯಪ್ರದೇಶದ ಪರ ಈವರ್ಷ 15 ಇನಿಂಗ್ಸ್‌ಗಳಲ್ಲಿ 750 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಧ್ಯಪ್ರದೇಶ 5 ವಿಕೆಟ್ ನಷ್ಟಕ್ಕೆ 361 ರನ್ ಗಳಿಸಿದ್ದಾಗ ಅಂಪೈರ್‌ಗಳು ಪಂದ್ಯ ಡ್ರಾಗೊಳಿಸಲು ನಿರ್ಧರಿಸಿದರು.
ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ್ದ್ದ ಮುಂಬೈ ತಂಡ ಮೊದಲ ಇನಿಂಗ್ಸ್‌ನಲ್ಲಿ 144 ರನ್ ಮುನ್ನಡೆ ಪಡೆದ ಕಾರಣ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿತು. ಯುವ ದಾಂಡಿಗ ಶ್ರೇಯಸ್ ಐಯ್ಯರ್ ಎರಡೂ ಇನಿಂಗ್ಸ್‌ಗಳಲ್ಲಿ 90 ಹಾಗೂ 58 ರನ್ ಗಳಿಸಿ ಮತ್ತೊಮ್ಮೆ ಗಮನ ಸೆಳೆದರು. ಐದು ವಿಕೆಟ್ ಗೊಂಚಲು ಪಡೆದ ಬಲ್ವಿಂದರ್ ಸಂಧು(5-43) ಮುಂಬೈಗೆ ಮೊದಲ ಇನಿಂಗ್ಸ್‌ನಲ್ಲಿ 144 ರನ್ ಮುನ್ನಡೆ ಒದಗಿಸಿಕೊಟ್ಟಿದ್ದರು.
ಹೆಬ್ಬೆರಳು ನೋವಿನಿಂದಾಗಿ ಕ್ವಾರ್ಟರ್ ಫೈನಲ್ ಪಂದ್ಯವನ್ನು ತಪ್ಪಿಸಿಕೊಂಡಿದ್ದ ನಾಯಕ ಆದಿತ್ಯ ತಾರೆ ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗ ಸೂರ್ಯಕುಮಾರ್ ಎರಡನೆ ಇನಿಂಗ್ಸ್‌ನಲ್ಲಿ ಶತಕವನ್ನು ಸಿಡಿಸುವ ಮೂಲಕ ಮಧ್ಯಪ್ರದೇಶದ ಗೆಲುವಿಗೆ ಕಠಿಣ ಗುರಿ ನೀಡಿದರು. ಅಭಿಷೇಕ್ ನಾಯರ್ ಹಾಗೂ ಸಿದ್ದೇಶ್ ಲಾಡ್ ಅರ್ಧಶತಕದ ಕೊಡುಗೆ ನೀಡಿದ್ದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಪ್ರಥಮ ಇನಿಂಗ್ಸ್: 371
ಮುಂಬೈ ಎರಡನೆ ಇನಿಂಗ್ಸ್: 426
ಮಧ್ಯಪ್ರದೇಶ ಪ್ರಥಮ ಇನಿಂಗ್ಸ್: 227
ಮಧ್ಯಪ್ರದೇಶ ದ್ವಿತೀಯ ಇನಿಂಗ್ಸ್: 361/5
( ನಮನ್ ಓಜಾ 113, ಹರ್‌ಪ್ರೀತ್ ಸಿಂಗ್ 105, ಶ್ರೀವಾಸ್ತವ 68, ಠಾಕೂರ್ 1-46, ಯಾದವ್ 1-20)







