ಮಂಗಳೂರು : ಮೂವರ ತಂಡದಿಂದ ಯುವಕನಿಗೆ ಹಲ್ಲೆ - ಆರೋಪ

ಮಂಗಳೂರು, ಫೆ. 19: ಮೂವರ ತಂಡವೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಸಂಜೆ ನಡೆದಿದೆ.
ಸುರತ್ಕಲ್ ಸಮೀಪದ ಕಾನಾದ ನಿವಾಸಿ ಅಬ್ದುರ್ರಹ್ಮಾನ್ ಎಂಬವರ ಪುತ್ರ ಅನ್ಸಾರ್ (23) ಹಲ್ಲೆಗೊಳಗಾದ ಯುವಕ. ಹಲ್ಲೆಯಿಂದ ಕೈಯ ಬಲಭುಜ, ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಇಂದು ಸಂಜೆ ಸುಮಾರು 4 ಗಂಟೆ ಹೊತ್ತಿಗೆ ಸಹೋದರನನ್ನು ಪಣಂಬೂರು ಎನ್‌ಎಂಪಿಟಿ ಶಾಲೆಯಿಂದ ಬೈಕ್‌ನಲ್ಲಿ ಕರೆದುಕೊಂಡು ಕಾನಾದ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹೊನ್ನಕಟ್ಟೆಯ ಮಸೀದಿ ಬಳಿಯಲ್ಲಿ ಮೂವರು ಬೈಕ್‌ನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಅನ್ಸಾರ್ ಆರೋಪಿಸಿದ್ದಾರೆ.
ಕೋಡಿಕೆರೆಯ ನಿಖಿಲ್, ಕುಳಾಯಿಯ ಅರ್ಜುನ್ ಹಾಗೂ ಚಿತ್ರಾಪುರದ ಭರತ್ ಅವರು ನಾನು ಪ್ರಯಾಣಿಸುತ್ತಿದ್ದ ಬೈಕ್‌ನ್ನು ತಡೆದು ನಿಲ್ಲಿಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಈ ಮೂವರು ಆರೋಪಿಗಳು ಬೈಕ್‌ವೊಂದರಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳಲ್ಲಿ ನಿಖಿಲ್ ಚೂರಿಯಿಂದ ಇರಿದಿದ್ದರೆ, ಭರತ್ ತಲವಾರಿನಿಂದ ದಾಳಿ ನಡೆಸಿದ್ದಾರೆ. ನಿಖಿಲ್ ಎಂಬಾತ ಹಲ್ಲೆ ನಡೆಸುವ ಸಂದರ್ಭದಲ್ಲಿ ನನ್ನನ್ನು ಉದ್ದೇಶಿಸಿ ‘ನಿನಗೆ ಹೊಡೆದು ನಾನು ಲೋಕಣ್ಣ ಹಾಗೆ ಆಗಬೇಕು’ ಎಂದಿದ್ದಾನೆ ಎಂದು ಅನ್ಸಾರ್ ಆರೋಪ ಮಾಡಿದ್ದಾರೆ.
ಈ ಮೂವರು ಆರೋಪಿಗಳು ಕೋಡಿಕೆರೆಯಲ್ಲಿ ಗ್ಯಾಂಗ್‌ವೊಂದನ್ನು ಕಟ್ಟಿಕೊಂಡಿರುವ ಲೋಕೇಶ್ ಎಂಬಾತನ ಸಹಚರರು ಎಂದು ಹೇಳಲಾಗಿದೆ. ಲೋಕೇಶ್ ಪರಿಸರದಲ್ಲಿ ಲೋಕಣ್ಣ ಎಂಬ ಹೆಸರಿನಲ್ಲಿ ಪರಿಚರಿತನಾಗಿದ್ದು, ಈತನ ಸೂಚನೆಯ ಮೇರೆಗೆ ಈ ಮೂವರ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಪಣಂಬೂರು ಎಸಿಪಿ ಮದನ್ ಎ.ಗಾಂವ್ಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.








