ಬಾಯ್ ಬಾಯ್ ಘರ್ ವಾಪ್ಸಿ ,ನಾಗ್ಪುರದಲ್ಲೇ ಬೌದ್ಧ ಧರ್ಮ ಸ್ವೀಕರಿಸಲು ಸಜ್ಜಾದ ಒಬಿಸಿಯ 5 ಲಕ್ಷ ಮಂದಿ !

ನಾಗಪುರ,ಫೆ.19: ಹಿಂದು ಧರ್ಮದಲ್ಲಿನ ಎಂದೂ ಅಳಿಯದ ಮನುಸ್ಮತಿಯ ಜಾತಿ ವ್ಯವಸ್ಥೆಗೆ ಶತಮಾನಗಳಿಂದಲೂ ಬಲಿಪಶುಗಳಾಗಿರುವ ಇತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಸೇರಿದ ನಾಗಪುರದ ಸುಮಾರು ಐದು ಲಕ್ಷ ಜನರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ.
ವಿಶೇಷವೆಂದರೆ , ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಂದ ಮೇಲೆ ಘರ್ ವಾಪ್ಸಿಯ ಹೆಸರಲ್ಲಿ ಮುಸ್ಲಿಮರು ಹಾಗು ಕ್ರೈಸ್ತರ ' ಮರುಮತಾಂತರ ' ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ಆರೆಸ್ಸೆಸ್ ನ ಪ್ರಧಾನ ಕಚೇರಿ ಇರುವ ನಾಗ್ಪುರದಲ್ಲೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳು ಬೌದ್ಧ ಧರ್ಮ ಸ್ವೀಕರಿಸಲು ಮುಂದಾಗಿರುವುದು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸತ್ಯಶೋಧಕ ಒಬಿಸಿ ಪರಿಷದ್‌ನ ಅಧ್ಯಕ್ಷ ಹನುಮಂತ ಉಪ್ರೆ ಅವರು, ಸುದೀರ್ಘ ಕಾಲದಿಂದಲೂ ಹಿಂದು ಧರ್ಮದಲ್ಲಿದ್ದರೂ ನಮ್ಮನ್ನು ಶೂದ್ರರಂತೆ ನಡೆಸಿಕೊಳ್ಳಲಾಗುತ್ತಿದೆ. ಹೀಗಾಗಿ ನಮ್ಮ ಮೂಲಧರ್ಮವಾಗಿರುವ ಬೌದ್ಧಧರ್ಮಕ್ಕೆ ಮರಳುವುದು ಒಳ್ಳೆಯದು ಎಂದು ನಾವು ಭಾವಿಸಿದ್ದೇವೆ. ಒಬಿಸಿಗಳು ನಾಗವಂಶಿಗಳಾಗಿದ್ದಾರೆ,ಹೀಗಾಗಿ ಬೌದ್ಧಧರ್ಮ ನಮ್ಮ ನಿಜವಾದ ಧರ್ಮವಾಗಿದೆ. ಬೌದ್ಧಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ನಮ್ಮ ‘‘ಘರ್ ವಾಪ್ಸಿ’’ಮಾಡಲು ನಾವು ಬಯಸಿದ್ದೇವೆ ಎಂದು ಹೇಳಿದರು.
ತಮ್ಮ ಜಾತಿಯ ಕಾರಣದಿಂದಾಗಿ ನಿರಂತರ ತಾರತಮ್ಯಕ್ಕೊಳಗಾಗಿ ಬೇಸತ್ತಿರುವ ಒಬಿಸಿಗೆ ಸೇರಿದ ಭಾರೀ ಸಂಖ್ಯೆಯ ಜನರು ಬೌದ್ಧಧರ್ಮಕ್ಕೆ ಸಾಮೂಹಿಕವಾಗಿ ಮತಾಂತರಗೊಳ್ಳಲು ಈಗಾಗಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ.
ಈ ಮತಾಂತರ ಆಂದೋಲನಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ ಮರಾಠಾ ಸೇವಾ ಸಂಘದ ಅಂಗಸಂಸ್ಥೆ ಸಂಭಾಜಿ ಬ್ರಿಗೇಡ್‌ನ ಅಧ್ಯಕ್ಷ ಪ್ರವೀಣ್ ಗಾಯಕ್ವಾಡ ಅವರು, ಧರ್ಮವು ಈಗ ಅಪ್ರಸ್ತುತವಾಗಿದ್ದು ಈ ಕಾಲದಲ್ಲಿ ಅದು ಬೆಳೆಯಲು ಅವಕಾಶ ನೀಡಬಾರದು ಎಂದು ಒತ್ತಿ ಹೇಳಿದರು. ಆರೆಸ್ಸೆಸ್ ಆರಂಭಿಸಿರುವ ‘‘ಘರ್ ವಾಪ್ಸಿ’’ಕುರಿತು ಮಾತನಾಡಿದ ಅವರು, ಜನರನ್ನು ಹಿಂದು ಧರ್ಮಕ್ಕೆ ಮತಾಂತರಿಸುವ ಮುನ್ನ ಅವರನ್ನು ಯಾವ ವರ್ಗ ಮತ್ತು ಜಾತಿಗೆ ಸೇರಿಸಿಕೊಳ್ಳಲಾಗುತ್ತದೆ ಎನ್ನುವುದು ನಿರ್ಧಾರಗೊಳ್ಳುವುದು ಅಗತ್ಯವಾಗಿದೆ ಎಂದರು.
ಮಹಾರಾಷ್ಟ್ರದಲ್ಲಿನ ಐದು ಕೋಟಿ ಒಬಿಸಿಗಳ ವಿರುದ್ಧದ ತಾರತಮ್ಯದಿಂದಾಗಿ 2016ರೊಳಗೆ ಐದು ಲಕ್ಷ ಜನರು ಬೌದ್ಧಧರ್ಮವನ್ನು ಸೇರಲಿದ್ದಾರೆ ಎಂದು ಉಪ್ರೆ ಹೇಳಿದರು.
ಈ ಆಂದೋಲನವು ಭಾರತವನ್ನು ನಿಧಾನವಾಗಿ,ಆದರೆ ಏಕಪ್ರಕಾರವಾಗಿ ಹಿಂದು ರಾಷ್ಟ್ರವನ್ನಾಗಿಸುವ ಆರೆಸ್ಸೆಸ್‌ನ ಘರ್ ವಾಪ್ಸಿ ಅಜೆಂಡಾಕ್ಕೆ ಬೆದರಿಕೆಯಾಗಲಿದೆ.







