ಸ್ವಘೋಷಿತ ನಾಸ್ತಿಕ, ಕಮ್ಯುನಿಸ್ಟ್ ಉಮರ್ ಖಾಲಿದ್ ನನ್ನು ಇಸ್ಲಾಮಿಸ್ಟ್ ಎಂದು ಬಿಂಬಿಸಲು ಹೆಣಗಾಡಿದ ಮಾಧ್ಯಮಗಳು

ನವದೆಹಲಿ : ಜೆಎನ್‌ಯು ಹಗರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಯೂನಿಯನ್ ನಾಯಕ ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಬಂಧಿಸಿದ ಘಟನೆ ದೊಡ್ಡ ವಿವಾದವನ್ನೇ ಸೃಷ್ಟಿಸಿರುವಂತೆಯೇ ಕೆಲವೊಂದು ಮಾಧ್ಯಮಗಳು ತನ್ನನ್ನು ನಾಸ್ತಿಕವಾದಿ ಹಾಗೂ ಕಮ್ಯೂನಿಸ್ಟ್ ಎಂದು ಕರೆಸಿಕೊಳ್ಳುವ ಇನ್ನೊಬ್ಬ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್‌ನನ್ನು ಯಾವುದೇ ಸಾಕ್ಷ್ಯವಿಲ್ಲದಿದ್ದರೂ ಉಗ್ರವಾದಿಗಳೊಂದಿಗೆ ನಂಟು ಹೊಂದಿದ್ದಾನೆಂದು ಬಣ್ಣಿಸಿವೆ.
ಇದು ಕನ್ಹಯ್ಯ ಕುಮಾರ್ ಎದುರಿಸುತ್ತಿರುವ ಆರೋಪಕ್ಕಿಂತಲೂ ಗಂಭೀರ ಆರೋಪವಾಗಿದ್ದು ಖಾಲಿದ್ ಜೆಎನ್‌ಯು ಕ್ಯಾಂಪಸ್ಸಿನಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಲು ಕಾರಣವಾದ ವಿವಾದಿತ ಕಾರ್ಯಕ್ರಮದ ಆಯೋಜಕನೆಂದೂ ಹೇಳಲಾಗುತ್ತಿದೆ.
ಇತ್ತ ಸರಕಾರವು ಗುಪ್ತಚರ ಬ್ಯೂರೋ ತನಗೆ ನೀಡಿರುವ ವರದಿಯಲ್ಲಿ ಉಮರ್ ಖಾಲಿದ್ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್-ಇ-ಮೊಹಮ್ಮದ್ ಬೆಂಬಲಿಗನೆಂದು ಹೇಳಿದೆ ಎಂಬುದನ್ನು ನಿರಾಕರಿಸಿದೆ.
ಕೆಲವು ಟಿವಿ ವಾಹಿನಿಗಳಂತೂ ಜೆಎನ್‌ಯು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಫ್ಜಲ್ ಗುರು ಬೆಂಬಲಿಗ ಖಾಲಿದ್ಹಲವಾರು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದನೆಂದೂ ಹಾಗೂ ಪ್ರತಿಭಟನೆಗಳನ್ನು ಆಯೋಜಿಸಲು ಉಗ್ರ ಗುಂಪುಗಳಿಂದಸಹಾಯ ಪಡೆದಿದ್ದನೆಂದೂ ವರದಿ ಮಾಡಿದ್ದವು.
‘‘ಇದು ಕೇವಲ ಕಾಲ್ಪನಿಕ. ಗುಪ್ತಚರ ಇಲಾಖೆ ಸಾಮಾನ್ಯವಾಗಿ ಯಾವುದೇ ವಿಚಾರವನ್ನು ದೃಢ ಪಡಿಸುವುದೂ ಅಥವಾ ಅಲ್ಲಗಳೆಯುವುದೂ ಇಲ್ಲವಾದುದರಿಂದ ಇಂತಹ ಸುದ್ದಿಗಳನ್ನು ಗುಪ್ತಚರ ಇಲಾಖೆಯ ವರದಿ ತಿಳಿಸಿದೆಯೆಂಬ ಅರ್ಥದಲ್ಲಿ ನೀಡಲಾಗುತ್ತಿದೆ,’’ ಎಂದು ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇತ್ತ ದೆಹಲಿ ಪೊಲೀಸರು ಕನ್ಹಯ್ಯ ಕುಮಾರ್‌ನನ್ನು ಬಂಧಿಸಲು ಅತ್ಯುತ್ಸಾಹ ತೋರಿಸಿದರು ಎಂದು ಹೇಳಿದ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ಪೊಲೀಸರುಈ ಪರಿಸ್ಥಿತಿಯನ್ನುಇನ್ನೂ ವೃತ್ತಿಪರವಾಗಿ ನಿಭಾಯಿಸಬಹುದಾಗಿತ್ತು ಹಾಗೂ ಕನ್ಹಯ್ಯ ಕುಮಾರ್‌ನನ್ನು ಬಂಧಿಸುವ ಮೊದಲು ಆತನ ವಿರುದ್ಧ ಸಾಕಷ್ಟು ಸಾಕ್ಷ್ಯ ಸಂಗ್ರಹಿಸಬೇಕಿತ್ತು ಎಂದು ಹೇಳಿದರು.
ಜೆಎನ್‌ಯು ಕಾರ್ಯಕ್ರಮದಲ್ಲಿ ಹೊರಗಿನವರು ದೇಶ ವಿರೋಧಿ ಘೋಷಣೆಗಳನ್ನು ಕೂಗಿರುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ, ಎಂದು ಹೇಳಿದ ಅಧಿಕಾರಿ, ಸಚಿವಾಲಯವು ಇದೀಗ ಬಂಧನದಲ್ಲಿರುವ ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಎಸ್ ಎ ಆರ್ ಗೀಲಾನಿಯವರು ಭಾಗವಹಿಸಿದ್ದ ಕಮಿಟಿ ಫಾರ್ ರಿಲೀಸ್ ಆಫ್ ಪೊಲಿಟಿಕಲ್ ಪ್ರಿಸನರ್ಸ್ ಇದರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆಯೆಂದು ಮಾಹಿತಿ ನೀಡಿದ್ದಾರೆ.







