20 ವರ್ಷಗಳಿಂದ ಶಾಶ್ವತ ಯೋಜನೆಗಳಾಗಿಲ್ಲ : ಮಾಜಿ ಸಚಿವ ಅಮರನಾಥ ಶೆಟ್ಟಿ ಆರೋಪ

ಮೂಡುಬಿದಿರೆ:ನಾನು ಶಾಸಕ ನಂತರ ಮಂತ್ರಿಯಾಗಿದ್ದಾಗ ನಡೆದ ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿದರೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಹೊಸ ಶಾಶ್ವತ ಯೋಜನೆಗಳು ಆಗಿಲ್ಲ. ಜನಪ್ರತಿನಿಧಿಗಳ ಈ ನಿರ್ಲಕ್ಷ್ಯದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಹಿನ್ನಡೆ ಕಂಡಿದ್ದು ಈ ಬಾರಿಯ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಮತದಾರರು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಮುಖಂಡ, ಮಾಜಿ ಸಚಿವ ಅಮರನಾಥ ಶೆಟ್ಟಿ ಹೇಳಿದ್ದಾರೆ.
ಶುಕ್ರವಾರ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋದಲ್ಲೆಲ್ಲ ಜನ ನನ್ನ ಅವಧಿಯಲ್ಲಾಗಿರುವ ಶಾಶ್ವತ ಯೋಜನೆಗಳನ್ನು ನೆನಪಿಸುತ್ತಿರುವುದು ಮತದಾರರು ಜೆಡಿಎಸ್‌ಗೆ ಒಲವು ತೋರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕಡಂದಲೆ ಮುಕ್ಕಡಪ್ಪು ರಸ್ತೆ, ಪುಚ್ಚೆಮೊಗರು ವೆಂಟೆಡ್ ಡ್ಯಾಮ್, ಕೊಆಪರೇಟಿವ್ ಟ್ರೈನಿಂಗ್ ಸೆಂಟರ್, ಅಗ್ನಿಶಾಮಕ ದಳ, ಮುಲ್ಕಿ ಮತ್ತು ಮೂಡುಬಿದಿರೆಗೆ ನಾಢಕಛೇರಿ ಮತ್ತಿತರರ ನನ್ನ ಅವಧಿಯಲ್ಲಾದ ದೀರ್ಘಾವಧಿ ಯೋಜೆನೆಗಳನ್ನು ಹೊರತುಪಡಿಸಿದರೆ ಹೊಸ ಯೋಜನೆಗಳು ಇಲ್ಲಿಗೆ ಬಂದಿಲ್ಲ. ಜೆಡಿಎಸ್ ಸರಕಾರದ ಅವಧಿಯಲ್ಲಾಗಿರುವ ಸಾಧನೆಗಳು ಜಿಪಂ, ತಾಪಂ ಚುನಾವಣೆಯಲ್ಲಿ ನಮಗೆ ನೆರವಾಗಲಿದೆ ಎಂದರು. ಪುತ್ತಿಗೆ ಜಿಪಂ ಅಭ್ಯರ್ಥಿ ದಿವಾಕರ ಶೆಟ್ಟಿ, ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಶ್ವಿನ್ ಪಿರೇರಾ, ಜೆಡಿಎಸ್ ಮುಖಂಡ ಜೆರಾಲ್ಡ್ ಮೆಂಡಿಸ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





