ದ.ಆಫ್ರಿಕ ತಂಡಕ್ಕೆ ಮರಳಲ್ಲ: ಗ್ರೇಮ್ ಸ್ಮಿತ್

ಜೋಹಾನ್ಸ್‌ಬರ್ಗ್, ಫೆ.19: ಇತ್ತೀಚೆಗೆ ದುಬೈನಲ್ಲಿ ಕೊನೆಗೊಂಡ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್(ಎಂಸಿಎಲ್)ನಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕದ ಮಾಜಿ ನಾಯಕ ಗ್ರೇಮ್ ಸ್ಮಿತ್ ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
2014ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದ 35ರ ಹರೆಯದ ಸ್ಮಿತ್ ಇತ್ತೀಚೆಗೆ ದಕ್ಷಿಣ ಆಫ್ರಿಕ ತಂಡ ಭಾರತದ ವಿರುದ್ಧ ಹೀನಾಯವಾಗಿ ಸೋತಾಗ ತಂಡಕ್ಕೆ ವಾಪಸಾಗುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಅವರು ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ಕುರಿತ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕಗೊಂಡಿದ್ದ ಸ್ಮಿತ್ ತನ್ನ ದೇಶದ ಪರ 117 ಟೆಸ್ಟ್, 197 ಏಕದಿನ ಹಾಗೂ 33 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ದಕ್ಷಿಣ ಆಫ್ರಿಕ ತಂಡ ಭಾರತ ವಿರುದ್ಧ ಟೆಸ್ಟ್ ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧ ಸ್ವದೇಶಿ ಸರಣಿಯನ್ನು ಕೈ ಚೆಲ್ಲಿತ್ತು. ವಿಶ್ವದ ನಂ.1 ಸ್ಥಾನವನ್ನು ಕಳೆದುಕೊಂಡಿತ್ತು. ಆಫ್ರಿಕದ ಕಳಪೆ ಪ್ರದರ್ಶನಕ್ಕೆ ದಕ್ಷಿಣ ಆಫ್ರಿಕ ತಂಡ ಹಾಗೂ ಮ್ಯಾನೇಜ್‌ಮೆಂಟ್ ಕಾರಣ ಎಂದು ಸ್ಮಿತ್ ಆರೋಪಿಸಿದ್ದರು.







