ಅರುಣಾಚಲಪ್ರದೇಶದಲ್ಲಿ ಸರಕಾರ ರಚನೆಗೆ ಸು.ಕೋ. ಹಸಿರು ನಿಶಾನೆ
ಹೊಸದಿಲ್ಲಿ, ಫೆ.18: ಎರಡು ವರ್ಷಗಳ ಕಾಲ ಕಾಂಗ್ರೆಸ್‌ನ ಮುಖ್ಯಮಂತ್ರಿ ನಬಂಟುಕಿಯವರ ಆಳ್ವಿಕೆಯ ಬಳಿಕ ಇದೀಗ ಅರುಣಾಚಲ ಪ್ರದೇಶದಲ್ಲಿ ಶೀಘ್ರವೇ ಹೊಸ ಸರಕಾರವೊಂದು ರಚನೆಯಾಗುವ ನಿರೀಕ್ಷೆಯಿದೆ.
ಕಾಂಗ್ರೆಸ್‌ನ ಪ್ರತಿಭಟನೆಯ ನಡುವೆಯೇ ಕಳೆದ ತಿಂಗಳು ರಾಷ್ಟ್ರಪತಿ ಆಡಳಿತ ವಿಧಿಸಲಾಗಿದ್ದ ಈಶಾನ್ಯ ರಾಜ್ಯದಲ್ಲಿ ಸರಕಾರವೊಂದರ ರಚನೆ ಮಾಡಬಹುದೆಂದು ಸುಪ್ರೀಂ ಕೋರ್ಟ್ ಇಂದು ತಿಳಿಸಿದೆ.
ಅರುಣಾಚಲಪ್ರದೇಶದ ವಿಧಾನಸಭೆಯಲ್ಲಿ 60 ಸ್ಥಾನಗಳಿವೆ. 47 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ಆಂತರಿಕ ಕಲಹದಿಂದಾಗಿ ಅಕ್ಷರಶಃ ಇಬ್ಭಾಗವಾಯಿತು. 20 ಮಂದಿ ಕಾಂಗ್ರೆಸ್ ಸದಸ್ಯರು ಹಾಗೂ ಇಬ್ಬರು ಪಕ್ಷೇತರ ಶಾಸಕರು ವಿಪಕ್ಷ ಬಿಜೆಪಿಯೊಂದಿಗೆ ಸೇರಿಕೊಂಡರು.
ಅರುಣಾಚಲ ಪ್ರದೇಶ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕೇಂದ್ರದ ತನ್ನ ಅಧಿಕಾರವನ್ನು ಬಳಸಿಕೊಂಡಿದೆಯೆಂದು ಕಾಂಗ್ರೆಸ್ ಆರೋಪಿಸಿದೆ.
ಇಬ್ಬರು ಶಾಸಕರು ರಾಜೀನಾಮೆ ನೀಡಿರುವ ಕಾರಣ ವಿಧಾನಸಭೆಯ ಸದ್ಯದ ಬಲ 58 ಇದೆ. ಹೊಸ ಮುಖ್ಯಮಂತ್ರಿ ಬಹುಮತಕ್ಕೆ 30 ಸದಸ್ಯರ ಬೆಂಬಲ ಪಡೆದಿರಬೇಕು.
ಡಿಸೆಂಬರ್‌ನಲ್ಲಿ ವಿಧಾನ ಸಭಾಧ್ಯಕ್ಷರು 14 ಮಂದಿ ಕಾಂಗ್ರೆಸ್ ಬಂಡುಕೋರ ಶಾಸಕರನ್ನು ಅಮಾನ್ಯರೆಂದು ತಪ್ಪಾಗಿ ಘೋಷಿಸಿದ್ದಾರೆಂದು ಗುವಾಹಟಿ ಹೈಕೋರ್ಟ್ ತೀರ್ಪು ನೀಡುವುದೇ ಎಂಬುದರಲ್ಲಿ ಸರಕಾರ ರಚನೆಯ ಕೀಲಿಕೈ ಅಡಗಿದೆ. ಈ ವಿಷಯವನ್ನು ತಾನು ತೀರ್ಮಾನಿಸುವುದಿಲ್ಲ. ಅವೆಲ್ಲವೂ ಹೈಕೋರ್ಟ್‌ನ ಕೈಯಲ್ಲಿದೆಯೆಂದು ಇಂದು ಸುಪ್ರೀಂ ಕೋರ್ಟ್ ಹೇಳಿದೆ. ಬಂಡುಕೋರ ಕಾಂಗ್ರೆಸ್ ಶಾಸಕರು ಮಾಜಿ ವಿತ್ತ ಸಚಿವ ಕಲಿಖೊಪುಲ್‌ರ ನಾಯಕತ್ವದಲ್ಲಿ ಒಂದಾಗಿದ್ದಾರೆ. ಪುಲ್‌ರನ್ನು ಸ್ಪೀಕರ್ ಕಳೆದ ವರ್ಷ ಅಮಾನ್ಯಗೊಳಿಸಿದ್ದರು. ಬಿಜೆಪಿ ಹಾಗೂ ಇಬ್ಬರು ಪಕ್ಷೇತರ ಶಾಸಕರು ಸಹಿತ 32 ಶಾಸಕರ ಬೆಂಬಲ ತನಗಿದೆಯೆಂದು ನಿನ್ನೆ ಅವರು ರಾಜ್ಯಪಾಲ ಜೆ.ಪಿ. ರಾಜಖೋವರಿಗೆ ತಿಳಿಸಿದ್ದರು.







