ಮಾವೋವಾದಿಗಳೊಂದಿಗೆ ಮಾತುಕತೆಗೆ ಕೇಂದ್ರ ಸಿದ್ಧ : ರಾಜನಾಥ ಸಿಂಗ್

ಕೋರಾಪತ್(ಒಡಿಶಾ),ಫೆ.19: ಮಾವೋವಾದಿಗಳು ಬೇಷರತ್ ಆಗಿ ಹಿಂಸೆಯನ್ನು ತ್ಯಜಿಸಿದರೆ ಅವರೊಂದಿಗೆ ಮಾತುಕತೆಗಳಿಗೆ ಕೇಂದ್ರವು ಸಿದ್ಧವಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು ಶುಕ್ರವಾರ ಇಲ್ಲಿ ಹೇಳಿದರು.
ನಕ್ಸಲ್ ಪೀಡಿತ ಕೋರಾಪತ್ ಜಿಲ್ಲೆಯಲ್ಲಿ ಎಡಪಂಥೀಯ ಉಗ್ರವಾದದಿಂದ ಸೃಷ್ಟಿಯಾಗಿರುವ ಪರಿಸ್ಥಿತಿಯನ್ನು ಪುನರ್‌ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಹಿಂಸೆಯ ಮಾರ್ಗವನ್ನು ತೊರೆದು ಮುಖ್ಯವಾಹಿನಿಗೆ ಸೇರುವಂತೆ ಮಾವೋವಾದಿಗಳಿಗೆ ಮನವಿ ಮಾಡಿಕೊಳ್ಳಲು ನಾನು ಬಯಸುತ್ತೇನೆ. ಯಾವುದೇ ಷರತ್ತುಗಳಿಲ್ಲದೆ ಹಿಂಸೆಯನ್ನು ತೊರೆದರೆ ಅವರೊಂದಿಗೆ ಮಾತಕತೆಗಳನ್ನು ನಡೆಸಲು ಕೇಂದ್ರವು ಸಿದ್ಧವಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದ ಅವರು, ಮಾವೋವಾದಿಗಳು ಶಸ್ತ್ರಾಸ್ತ್ರಗಳನ್ನು ತೊರೆದು ಮಾತುಕತೆಗಳಿಗೆ ಮುಂದಾಗಬೇಕು ಎಂದರು.
ಎನ್‌ಡಿಎ ಸರಕಾರವು ಹಲವಾರು ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿದ್ದು, ಮಾವೋವಾದಿಗಳು ಶಸ್ತ್ರಾಸ್ತ್ರಗಳನ್ನು ತೊರೆದು ಈ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಅವರು ನುಡಿದರು.
ಕೆಲವು ಮಾವೋವಾದಿಗಳು ಕೊಲ್ಲಲ್ಪಟ್ಟಿರುವ ಜಾರ್ಖಂಡ್ ಮತ್ತು ಛತ್ತೀಸ್‌ಗಡಗಳಲ್ಲಿ ಪೊಲೀಸ್ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಅವರು, ಕೆಲವೊಮ್ಮೆ ಭದ್ರತಾ ಪಡೆಗಳು ಆತ್ಮರಕ್ಷಣೆಗಾಗಿ ಪ್ರತಿದಾಳಿಗಳನ್ನು ನಡೆಸುವುದು ಅನಿವಾರ್ಯವಾಗಿರುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ನಕ್ಸಲ್‌ರು ಕೊಲ್ಲಲ್ಪಡುತ್ತಾರೆ ಎಂದರು.
ಮಾವೋವಾದಿ ನಿಗ್ರಹ ಕಾರ್ಯಾಚರಣೆಗಳಲ್ಲಿ ಒಡಿಶಾ ಸರಕಾರ,ರಾಜ್ಯ ಪೊಲೀಸ್,ಆಡಳಿತ ಮತ್ತು ಅರೆ ಮಿಲಿಟರಿ ಪಡೆಗಳ ಪಾತ್ರವನ್ನು ಪ್ರಶಂಸಿಸಿದ ಅವರು ಇದಕ್ಕಾಗಿ ಅಧಿಕಾರಿಗಳನ್ನು ಅಭಿನಂದಿಸಿದರು.
ನೆರೆಯ ಜಾರ್ಖಂಡ್ ಮತ್ತು ಛತ್ತೀಸ್‌ಗಡಗಳಲ್ಲಿ ಎಡಪಂಥೀಯ ಉಗ್ರವಾದದ ಹಾವಳಿಯ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಿಗೆ ಅವರ ಭೇಟಿಯು ಮಹತ್ವವನ್ನು ಪಡೆದುಕೊಂಡಿದೆ ಎಂದ ಮೂಲಗಳು, ಒಡಿಶಾ-ಆಂಧ್ರಪ್ರದೇಶ ಗಡಿ ಪ್ರದೇಶಗಳಲ್ಲಿನ ಸ್ಥಿತಿಯು ಕೂಡ ಕಳವಳಕ್ಕೆ ಕಾರಣವಾಗಿದೆ ಎಂದು ತಿಳಿಸಿದವು.







