ಪುತ್ತೂರು: ಅಕ್ರಮ ಮದ್ಯ ಸಾಗಾಟ; ಆರೋಪಿ ಬಂಧನ

ಪುತ್ತೂರು: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಂಜುನಾಥ ನಗರದ ಬಂಬಿಲ ಎಂಬಲ್ಲಿ ಗುರುವಾರ ರಾತ್ರಿ ಪತ್ತೆ ಹಚ್ಚಿದ ಅಬಕಾರಿ ಪೊಲೀಸರು ಆರೋಪಿಯನ್ನು ಬಂಧಿಸಿ, ಮದ್ಯ ಸಾಗಾಟಕ್ಕೆ ಬಳಸಲಾದ ದ್ವಿಚಕ್ರ ವಾಹನ ಸಹಿತ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಳ್ಯ ತಾಲೂಕಿನ ಪೆರಾಜೆ ಗ್ರಾಮದ ಮುಕ್ರು ನಿವಾಸಿ ಉಮೇಶ್ ಪೂಜಾರಿ ಬಂಧಿತ ಅರೋಪಿ ಎಂದು ಗುರುತಿಸಲಾಗಿದೆ. ಅಬಕಾರಿ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾಗ ಇಲ್ಲಿನ ಬಂಬಿಲ ಸೇತುವೆ ಬಳಿಯಲ್ಲಿನ ರಸ್ತೆಯಲ್ಲಿ ಸಂಶಯಾಸ್ಪದವಾಗಿ ಆರೋಪಿ ಮದ್ಯ ಸಾಗುತ್ತಿದ್ದು, ಆತನನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಆತನನ್ನು ವಿಚಾರಣೆ ನಡೆಸಿದಾಗ ತಾನು ಅಂಕತಡ್ಕದ ಪರಣೆ ಕಡೆಗೆ ಸಾಗಾಟ ಮಾಡುತ್ತಿದ್ದು, ಸುರೇಶ್ ಗೌಡ ಎಂಬವರಿಗೆ ನೀಡಲು ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದ. ಆರೋಪಿ ಉಮೇಶ್ ಪೂಜಾರಿಯನ್ನು ಬಂಧಿಸಲಾಗಿದ್ದು, ಸುರೇಶ್ ಗೌಡ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಬಕಾರಿ ಉಪವಿಭಾಗ ಕಚೇರಿಯ ಉಪ ಅಧೀಕ್ಷಕ ಚಂದ್ರಪ್ಪ ಅವರ ಅದೇಶದ ಮೇರೆಗೆ ವಲಯ ಅಬಕಾರಿ ನಿರೀಕ್ಷಕ ಶಿವಪ್ರಸಾದ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ನವೀನ್ ಕುಮಾರ್, ಸಿಬ್ಬಂದಿ ಉಮೇಶ್, ಪ್ರವೀಣ್ ಪದ್ಮನಾಭ ಮತ್ತು ವಾಹನ ಚಾಲಕ ಬಾಲಕೃಷ್ಣ ಅವರು ಕಾರ್ಯಾಚರಣೆ ನಡೆಸಿದ್ದರು.







