ಅಟಲ್ ಪಿಂಚಣಿ ಯೋಜನೆಗೆ ಟೈಲರ್‌ಗಳ ವಿರೋಧ, ಮಾರ್ಚ್ 1ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ
ಸುಳ್ಯ: ಅಟಲ್ ಪಿಂಚಣಿ ಯೋಜನೆ 40ರಿಂದ 60 ವರ್ಷದೊಳಗಿನವರಿಗೆ ಮಾತ್ರ ಸದಸ್ಯರಾಗಲು ಅವಕಾಶ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಟೈಲರ್ಸ್ ಎಸೋಸಿಯೇಶನ್‌ನ ಜಿಲ್ಲಾ ಸಮಿತಿ ವತಿಯಿಂದ ಮಾರ್ಚ್ 1ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಸಮಿತಿಯ ಸುಳ್ಯ ಘಟಕ ಬೆಂಬಲ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ವಿಜಯಕುಮಾರ್ ರೈ, 2008ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದ್ದು, ಅದರಂತೆ ಸಾಮಾಜಿಕ ಭದ್ರತಾ ಮಂಡಳಿಯನ್ನು ರಚಿಸಿತ್ತು. ದರ್ಜಿಗಳು ಸೇರಿದಂತೆ ಇತರ ಅಸಂಘಟಿತ ಕಾರ್ಮಿಕರನ್ನು ಸೇರಿಸಿಕೋಂಡು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಸದಸ್ಯರು ಪ್ರತಿ ತಿಂಗಳಿಗೆ 100 ರೂಪಾಯಿ ಪಾವತಿಸಿದರೆ ಕೇಂದ್ರ ಸರ್ಕಾರ ವಾರ್ಷಿಕ 1200 ಹಾಗೂ ರಾಜ್ಯ ಸರ್ಕಾರ ವಾರ್ಷಿಕ 1000ವನ್ನು ಭರಿಸುತ್ತಿತ್ತು. ಕಳೆದ ವರ್ಷ ರಾಜ್ಯ ಸರ್ಕಾರ ತನ್ನ ಅನುದಾನವನ್ನು ಪಾವತಿಸಿಲ್ಲ. ಕೇಂದ್ರ ಈ ಯೋಜನೆ ಬದಲಿಗೆ ಅಟಲ್ ಪಿಂಚಣಿ ಯೋಜನೆ ಆರಂಭಿಸಿದ್ದು, ಅದರಲ್ಲಿ 40 ವರ್ಷ ದಾಟಿದವರಿಗೆ ಸದಸ್ಯರಾಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಟೈಲರ್‌ಗಳ 40 ವರ್ಷದಿಂದ 60 ವರ್ಷದೊಳಿಗಿನವರೇ ಹೆಚ್ಚಾಗಿದ್ದು, ಯೋಜನೆ ಪ್ರಯೋಜನ ಇವರಿಗೂ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದರು. ಮಾರ್ಚಿ 1ರಂದು ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ಸುಳ್ಯದಿಂದ ಸುಮಾರು 200 ಮಂದಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಲಿಗೋಧರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





