ಸರ್ಕಾರದ ಅಭಿವೃದ್ಧಿ ಯೋಜನೆ ಮರೀಚಿಕೆ ಈ ಬಡ ಕುಟುಂಬಕ್ಕೆ
24 ವರ್ಷದಿಂದ ಜೋಪಡಿಯಲ್ಲಿ ವಾಸಿಸುತ್ತಿದೆ ದಲಿತ ಕುಟುಂಬ,

ಪುತ್ತೂರು: ದಲಿತರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಅದನ್ನು ಪ್ರಚಾರ ಮಾಡುತ್ತಾ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಆದರೆ ಸರ್ಕಾರ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲುಪಿದೆಯೇ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಸರಿಯಾದ ಸೂರಿಲ್ಲದೆ ಕಳೆದ 24 ವರ್ಷಗಳಿಂದ ಜೋಪಡಿಯಲ್ಲಿಯೇ ಬದುಕುತ್ತಿರುವ ಈ ಬಡ ಕುಟುಂಬ. ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಮುಂಡಾಲ ಎಂಬಲ್ಲಿನ ಮುದರ ಮುಗೇರ ಎಂಬವರ ಕುಟುಂಬ ಜೋಪಡಿ ವಾಸಿಗಳು. ಮುದರ ಮುಗೇರ ಅವರು ತನ್ನ ಪತ್ನಿ ಮತ್ತು 5 ಮಕ್ಕಳೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ. ಗಡ್ಡದ ನಡುವೆ ಇಳಿಜಾರು ಪ್ರದೇಶದಲ್ಲಿ ಇವರ ಜೋಪಡಿಯಿದ್ದು, ಇಲ್ಲಿಗೆ ಹೋಗಲು ಸರಿಯಾದ ರಸ್ತೆಯೂ ಇಲ್ಲ. ಮರದ ತೊಲೆಗಳ ಕಂಬದಲ್ಲಿ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ತೆಂಗಿನ ಮಡಲಿನಿಂದ ನಿರ್ಮಿಸಿದ ಅಡ್ಡಗೋಡೆ ಹಾಗೂ ಬಾಗಿಲುಗಳುಗಳಿರು ಈ ಮನೆಯಲ್ಲಿ ಗಾಳಿ ಮಳೆಗೆ ಹೆದರಿಕೊಂಡೇ ಈ ಕುಟುಂಬ ಜೀವಿಸುತ್ತಿದೆ.
ಮನೆಗೆ ಮೂಲಭೂತ ಸೌರ್ಕರ್ಯಗಳಾವುದೂ ಇಲ್ಲದೆ ಕನಿಷ್ಠ ಶೌಚಾಲಯವೂ ಇಲ್ಲದ ಈ ಕುಟುಂಬ ಬಯಲು ಶೌಚಸ್ನಾನವನ್ನೇ ನಂಬಿಕೊಂಡಿದೆ. 0.92 ಎಕ್ರೆ ತನ್ನದೇ ಆದ ಜಮೀನು ಹೊಂದಿರುವ ಇವರು ಕೂಲಿ ಕಾರ್ಮಿಕರಾಗಿದ್ದು ಆರ್ಥಿಕವಾಗಿ ತೀರಾ ದುರ್ಬಲರಾಗಿದ್ದಾರೆ. ಮನೆ ನಿರ್ಮಾಣಕ್ಕಾಗಿ ಸರ್ಕಾರದ ನೆರವಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಈ ತನಕ ಮನೆ ಮಂಜೂರಾತಿಗೊಂಡಿಲ್ಲ. ಕಳೆದ 24 ವರ್ಷದಲ್ಲಿ 10 ಕ್ಕೂ ಹೆಚ್ಚು ಅರ್ಜಿ ಹಾಕಿದ್ದೇನೆ. ಅದರೆ ನನಗೆ ಮನೆ ಸಿಕ್ಕಿಲ್ಲ ಎನ್ನುತ್ತಾರೆ ಮುದರ ಮುಗೇರ. 7 ಮಂದಿಯ ತುಂಬು ಸಂಸಾರ ಮುದರ ಅವರದ್ದು. 5 ಜನ ಮಕ್ಕಳಲ್ಲಿ ಇಬ್ಬರು ಕೂಲಿ ಕೆಲಸಕ್ಕೆ ತೆರಳುತ್ತಾರೆ ಉಳಿದವರು ಕಲಿಯುತ್ತಿದ್ದಾರೆ. ಸರಿಯಾದ ಗೋಡೆ ಬಾಗಿಲೂ ಇಲ್ಲದ ಕಾರಣ ಮಳೆ ಗಾಳಿಗೆ ಯಾವಾಗ ಮುರಿದು ಬೀಳುತ್ತದೋ ಎಂಬ ಆತಂಕದಲ್ಲಿ ಮನೆ ಮಂದಿ ಪ್ರತಿದಿನವೂ ಜೀವನ ಸಾಗಿಸುತ್ತಿದ್ದಾರೆ. ಮುದರ ಅವರು ತನ್ನ ಪತ್ನಿ ಭಾಗೀರತಿ ಹೆಸರಿನಲ್ಲಿ ಹತ್ತು ಹಲವು ಬಾರಿ ಗ್ರಾಪಂ ಹಾಗೂ ಸಂಬಂಸಿದ ಇಲಾಖೆಗೆ ಮನೆ ನಿರ್ಮಾಣ ಅನುದಾನಕ್ಕೆ ಅರ್ಜಿ ಹಾಕಿದ್ದಾರೆ. ಬಸವ ವಸತಿ ಯೋಜನೆಯಡಿಯಲ್ಲೂ ಅರ್ಜಿ ಸಲ್ಲಿಸಿದ್ದಾರೆ. ಆದರೆ ಆದೆಲ್ಲವೂ ವ್ಯರ್ಥವಾಗಿದೆ. ಈ ಬಾರಿಯೂ ಅರ್ಜಿ ಸಲ್ಲಿಸಿದ್ದು ಅರಿಯಡ್ಕ ಗ್ರಾಪಂ ಕಚೇರಿಯಿಂದ ಪತ್ರ ಬಂದಿದ್ದು ಸ್ಥಳದ ದಾಖಲೆ ನೀಡುವಂತೆ ಕೇಳಿಕೊಳ್ಳಲಾಗಿದೆ.
ಈ ರೀತಿಯ ಪತ್ರಗಳು ಹಲವು ಬಾರಿ ಬಂದಿದೆ ಆದರೆ ಮನೆ ಮಾತ್ರ ಬಂದಿಲ್ಲ ಎಂಬುದು ಮುದರ ಮುಗೇರ ಅವರ ನೋವಿನ ನುಡಿ. ಕಳೆದ 24 ವರ್ಷಗಳಲ್ಲಿ ಈ ಬಡ ಕುಟುಂಬಕ್ಕೆ ಸೂರು ಒದಗಿಸಿ ಕೊಡಲು ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಸಾಧ್ಯವಾಗದೆ ಇರುವುದು ದುರಂತವೇ ಸರಿ. ಇನ್ನಾದರೂ ಸಂಬಂಧಿಸಿದ ಅಕಾರಿಗಳು ಇತ್ತ ಕಡೆ ಗಮನಹರಿಸಿ ಈ ಬಡ ದಲಿತ ಕುಟುಂಬವೊಂದು ನೆಮ್ಮದಿಯ ಜೀವನ ನಡೆಸಲು ವ್ಯವಸ್ಥೆ ಮಾಡಬೇಕಾಗಿದೆ.
ನಾನು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ನನ್ನ ದುಡಿಮೆ ಕುಟಂಬದ ಹೊಟ್ಟೆ ಹೊರೆಯಲೇ ಸಾಕಾಗುವುದಿಲ್ಲ. ಇನ್ನು ಹೊಸ ಮನೆ ಹೇಗೆ ಕಟ್ಟಲಿ. ಮನೆ ನೀಡುವಂತೆ ಅರ್ಜಿ ಹಾಕಿದ್ದೇನೆ ಆದರೆ ಇಲ್ಲಿಯವರೆಗೂ ಮನೆ ಮಂಜೂರಾಗಿಲ್ಲ. ಮನೆಯಲ್ಲಿ ಶೌಚಾಲಯವೂ ಇಲ್ಲದ ಕಾರಣ ಮಕ್ಕಳಿಗೆ ಸಮಸ್ಯೆಯಾಗಿದೆ. ಬೇಸಿಗೆಯಲ್ಲಿ ನೀರು ಸಿಗುವುದಿಲ್ಲ. ಗ್ರಾಪಂ ನೀರಿನ ವ್ಯವಸ್ಥೆ ಮಾಡುವಂತೆ ಅರ್ಜಿ ನೀಡಿದ್ದೇನೆ. ಆದರೆ ಈ ತನಕ ಸಿಕ್ಕಿಲ್ಲ. ವಿದ್ಯುತ್ ವ್ಯವಸ್ಥೆಯೂ ಇಲ್ಲದ ಕಾರಣ ಚಿಮಣಿ ದೀಪದಲ್ಲೇ ದಿನ ದೂಡುತ್ತಿದ್ದೇವೆ. ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರಾದ ಕಾರ್ಡ್ ಬಂದಿದೆ. ಅದರೆ ಹಣ ಸಿಕ್ಕಿಲ್ಲ. ಕೈಯಿಂದ ದುಡ್ಡು ಹಾಕಿ ಮಾಡುವ ತಾಕತ್ತು ನನಗಿಲ್ಲ. ಯಾರಾದರೂ ಮುಂದೆ ಬಂದು ನಮಗೊಂದು ಮನೆ ಕಟ್ಟಿಕೊಡಿ ಸರಕಾರದಿಂದ ಸಿಗುವ ಹಣವನ್ನು ಕಟ್ಟುವವರಿಗೆ ಕೊಡುತ್ತೇನೆ.
-ಮುದರ ಮುಗೇರ







