ಮತ ಸಮರಕ್ಕೆ ಸುಳ್ಯ ತಾಲೂಕು ಸನ್ನದ್ಧ ಎನ್.ಎಂ.ಸಿ.ಯಲ್ಲಿ ನಡೆಯಿತು ಮಸ್ಟರಿಂಗ್ ಕಾರ್ಯ
 copy.jpg)
ಸುಳ್ಯ: ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ಮತಯಂತ್ರಗಳನ್ನು ಹಾಗೂ ಚುನಾವಣಾ ಸಿಬ್ಬಂದಿಗಳನ್ನು ಬೂತ್‌ಗಳಿಗೆ ಕೊಂಡೊಯ್ಯುವ ಮಸ್ಟರಿಂಗ್ ಕಾರ್ಯ ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ನಡೆಯಿತು.
ಸುಳ್ಯ ತಾಲೂಕಿನ ಚುನಾವಣಾ ಸಿಬ್ಬಂದಿಗಳು ಹಾಗೂ ಹೊರಗಿನಿಂದ ಬಂದ ಚುನಾವಣಾ ಸಿಬ್ಬಂದಿಗಳು ಮತಯಂತ್ರಗಳೊಂದಿಗೆ ತಮ್ಮ ತಮ್ಮ ಬೂತ್‌ಗಳಿಗೆ ಹೊರಟರು. ಪೊಲೀಸರು, ಪಿ.ಆರ್.ಓಗಳು, ಎ.ಪಿ.ಆರ್.ಓ.ಗಳು, ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್ ಕೇಂದ್ರದಲ್ಲಿ ಮಾಹಿತಿ ಪಡೆದ ಬಳಿಕ ತಮಗೆ ನಿಗದಿಪಡಿಸಿದ ಮತದಾನ ಕೇಂದ್ರಗಳಿಗೆ ತೆರಳಿದರು. ಚುನಾವಣಾ ನಿಮಿತ್ತ 10 ಕೆ.ಎಸ್.ಆರ್.ಟಿ.ಸಿ. ಬಸ್, 20 ಮಿನಿ ಬಸ್, 26 ಜೀಪಿನ ವ್ಯವಸ್ಥೆ ಮಾಡಲಾಗಿದೆ. ಸುಳ್ಯ ತಾಲೂಕಿನಿಂದ ಪುತ್ತೂರಿಗೆ 22, ಬಂಟ್ವಾಳಕ್ಕೆ 27, ಬೆಳ್ತಂಗಡಿಗೆ 35, ಮಂಗಳೂರಿಗೆ 80 ಮಂದಿಯನ್ನು ಪಿ.ಆರ್.ಓ ಹಾಗೂ ಎ.ಪಿ.ಆರ್.ಓ.ಗಳಾಗಿ ಕರ್ತವ್ಯ ನಿರ್ವಹಿಸಲು ಕಳುಹಿಸಲಾಗಿದೆ.
ಚುನಾವಣೆಗೆ ಸಂಬಂಧಿಸಿ ಒಟ್ಟು 238 ಮಂದಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರಲ್ಲಿ 170 ಪೊಲೀಸರು, 68 ಮಂದಿ ಗೃಹರಕ್ಷಕ ದಳದವರಿದ್ದಾರೆ. ಓರ್ವ ಎಸ್.ಪಿ., 3 ಇನ್‌ಸ್ಪೆಕ್ಟರ್, 9 ಮಂದಿ ಎಸ್.ಐ., 6 ಮಂದಿ ಎ.ಎಸ್.ಐ., 151 ಪೇದೆಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸುಳ್ಯದಲ್ಲಿ ಒಂದು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಕೆ.ಎಸ್.ಆರ್.ಪಿ.ಯ ಒಂದು ತುಕಡಿ ಕೂಡಾ ಸುಳ್ಯಕ್ಕೆ ಆಗಮಿಸಿದೆ. ತಾಲೂಕಿನಲ್ಲಿ 112 ಮತಗಟ್ಟೆಗಳಿದ್ದು, ಪ್ರತೀ ಮತಗಟ್ಟೆಗೆ ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 5 ನಕ್ಸಲ್ ಪೀಡಿತ ಮತಗಟ್ಟೆಗಳಿದ್ದು, ಇವುಗಳಿಗೆ ಒಟ್ಟು 4 ಪೊಲೀಸರನ್ನು ನಿಯೋಜಿಸಲಾಗಿದೆ. 19 ಅತಿಸೂಕ್ಷ್ಮ, 20 ಸೂಕ್ಷ್ಮ ಹಾಗೂ 68 ಸಾಮಾನ್ಯ ಮತಗಟ್ಟೆಗಳಿವೆ. ಮಸ್ಟರಿಂಗ್ ಕೇಂದ್ರದಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಜಿ.ಪಂ. ಚುನಾವಣಾಧಿಕಾರಿ ಅರುಣ ಪ್ರಭರವರು, ಚುನಾವಣೆಗೆ ಆಡಳಿತ ಸರ್ವ ಸನ್ನದ್ಧವಾಗಿದ್ದು, ಮತದಾರರು ಶಾಂತಿ ಮತ್ತು ಸಂಯಮದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದು ವಿನಂತಿಸಿದರು.
ಸುಳ್ಯ ತಾಲೂಕಿನಲ್ಲಿ ಈ ಬಾರಿ 2912 ಹೊಸ ಮತದಾರರು ಸೇರ್ಪಡೆಗೊಂಡಿದ್ದು, ಒಟ್ಟು 98,560 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಹೊಸ ಮತದಾರರ ಪೈಕಿ 1,124 ಪುರುಷ ಹಾಗೂ 1,788 ಮಹಿಳಾ ಮತದಾರರಿದ್ದಾರೆ. ಒಟ್ಟು ಮತದಾರರ ಪೈಕಿ 49,427 ಪುರುಷ ಮತ್ತು 49,133 ಮಹಿಳಾ ಮತದಾರರಿದ್ದಾರೆ. ಈ ಬಾರಿ ವಿವಿಧ ಕಾರಣಗಳಿಗಾಗಿ 414 ಪುರುಷ ಮತ್ತು 707 ಮಹಿಳಾ ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿದೆ.








