ಛತ್ರಪತಿ ಶಿವಾಜಿ ಮಹಾರಾಜರ 389ನೆ ಜಯಂತಿ ಜಯಂತಿ ಆಚರಣೆಗಳು ಸಮುದಾಯಕ್ಕೆ ಸೀಮಿತವಾಗದಿರಲಿ: ಎ.ಬಿ. ಇಬ್ರಾಹೀಂ

ಮಂಗಳೂರು, ಫೆ. 19: ಸಾಧು ಸಂತರು, ಕವಿಗಳು ಸೇರಿದಂತೆ ಮಹಾತ್ಮರ ಜಯಂತಿ ಆಚರಣೆಗಳು ಆಯಾ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ನಾಡಿನ ಜನತೆಗೆ ಪ್ರೇರಣೆ, ಮಾರ್ಗದರ್ಶನ ಹಾಗೂ ಮಹತ್ವವನ್ನು ತಿಳಿಸುವಂತಾಗಿರಬೇಕು ಎಂದು ಜಿಲ್ಲಧಿಕಾರಿ ಎ.ಬಿ. ಇಬ್ರಾಹೀಂ ಕರೆ ನೀಡಿದರು.
ನಗರದ ಉರ್ವಾಸ್ಟೋರ್‌ನ ತುಳು ಭವನದ ಸಿರಿ ಚಾವಡಿಯಲ್ಲಿ ಇಂದು ಛತ್ರಪತಿ ಶಿವಾಜಿ ಮಹಾರಾಜರ 389ನೆ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ಓರ್ವ ದಕ್ಷ ಆಡಳಿತಗಾರನಾಗಿದ್ದ್ದುದಲ್ಲದೆ, ಕ್ರಾಂತಿಕಾರಕ ಬದಲಾವಣೆಗಳ ಮೂಲಕ ವಿಶೇಷ ಆಡಲಿತ ವ್ಯವಸ್ಥೆಯನ್ನು ಜಾರಿಗೊಳಿಸಿದವರು ಅವರ ಪ್ರೇರಣೆ ಮುಂದಿನ ಪೀಳಿಗೆಗೂ ಅನುಕರಣೀಯ ಎಂದು ಅವರು ಹೇಳಿದರು.
ಈ ಸಂದರ್ಭ ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್‌ರವರು ಮುಂಡೋಡು ಧರ್ಮಪಾಲ್ ರಾವ್ ಜಾಧವ್ ರಚಿಸಿರುವ ‘ಚತುರ್ವೇದ ಸಾರ’ ವೇದಗ್ರಂಥವನ್ನು ಲೋಕಾರ್ಪಣೆಗೊಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಮಾತನಾಡಿ, ಶಿವಾಜಿ ಮಹಾರಾಜರ ಆದರ್ಶಗಳ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಮನಪಾ ಜಂಟಿ ಆಯುಕ್ತ ಗೋಕುಲ್ ದಾಸ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಜಿಲ್ಲಾಧ್ಯಕ್ಷ .ಎವಿ. ಸುರೇಶ್ ರಾವ್ ಕರ್‌ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











