ಚುನಾವಣಾ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಸಾಗಾಟ, ಮೂವರಿಗೆ ನ್ಯಾಯಾಂಗ ಬಂಧನ
ಅಡ್ಕಾರು, ಕುಕ್ಕುಜಡ್ಕಗಳಲ್ಲಿ ಪ್ರತ್ಯೇಕ ಘಟನೆ
ಸನತ್ ಅಡ್ಕಾರ್ ಸಹಿತ ಮೂವರಿಗೆ ನ್ಯಾಯಾಂಗ ಬಂಧನ
ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಪ್ರಚಾರದ ಕೊನೆಯ ದಿನವಾದ ಗುರುವಾರ ರಾತ್ರಿ ವೇಳೆ ಮದ್ಯದ ಬಾಟಲಿ ಸಾಗಿಸುತ್ತಿದ್ದ ಜಾಲ್ಸೂರು ಗ್ರಾ.ಪಂ. ಮಾಜಿ ಸದಸ್ಯನನ್ನು ಸುಳ್ಯ ಪೋಲಿಸರು ಬಂಧಿಸಿದ್ದಾರೆ.
ಜಾಲ್ಸೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸನತ್ ಅಡ್ಕಾರ್ ಎಂಬವರು ತಮ್ಮ ವಾಹನದಲ್ಲಿ ಸುಮಾರು 60ಬಾಟಲಿಕ್ಕಿಂತಲೂ ಜಾಸ್ತಿ ಮದ್ಯದ ಬಾಟಲಿಯನ್ನು ಸಾಗಿಸುತ್ತಿದ್ದ ವೇಳೆ ಅಡ್ಕಾರು ಬಳಿ ಸುಳ್ಯ ಪೋಲಿಸರು ಮಾಲು ಸಮೇತ ಬಂಧಿಸಿದರು. 10 ಸಾವಿರ ರೂಪಾಯಿ ಮೌಲ್ಯದ ಮದ್ಯ ಹಾಗೂ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆರೋಪಿಯನ್ನು ಶುಕ್ರವಾರ ಸುಳ್ಯ ನ್ಯಾಯಾಲಯಕ್ಕೆ ಹಾಜುಪಡಿಸಿದಾಗ 15 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬೈಕಿನಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಕುಕ್ಕುಜಡ್ಕ ಬಳಿ ಬಂಧಿಸಿದ್ದಾರೆ. ಐವರ್ನಾಡಿನ ಸುಬ್ಬಣ್ಣ ಹಾಗೂ ಮಂಜಲಪಾದೆಯ ಸುಂದರ ಬಂಧಿತ ಆರೋಪಿಗಳು. ಬೈಕ್ ಹಾಗೂ 4,800 ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.





