2ನೆ ಟೆಸ್ಟ್: ಸಿಡ್ಲ್ ಬದಲಿಗೆ ಪ್ಯಾಟಿನ್ಸನ್
ಮೆಲ್ಬೋರ್ನ್, ಫೆ.19: ನ್ಯೂಝಿಲೆಂಡ್ ವಿರುದ್ಧದ ಎರಡನೆ ಟೆಸ್ಟ್‌ಗೆ ಆಸ್ಟ್ರೇಲಿಯ ತಂಡ ಗಾಯಾಳು ಪೀಟರ್ ಸಿಡ್ಲ್ ಬದಲಿಗೆ ಜೇಮ್ಸ್ ಪ್ಯಾಟಿನ್ಸನ್‌ರನ್ನು ಆಯ್ಕೆ ಮಾಡಿದೆ. ಪ್ಯಾಟಿನ್ಸನ್ ಗಾಯದಿಂದಾಗಿ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರು.
ಇದೀಗ ಅವರು ಎರಡನೆ ಟೆಸ್ಟ್‌ನಲ್ಲಿ ಆಡಲಿದ್ದಾರೆ. ಮೊದಲ ಟೆಸ್ಟ್‌ನ ವೇಳೆ ಗಾಯಗೊಂಡಿರುವ ಪೀಟರ್ ಸಿಡ್ಲ್ ಬದಲಿಗೆ ಪ್ಯಾಟಿನ್ಸನ್ ಆಡುತ್ತಾರೆ ಎಂದು ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ತಿಳಿಸಿದ್ದಾರೆ. ಪ್ಯಾಟಿನ್ಸನ್ ಅವರು ಜೋಶ್ ಹೇಝಲ್‌ವುಡ್ ಹಾಗೂ ಜಾಕ್ಸನ್ ಬರ್ಡ್ ಅವರೊಂದಿಗೆ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ.
ಬ್ರಾಸ್‌ವೆಲ್ ಬದಲಿಗೆ ಹೆನ್ರಿ: ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಗಾಯಾಳು ವೇಗದ ಬೌಲರ್ ಡೌಗ್ ಬ್ರಾಸ್‌ವೆಲ್ ಬದಲಿಗೆ ಇನ್ನೋರ್ವ ವೇಗಿ ಮ್ಯಾಟ್ ಹೆನ್ರಿ ಆಡಲಿದ್ದಾರೆ ಎಂದು ನ್ಯೂಝಿಲೆಂಡ್ ನಾಯಕ ಬ್ರೆಂಡನ್ ಮೆಕಲಮ್ ಮಾಹಿತಿ ನೀಡಿದ್ದಾರೆ.
2ನೆ ಟೆಸ್ಟ್‌ನಲ್ಲಿ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಬೇಕೋ ಅಥವಾ ಮೂವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್‌ನ್ನು ಕಣಕ್ಕಿಳಿಸಬೇಕೋ ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎಂದು 101ನೆ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿರುವ ಮೆಕಲಮ್ ತಿಳಿಸಿದ್ದಾರೆ.







