ಸುಳ್ಯ: ವಿದ್ಯುತ್ ಸಮಸ್ಯೆ ವಿರುದ್ಧ ತೀವ್ರಗೊಂಡ ಆಕ್ರೋಶ
- ಮಾರ್ಚ್ 1ರಂದು ಸವಿತಾ ಸಮಾಜದಿಂದ ಪ್ರತಿಭಟನಾ ಜಾಥಾ - ಗಾಂಧಿ ಚಿಂತನೆ ವೇದಿಕೆಯಿಂದ ಮಾರ್ಚ್ 8ರಂದು ಉಪವಾಸ ಸತ್ಯಾಗ್ರಹ
ಸುಳ್ಯ: ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು, ಸುಳ್ಯದ ಸವಿತಾ ಸಮಾಜದವರು ಮಾರ್ಚ್ 1ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಗಾಂಧಿ ಚಿಂತನೆ ವೇದಿಕೆಯಿಂದ ಮಾರ್ಚ್ 8ರಂದು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.
ವಿದ್ಯುತ್ ಸಮಸ್ಯೆ ನಿವಾರಣೆಗೆ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿತಿ ಮಾರ್ಚ್ 1ರಂದು ಬೃಹತ್ ಪ್ರತಿಭಟನಾ ಜಾಥಾ ನಡೆಸಲು ಸುಳ್ಯ ತಾಲೂಕು ಸವಿತಾ ಸಮಾಜ ನಿರ್ಧರಿಸಿದೆ. ಸವಿತಾ ಸಮಾಜದ ಅಧ್ಯಕ್ಷ ದಿನೇಶ್ ಗುತ್ತಿಗಾರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಬೆಳಿಗ್ಗೆ 9 ಗಂಟೆಗೆ ಸುಳ್ಯದ ಶ್ರೀಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸೇರಿ 9-30ಕ್ಕೆ ಪ್ರತಿಭಟನಾ ಜಾಥಾ ಹೊರಡುವುದು. ರಥಬೀದಿ, ಬಸ್ ನಿಲ್ದಾಣ, ಶ್ರೀರಾಂಪೇಟೆ, ಜ್ಯೂನಿಯರ್ ಕಾಲೇಜು ರಸ್ತೆ, ಮೆಸ್ಕಾಂ ಕಚೇರಿ ಎದುರಿನಿಂದ ತಾಲೂಕು ಕಚೇರಿಗೆ ಸಮಾವೇಶಗೊಂಡು ಅಲ್ಲಿ ಸಭೆ ನಡೆಯಲಿದೆ. ಬಳಿಕ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದವರು ಹೇಳಿದರು
ತಾಲೂಕಿನಲ್ಲಿ ಸವಿತಾ ಸಮಾಜಕ್ಕೆ ಸೇರಿದ 200 ಮನೆಗಳಿದ್ದು, ಮನೆಗೊಬ್ಬರಂತೆ 200 ಮಂದಿ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಇತರ ಎಲ್ಲಾ ಸಮಾಜದವರೂ ಇದರಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು. ದೇಶವನ್ನು ಕಾಡುತ್ತಿರುವ ಭಯೋತ್ಪಾದಕ ಕೃತ್ಯಗಳು ಹಾಗೂ ದೇಶದ ಆಂತರಿಕ ಒಗ್ಗಟ್ಟಿಗೆ ಮಾರಕವಾಗಿರುವ ಕೋಮುಗಲಭೆಗಳ ವಿರುದ್ಧವೂ ಈ ಕಾರ್ಯಕ್ರಮದಲ್ಲಿ ಧ್ವನಿ ಎತ್ತಲಾಗುತ್ತದೆ ಎಂದು ಸಮಿತಿ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಹೇಳಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಮಂಡೆಕೋಲು, ಮಹಿಳಾ ಘಟಕದ ಅಧ್ಯಕ್ಷೆ ಪಲ್ಲವಿ ಮಂಡೆಕೋಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಉಪವಾಸ:
ಸುಳ್ಯಕ್ಕೆ 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ ಕುರಿತು ಅಧಿಕಾರಿಗಳು ಹಾಗೂ ಜನಪ್ರನಿಧಿಗಳು ಧನಾತ್ಮಕವಾಗಿ ಚಿಂತನೆ ನಡೆಸದೇ ಇರುವುದರಿಂದ ಮಾರ್ಚ್ 8ರಂದು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾಗಿ ಗಾಂಧಿ ಚಿಂತನೆ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಸಮಸ್ಯೆ ಕುರಿತು ಪತ್ರಿಕೆ ಮಾಧ್ಯಮಗಳಲ್ಲಿ ಸಾಕಷ್ಟು ಬರಹ, ಚಿಂತನೆಗಳು ನಡೆದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಯನ್ನು ಧನಾತ್ಮಕವಾಗಿ ಸ್ಪಂದಿಸದೇ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದ ಎದುರು ಭಾಗದಲ್ಲಿ ಸತ್ಯಾಗ್ರಹ ನಡೆಯಲಿದ್ದು, ಎಲ್ಲಾ ಸಂಘ-ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಬೆಂಬಲ ನೀಡಬೇಕು ಎಂದವರು ಮನವಿ ಮಾಡಿದರು. ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಆಗಮಿಸಿ ಕಾಲಬದ್ಧ ಯೋಜನೆ ಪ್ರಕಟಿಸಬೇಕು. ಅದನ್ನು ಲಘುವಾಗಿ ತೆಗೆದುಕೊಂಡರೆ ಉಪವಾಸ ಸತ್ಯಾಗ್ರಹವನ್ನು ಮರು ದಿನಕ್ಕೂ ಮುಂದುವರಿಸಲಾಗುತ್ತದೆ ಎಂದವರು ಹೇಳಿದರು.







