ಗೋಧ್ರಾ ಘಟನೆ ಬಿಜೆಪಿಯ ಪೂರ್ವಯೋಜಿತ ರಾಜಕೀಯ ಸ್ಟಂಟ್:’ ಪಟೇಲ್ ಚಳುವಳಿ ನಾಯಕ

ಅಹ್ಮದಾಬಾದ್ : ‘‘2002ರ ಗೋಧ್ರಾ ಘಟನೆಯು ಅದೇ ವರ್ಷ ರಾಜ್ಯದಲ್ಲಿ ನಡೆಯಲಿದ್ದ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಬಿಜೆಪಿಯ ಒಂದು ಪೂರ್ವಯೋಜಿತ ರಾಜಕೀಯ ಸ್ಟಂಟ್ ಆಗಿತ್ತು. ಆದರೆ ರೈಲಿಗೆ ಬೆಂಕಿ ಹಚ್ಚಿದವರು ಹಿಂದೂಗಳೋ ಅಥವಾ ಮುಸ್ಲಿಮರೋ ಎಂದು ನನಗೆ ಗೊತ್ತಿಲ್ಲ,’’ ಎಂಬುದು ಗುಜರಾತಿನಲ್ಲಿ ನಡೆಯುತ್ತಿರುವ ಪಟೇಲರ ಮೀಸಲಾತಿ ಚಳುವಳಿಯ ನಾಯಕರಾದ ರಾಹುಲ್ ದೇಸಾಯಿಯವರ ಅಭಿಮತ. ಪಟಿದಾರ್ ಸಮಿತಿಯ ನಾಯಕರುಗಳಾದ ರಾಹುಲ್ ಹಾಗೂ ಲಾಲ್‌ಭಾಯಿಯಂಥವರು ಈಗ ಮತೀಯ ಪ್ರಶ್ನೆಗಳನ್ನು ಎತ್ತಿ ಬಿಜೆಪಿಯನ್ನು ಟೀಕಿಸಲು ಹಿಂಜರಿಯುತ್ತಿಲ್ಲ.
ಒಟ್ಟು 59 ಮಂದಿಯನ್ನು ಬಲಿ ತೆಗೆದುಕೊಂಡ ಗೋಧ್ರಾ ದುರ್ಘಟನೆ ನಡೆದಾಗ ದೇಸಾಯಿ ಶಾಲೆಯಲ್ಲಿದ್ದರು ಹಾಗೂ ತಮ್ಮ ತರಗತಿಯಲ್ಲಿ ಉರಿಯುತ್ತಿರುವ ರೈಲಿನವೀಡಿಯೋಗಳನ್ನು ತೋರಿಸುತ್ತಿದ್ದರೆಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ.
‘‘ಹಿಂದೂಗಳು ಒಂದಾಗದಿದ್ದಲ್ಲಿ ಮುಸ್ಲಿಮರು ಎಲ್ಲರನ್ನೂ ಕೊಂದು ಬಿಡುತ್ತಾರೆಂಬ ಭಯವನ್ನು ಅವರು ಜನರ ಮನಸ್ಸಿನಲ್ಲಿ ಬಿತ್ತಲು ಪ್ರಯತ್ನಿಸಿದ್ದರು,’’ಎಂದುದೇಸಾಯಿ ಹೇಳಿದರು. ‘‘ಗೋಧ್ರಾ ಘಟನೆಯಲ್ಲದಿದ್ದಲ್ಲಿ ಮೋದಿಯವರು ಖಂಡಿತವಾಗಿಯೂ 2002ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿರಲಿಲ್ಲವೆಂದು ನಾನು ಖಂಡಿತವಾಗಿಯೂ ಹೇಳಬಲ್ಲೆ,’’ಎಂದು ದೇಸಾಯಿ ಹೇಳುತ್ತಾರೆ.
‘‘ಬಿಜೆಪಿ ಮೂಲತಃವಾಗಿ ಒಂದು ಮೂಲಭೂತವಾದಿ ಪಕ್ಷವಾಗಿದ್ದು ಮುಸ್ಲಿಮರ ಬಗ್ಗೆ ಭಯವನ್ನು ಮೂಡಿಸುವ ಯತ್ನ ಮಾಡುತ್ತಿದೆ,’’ಎಂದು ಅವರು ವಿವರಿಸುತ್ತಾರೆ. ‘‘ಇಂದು ಕೂಡ ಮುಸ್ಲಿಮರು ತಮ್ಮ ವಿರುದ್ಧ ಗಲಭೆ ನಡೆಸಬಹುದೆಂಬ ಭಯ ಜನರಲ್ಲಿದೆ. ಆದರೆ ನಿಜ ಹೇಳಬೇಕೆಂದರೆ ಅವರು ಹಾಗೆ ಮಾಡದಿದ್ದರೂ ಬಿಜೆಪಿಯೇ ಹಾಗೆ ಮಾಡಿಸುತ್ತದೆ,’’ಎಂಬ ಗಂಭೀರ ಆರೋಪವೂ ದೇಸಾಯಿಯವರಿಂದ ಕೇಳಿ ಬಂತು. ‘‘ಪಟಿದಾರ್ ಆಂದೋಲನ ಸಮಿತಿಯ ಎಲ್ಲಾ ಸದಸ್ಯರೂ ಈ ವಿಚಾರದಲ್ಲಿ ಸಹಮತ ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ,’’ಎಂದೂ ಅವರು ಹೇಳಿದರು.
ಮೆಹ್ಸಾನದಲ್ಲಿ ಮಾತನಾಡಿದ ಲಾಲ್ಜಿಭಾಯಿಪಟೇಲ್ ಕೂಡ ಇದನ್ನೇ ಹೇಳುತ್ತಾರೆ. ‘‘ಗೋಧ್ರಾ ಹಾಗೂ 2002ರ ಗಲಭೆಗಳನ್ನು ಬಿಜೆಪಿಯೇ ಮಾಡಿಸಿದೆ. ಇದು ನಮಗೆ ಹಿಂದೆ ಸ್ಪಷ್ಟವಾಗಿರದಿದ್ದರೂ ಈಗ ಸ್ಪಷ್ಟವಾಗಿದೆ. ಹಿಂದೆ ಅವರು ಮುಸ್ಲಿಮರನ್ನು ಗುರಿಯಾಗಿಸಿದ್ದರೆ ಈಗ ಅವರು ಪಟೇಲರನ್ನು ತುಳಿಯುತ್ತಿದ್ದಾರೆ. ಇಂತಹ ರಾಜಕೀಯವೇ ನಕ್ಸಲರ ಸೃಷ್ಟಿಗೆ ಕಾರಣ,’’ಎಂದವರು ಹೇಳಿದರು







