ದ.ಕ.ಜಿಲ್ಲೆಯಲ್ಲಿ ಕಳೆದ 10 ವರ್ಷ ಆಡಳಿತ ನಡೆಸಿದ ಬಿಜೆಪಿ ಮತ್ತು ಬಿಜೆಪಿಯ ಸಂಸದರ ಕೊಡುಗೆ ಶೂನ್ಯ - ಅಭಯಚಂದ್ರ ಜೈನ್
ಮುಲ್ಕಿ, ಫೆ.19: ದ.ಕ.ಜಿಲ್ಲೆಯಲ್ಲಿ ಕಳೆದ 10 ವರ್ಷ ಆಡಳಿತ ನಡೆಸಿದ ಬಿಜೆಪಿಮತ್ತು ಬಿಜೆಪಿಯ ಸಂಸದರ ಕೊಡುಗೆ ಶೂನ್ಯ. ಇದರಿಂದ ಬೇಸತ್ತ ಜನತೆ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಸದ್ಯದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತಗಳಿಂದ ಅಧಿಕಾರ ಪಡೆಯಲಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ, ರಾಜ್ಯ ಯುವಜನಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮುಲ್ಕಿ ಪುನರೂರು ಸಭಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರಕಾರ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತಿಸಿರದ ಫಲವಾಗಿ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಮಳವೂರುವೆಂಟೆಡ್ ಡ್ಯಾಮ್‌ನ ಯೋಜನೆಗಳು ನನೆಗುದಿಗೆ ಬಿದ್ದವು ಎಂದರು.
ಕಳೆದ ಯುಪಿಎ ಸರಕಾರ ರೂಪಿಸಿದ್ದ ಒಟ್ಟು 53 ಕೋಟಿರೂ. ಅನುದಾನದ ಕಿನ್ನಿಗೋಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಂದಿನ 1 ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ. ಮತ್ತು ಮುಂದಿನ ಮೇ ತಿಂಗಳೊಲಗಾಗಿ ಮಳವೂರಿನ ವೆಂಟೆಡ್ ಡ್ಯಾಮ್ ಯೋಜನೆಯು ಸಂಪೂರ್ಣಗೊಂಡು ಜನರಿಗೆ ನೀರು ಸರಬರಾಜಾಗಲಿದೆಎಂದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಮೂಲಕ ಕೇಂದ್ರದ ಸಿ ಆರ್ ಎಫ್ ನಿಧಿಯಿಂದ ಜಿಲ್ಲೆಯ ಹೆಚ್ಚಿನ ರಸ್ತೆ ದುರಸ್ತಿ ನಡೆದಿದ್ದು ಜಿಲ್ಲೆಯ ಸಂಸದರು ಕಳೆದ 20 ವರ್ಷಗಳಲ್ಲಿ ಜಿಲ್ಲೆಯ ಬಗ್ಗೆ ಆದ್ಯತೆ ನೀಡದಿರುವುದರಿಂದ ಜಿಲ್ಲೆಯ ಅಭಿವೃದ್ದಿ ಕುಂಠೀತಗೊಂಡಿದೆ.ಮಾಜಿ ಸಚಿವ ವಿ.ಎಸ್.ಆಚಾರ್ಯರಿಗೆ ಜಿಲ್ಲೆಯ ಬಗ್ಗೆ ಇದ್ದ ಕಾಳಜಿ ಇತ್ತೀಚಿನ ಬಿಜೆಪಿಯ ನಾಯಕರಿಗೆ ಇಲ್ಲದಾಗಿದ್ದು, ಅವರ ಆದರ್ಶ ಸಂಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಮದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಿಗೆ ರಾಜ್ಯದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಉತ್ತಮ ಸಮಾಜ ಮುಖಿ ಕೆಲಸಗಲನ್ನು ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಲ್ಕಿ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್ ಉಪಸ್ತಿತರಿದ್ದರು.







