ತವರಿನಲ್ಲಿ ಏಷ್ಯಾ ಪ್ರಶಸ್ತಿಗಾಗಿ ವಿಜೇಂದರ್ ಹೋರಾಟ
ಹೊಸದಿಲ್ಲಿ, ಫೆ.18: ವೃತ್ತಿಪರ ಬಾಕ್ಸರ್ ಆಗಿ ಬದಲಾಗಿರುವ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಜೂನ್‌ನಲ್ಲಿ ತವರು ಅಭಿಮಾನಿಗಳ ಎದುರು ಡಬ್ಲ್ಯುಬಿಒ ಏಷ್ಯಾ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.
ಅಮೆಚೂರ್ ಮಟ್ಟದಲ್ಲಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಬಾಕ್ಸರ್ ಎನಿಸಿಕೊಳ್ಳುವ ಮೂಲಕ ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿರುವ 30 ರ ಹರೆಯದ ವಿಜೇಂದರ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಪಾದಾರ್ಪಣೆ ಮಾಡಿದ್ದರು.
ಹರ್ಯಾಣದ ಬಾಕ್ಸರ್ ವಿಜೇಂದರ್ ಈವರೆಗೆ ಆಡಿರುವ ಮೂರು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಜಯ ಸಾಧಿಸಿದ್ದಾರೆ. ಮಾ.12 ರಂದು ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಎದುರಾಳಿ ಬಾಕ್ಸರ್ ಯಾರೆಂದು ಇನ್ನೂ ಖಚಿತವಾಗಿಲ್ಲ.
ನಾನೀಗ ತುಂಬಾ ಉದ್ವೇಗಗೊಂಡಿರುವೆ. ತವರಿನ ಪ್ರೇಕ್ಷಕರು ಎದುರೇ ಪ್ರಶಸ್ತಿಗಾಗಿ ಹೋರಾಡುವ ಅವಕಾಶ ಲಭಿಸಿದೆ. ನನ್ನ ಎದುರಾಳಿ ಯಾರೆಂದು ಗೊತ್ತಿಲ್ಲ. ಈ ವರೆಗಿನ ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸ ನನಗಿದೆ ಎಂದು ಮ್ಯಾಂಚೆಸ್ಟರ್‌ನಲ್ಲಿ ಮಾ.12ರ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿರುವ ವಿಜೇಂದರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.







