ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಲು ಬಿಸಿಸಿಐ ಹಿಂದೇಟು
ಸುಪ್ರೀಂ ಕೋರ್ಟ್‌ಗೆ ಅಫಿದಾವಿಟ್ ಸಲ್ಲಿಸಲು ಎಸ್‌ಜಿಎಂ ನಿರ್ಧಾರ

ಮುಂಬೈ, ಫೆ.19: ಭಾರತದಲ್ಲಿ ಕ್ರಿಕೆಟ್ ಆಡಳಿತ ಸುಧಾರಣೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕಷ್ಟ ಸಾಧ್ಯ ಎಂದು ಬಿಸಿಸಿಐ ಸುಪ್ರೀಂ ಕೋರ್ಟ್‌ಗೆ ಇಂದು ಅಫಿದಾವಿತ್ ಸಲ್ಲಿಸಲು ನಿರ್ಧರಿಸಿದೆ.
ಮುಂಬೈನಲ್ಲಿ ಇಂದು ನಡೆದ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯಲ್ಲಿ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳ ಬಗ್ಗೆ ಚರ್ಚಿಸಲಾಯಿತು. ಶಿಫಾರಸುಗಳನ್ನು ಅನುಷ್ಠಾನಗೊಳಿಸುಲ್ಲಿ ಎದುರಾಗುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಸುಪ್ರೀಂ ಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಲು ಬಿಸಿಸಿಐನ ಸದಸ್ಯರು ಕಾರ್ಯದರ್ಶಿಗೆ ಅಧಿಕಾರ ನೀಡಿದರು.
ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆಯಲ್ಲಿ ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್‌ನ ಮುಂದಿಡುವ ವಿಚಾರದಲ್ಲಿ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಲೋಧಾ ಸಮಿತಿಯು ಮಾಡಿರುವ ಶಿಫಾರಸಿನಂತೆ ಪದಾಧಿಕಾರಿಗಳ ಅರ್ಹತೆ , ‘ಒಂದು ರಾಜ್ಯ, ಒಂದು ಮತ ’ ಅನುಷ್ಠಾನಗೊಳಿಸುವುದು ಬಿಸಿಸಿಐಗೆ ಅತ್ಯಂತ ಸವಾಲಿನ ವಿಚಾರವಾಗಿದೆ.
ಲೋಧಾ ಸಮಿತಿಯ ಶಿಫಾರಸುಗಳು ಸಾರ್ವಜನಿಕವಾಗಿ ಬಹಿರಂಗಗೊಂಡ ಬಳಿಕ ಮೊದಲ ಬಾರಿ ಬಿಸಿಸಿಐ ಇದೀಗ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಲೋಧಾ ಸಮಿತಿ ಶಿಫಾರಸಿನ ಅನುಷ್ಠಾನಕ್ಕೆ ರಾಜ್ಯ ಸಮಿತಿಗಳ ನಿಯಮಾವಳಿಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಪ್ರತ್ಯೇಕವಾಗಿ ಅಫಿದಾವಿತ್ ಸಲ್ಲಿಸಲು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಎಸ್‌ಜಿಎಂ ಅಧಿಕಾರ ನೀಡಿದೆ.
ಸಭೆಯಲ್ಲಿ 2016 ರಿಂದ 2023ರ ತನಕದ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿಯನ್ನು ಪುನರ್‌ನಿಗದಿಪಡಿಸುವ ಅಧಿಕಾರವನ್ನು ಸದಸ್ಯರು ಬಿಸಿಸಿಐನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ನೀಡಿದರು.
ಛತ್ತೀಸ್‌ಗಡ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪೂರ್ಣ ಸದಸ್ಯತ್ವ ನೀಡುವ ಪ್ರಸ್ತಾವನೆಯನ್ನು ಬಿಸಿಸಿಐ ಒಪ್ಪಿಕೊಂಡಿತು. ಛತ್ತಿಸ್‌ಗಡ ರಾಜ್ಯ ಸಂಸ್ಥೆಯನ್ನು ಕೇಂದ್ರ ವಲಯಕ್ಕೆ ಸೇರ್ಪಡೆಗೊಳಿಸಿ ರಣಜಿ ಟ್ರೋಫಿ ಸೇರಿದಂತೆ ಬಿಸಿಸಿಐನ ಎಲ್ಲ ಟೂರ್ನಮೆಂಟ್‌ಗಳಲ್ಲಿ ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ತಿರ್ಮಾನಿಸಲಾಯಿತು







