ಉಪಚುನಾವಣೆ: ಕಾಂಗ್ರೆಸ್ ಕಳೆದುಕೊಂಡದ್ದೇನೂ ಇಲ್ಲ
ಸಿದ್ದರಾಮಯ್ಯ ಅವರ ವಿರುದ್ಧ ಮಸಲತ್ತು ಇಂದು ನಿನ್ನೆಯದಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದು, ಅಧಿಕಾರ ಹಿಡಿದ ಬೆನ್ನಿಗೇ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಕಾಂಗ್ರೆಸ್‌ನೊಳಗಿರುವ ನಾಯಕರು ಬಹಳಷ್ಟು ಪ್ರಯತ್ನಿಸಿದ್ದರು. ‘ದಲಿತ ಮುಖ್ಯಮಂತ್ರಿ’ಯ ಬೇಡಿಕೆ ಕಾಂಗ್ರೆಸ್‌ನೊಳಗೆ ಹುಟ್ಟಿದ್ದು, ದಲಿತರ ಮೇಲಿನ ಪ್ರೀತಿಯಿಂದಲ್ಲ. ಬದಲಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗದಂತೆ ತಡೆಯುವ ಒಂದೇ ಒಂದು ಹುನ್ನಾರದಿಂದ. ಆದರೆ ವೈಯಕ್ತಿಕ ವರ್ಚಸ್ಸಿನ ಬಲದಿಂದಲೇ ಸಿದ್ದರಾಮಯ್ಯ ಅವರು ಈ ನಾಡಿನ ಮುಖ್ಯಮಂತ್ರಿಯಾದರು. ಆ ಕಾರಣದಿಂದಲೇ ಈವರೆಗೆ ಅವರು ಎಲ್ಲ ಸಂಚುಗಳನ್ನು ವಿಫಲಗೊಳಿಸಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದಾರೆ. ಇಲ್ಲವಾಗಿದ್ದರೆ, ಡಿಕೆಶಿ, ಎಸ್. ಎಂ. ಕೃಷ್ಣ ಮೊದಲಾದ ಕುಳಗಳು ಸಿದ್ದರಾಮಯ್ಯ ಅವರ ರಾಜಕೀಯ ಬದುಕನ್ನು ಎಂದೋ ಮುಗಿಸಿ ಬಿಡುತ್ತಿದ್ದರು. ಇತ್ತೀಚಿನ ಉಪಚುನಾವಣೆಯ ಫಲಿತಾಂಶದ ಬಳಿಕ, ಸಿದ್ದರಾಮಯ್ಯ ವಿರೋಧಿ ಕಾಂಗ್ರೆಸಿಗರು ಮತ್ತೆ ರೆಕ್ಕೆ ಮೂಡಿದವರಂತೆ ಆಡುತ್ತಿದ್ದಾರೆ. ಈ ಫಲಿತಾಂಶದ ಸರ್ವ ಹೊಣೆಯನ್ನು ಸಿದ್ದರಾಮಯ್ಯ ತಲೆಗೆ ಕಟ್ಟಿ, ಅವರ ಕುರ್ಚಿಯನ್ನು ಅಲುಗಾಡಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಆದರೆ ಇದು ಯಾವ ರೀತಿಯಲ್ಲೂ ಫಲಕೊಡುವ ಸಾಧ್ಯತೆಗಳಿಲ್ಲ. ಹೆಬ್ಬಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನಲ್ಲಿ ಸಿದ್ದರಾಮಯ್ಯ ಅವರ ಸಣ್ಣದೊಂದು ಪಾಲು ಇದ್ದೇ ಇದೆ.
ಜಾಫರ್ ಶರೀಫ್ ಮತ್ತು ಸಿದ್ದರಾಮಯ್ಯ ಅವರ ಅಭ್ಯರ್ಥಿ ಭೈರತಿ ಸುರೇಶ್ ನಡುವಿನ ಹಗ್ಗಜಗ್ಗಾಟದಲ್ಲಿ ಕ್ಷೇತ್ರ ಕೈ ತಪ್ಪಿ ಹೋಯಿತು. ಮುಖ್ಯವಾಗಿ, ಇದು ಕಾಂಗ್ರೆಸ್‌ನ ಮತದಾರರನ್ನು ಒಡೆಯಿತು. ಅಷ್ಟೇ ಅಲ್ಲ, ಟಿಕೆಟ್ ಸಿಗದ ಅಸಮಾಧಾನದಲ್ಲಿ ಭೈರತಿ ಸುರೇಶ್ ಗುಂಪು ಸ್ಪಷ್ಟವಾಗಿ ಕಾಂಗ್ರೆಸ್‌ನೊಳಗೆ ಹಿಂದೂ-ಮುಸ್ಲಿಮ್ ಎಂದು ಮತಗಳನ್ನು ಒಡೆಯಿತು. ಹೀಗೆಂದು ಈ ಸೋಲನ್ನು ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ತಲೆಗೂ ಕಟ್ಟುವುದಕ್ಕಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜಾಫರ್ ಶರೀಫ್ ಯಾವ ಪಕ್ಷದಲ್ಲಿದ್ದಾರೆ ಎನ್ನುವುದರ ಕುರಿತಂತೆಯೇ ಜನರಿಗೆ ಅನುಮಾನವಿತ್ತು. ಕಳೆದ ಬಾರಿ ತನಗೆ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದು ಜೆಡಿಎಸ್ ಸೇರಲು ಸಿದ್ಧತೆ ನಡೆಸಿದ್ದ ಜಾಫರ್ ಶರೀಫ್ ಕುರಿತಂತೆ ಕಾಂಗ್ರೆಸ್ಸಿಗರಿಗೆ ಒಳಗೊಳಗೆ ಅಸಮಾಧಾ ನವಿದ್ದದ್ದು ಸುಳ್ಳಲ್ಲ.
ಇದೇ ಸಂದರ್ಭದಲ್ಲಿ ಜಾಫರ್ ಶರೀಫ್ ಅವರು ಕುಟುಂಬ ರಾಜಕಾರಣ ಮಾಡುತ್ತಿರುವ ಬಗ್ಗೆಯೂ ಕೆಲವರಿಗೆ ಸಿಟ್ಟಿತ್ತು. ಜಾಫರ್ ಶರೀಫ್ ಮೊಮ್ಮಗ ಇನ್ನೂ ರಾಜಕೀಯವಾಗಿ ಪ್ರಬುದ್ಧನಾಗಿರದೇ ಇದ್ದುದೂ ಕಾಂಗ್ರೆಸ್‌ನ ಬಹು ದೊಡ್ಡ ವೈಫಲ್ಯವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಕೆಲವು ನಾಯಕರಿಗೆ ಜಾಫರ್ ಶರೀಫ್ ಅವರ ಅಭ್ಯರ್ಥಿಯನ್ನು ಸೋಲಿಸುವುದಕ್ಕಿಂತಲೂ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕಾಗಿತ್ತು. ಆರಂಭದಲ್ಲಿ ಸಿದ್ದರಾಮಯ್ಯ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿ, ಜಾಫರ್ ಶರೀಫ್ ಜೊತೆ ನಿಂತವರೇ ಬಳಿಕ ಜಾಫರ್ ಶರೀಫ್ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದರು. ಈ ಸೋಲಿನ ಕಳಂಕವನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟುವ ಉದ್ದೇಶ ಅವರದಾಗಿತ್ತು. ಇದರ ಜೊತೆ ಜೊತೆಗೇ ದೇವೇಗೌಡರು ಆಡಿದ ಆಟವೂ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ಪರಿಣಾಮ ಉಂಟು ಮಾಡಿತು. ಮುಖ್ಯವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಈ ಉಪಚುನಾವಣೆಯಲ್ಲಿ ಲಾಭ ಮಾಡಿಕೊಂಡಿಲ್ಲ ಎನ್ನುವುದು ನಿಜವೇ ಆಗಿದ್ದರೂ, ಇದೇ ಸಂದರ್ಭದಲ್ಲಿ ನಷ್ಟವನ್ನೂ ಮಾಡಿಕೊಂಡಿಲ್ಲ ಎನ್ನುವುದು ಅಷ್ಟೇ ಸತ್ಯ. ಹೆಬ್ಬಾಳದಲ್ಲಿ ಈ ಹಿಂದೆಯೂ ಬಿಜೆಪಿ ಅಭ್ಯರ್ಥಿಯೇ ಗೆದ್ದಿರುವುದರಿಂದ ಅದನ್ನು ಕಾಂಗ್ರೆಸ್‌ಗಾದ ನಷ್ಟ ಎನ್ನುವಂತಿಲ್ಲ.
ಇದೇ ಸಂದರ್ಭದಲ್ಲಿ ಕೆಜೆಪಿಯ ಕೈಯಲ್ಲಿದ್ದ ಬೀದರ್ ಭಾರೀ ಮತಗಳ ಅಂತರದೊಂದಿಗೆ ಕಾಂಗ್ರೆಸ್ ಕೈವಶವಾಗಿರುವುದನ್ನು ನಾವು ನಿರ್ಲಕ್ಷಿಸುವಂತಿಲ್ಲ. ಈ ಬಾರಿ ಕಾಂಗ್ರೆಸ್‌ಗೆ ಬಿದ್ದ ಮತಗಳ ಆಧಾರದಲ್ಲೂ ಕಾಂಗ್ರೆಸ್‌ನ ಸಾಧನೆಯನ್ನು ನಾವು ಎತ್ತಿ ಹಿಡಿಯಬಹುದಾಗಿದೆ. ಈ ಉಪಚುನಾವಣೆಯಿಂದ ವಿಧಾನಸಭೆಯ ಬಲಾಬಲಗಳಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಹೀಗಿದ್ದರೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅದೇನೋ ಬಹುದೊಡ್ಡದನ್ನು ಕಳೆದುಕೊಂಡಿದೆ ಮತ್ತು ಅದಕ್ಕೆ ಸಿದ್ದರಾಮಯ್ಯರು ಹೊಣೆ ಎಂಬಂತೆ ವರ್ತಿಸುತ್ತಿರುವ ಕೆಲವು ನಾಯಕರ ಹೇಳಿಕೆಗಳು, ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಉದ್ದೇಶಪೂರ್ವಕ ಸಂಚಾಗಿದೆ. ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್‌ನ ಕುರಿತಂತೆ ಮಾಧ್ಯಮಗಳು ಸಾಕಷ್ಟು ಗುಲ್ಲೆಬ್ಬಿಸಿದವು. ಸಿದ್ದರಾಮಯ್ಯ ಅವರ ವಾಚ್‌ನ ಆಧಾರದಲ್ಲಿ ಅವರ ಆಡಳಿತವನ್ನು ನಾವು ವಿಶ್ಲೇಷಿಸುವುದಕ್ಕೆ ಸಾಧ್ಯವಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ತನ್ನ ಆಡಳಿತಾತ್ಮಕ ನಿಲುವುಗಳ ಸಂದರ್ಭದಲ್ಲಿ ಅವರು ಸದಾ ಜನಸಾಮಾನ್ಯರ ಬಗ್ಗೆ ಕಾಳಜಿಯನ್ನು ಹೊಂದಿರುವುದನ್ನು ನಾವು ಅಲ್ಲಗಳೆಯಲಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಸಿಕ್ಕಿರುವ ಮತಗಳೆಲ್ಲ ಸಿದ್ದರಾಮಯ್ಯ ಅವರ ಆಡಳಿತದ ಕಾರಣಕ್ಕಾಗಿ ಸಿಕ್ಕಿದವು. ಇಂದು ಸಿದ್ದರಾಮಯ್ಯ ಅವರನ್ನು ಇಳಿಸಿದರೆ ಅಷ್ಟೇ ವರ್ಚಸ್ಸುಳ್ಳ ಇನ್ನೊಬ್ಬ ನಾಯಕ ಕಾಂಗ್ರೆಸ್‌ನಲ್ಲಿ ಕಂಡು ಬರುವುದಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಕಾಂಗ್ರೆಸ್ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈ ಉಪಚುನಾವಣೆಯಲ್ಲಿ ಸಂಪೂರ್ಣ ದಿವಾಳಿಯೆದ್ದಿರುವುದು ಜೆಡಿಎಸ್ ಮಾತ್ರ. ಅದು ಸೋಲನುಭವಿಸಿರುವುದಷ್ಟೇ ಅಲ್ಲ, ತನ್ನ ವರ್ಚಸ್ಸನ್ನು ಇನ್ನಷ್ಟು ಕುಂದಿಸಿಕೊಂಡಿದೆ. ಬಿಜೆಪಿಯೊಳಗೆ ಒಳ ಒಪ್ಪಂದ ಮಾಡಿಕೊಂಡ ಕುರಿತಂತೆ ಅದರ ಮೇಲಿರುವ ಆರೋಪ ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ಮೂಲೆಗುಂಪು ಮಾಡಲಿದೆ. ದೇವೇಗೌಡರ ಸಮಯ ಸಾಧಕ ರಾಜಕಾರಣಕ್ಕೆ ಈ ಉಪಚುನಾವಣೆ ಇನ್ನೊಂದು ಸಾಕ್ಷಿಯಾಗಿದೆ. ಜಾತ್ಯತೀತ ಶಕ್ತಿಗಳ ದೌರ್ಬಲ್ಯವೇ ಈ ಬಾರಿ ಬಿಜೆಪಿ ಎರಡು ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಸಾಧ್ಯವಾಯಿತು ಎನ್ನುವುದು ವಿಷಾದನೀಯವಾಗಿರುವ ಸತ್ಯವಾಗಿದೆ.







