ಉಪ್ಪಿನಂಗಡಿ: ‘ನೋಟಾ ಚಲಾವಣೆ’ಗೆ ಮನವಿ

ಉಪ್ಪಿನಂಗಡಿ, ಫೆ.19: ಜಿಲ್ಲೆಯ ಜೀವನದಿಯಾದ ನೇತ್ರಾವತಿ ನದಿ ತಿರುವಿನ ವಿಚಾರದಲ್ಲಿ ಜಿಲ್ಲೆಯ ಹಿತಾಸಕ್ತಿಯನ್ನು ಮರೆತ್ತಿದ್ದು, ಈ ಹಿನ್ನೆಲೆಯಲ್ಲಿ ಫೆ.20ರಂದು ನಡೆಯುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲಲ್ಲಿ ‘ನೋಟಾ ಚಲಾಯಿಸಿ ನೇತ್ರಾವತಿ ನದಿಯನ್ನು ಉಳಿಸಿ’ ಅಭಿಯಾನವನ್ನು ಜಿಲ್ಲೆಯ ಜನತೆ ಕೈಗೆತ್ತಿಕೊಳ್ಳಬೇಕೆಂದು ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಡಾ. ನಿರಂಜನ್ ರೈ ಮನವಿ ಮಾಡಿದ್ದಾರೆ.
ಉಪ್ಪಿನಂಗಡಿಯಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೇತ್ರಾವತಿ ನದಿ ವಿಷಯದಲ್ಲಿ ಜಿಲ್ಲೆಯನ್ನು ರಕ್ಷಿಸುವ ಹೊಣೆಗಾರಿಕೆಯಿಂದ ಎಲ್ಲ ಪಕ್ಷಗಳು ಕಡೆಗಣಿಸಿವೆ. ಜಿಲ್ಲೆಯ ಹಿತಾಸಕ್ತಿಯನ್ನು ಮರೆತ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಬೇಕಾಗಿದ್ದು, ರಾಜಕೀಯ ಪಕ್ಷಗಳ ನಿಲುವಿಗೆ ಜನರು ಪ್ರತಿರೋಧವನ್ನೊಡ್ಡಲು ಸೂಕ್ತ ಸಮಯ. ಈ ಬಾರಿ ಎಲ್ಲ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸುವ ಮೂಲಕ ನೆಲ-ಜಲವನ್ನು ಕಡೆಗಣಿಸಿದ ರಾಜಕೀಯ ನಾಯಕರಿಗೆ ಹೊಸ ಸಂದೇಶವನ್ನು ನೀಡಬೇಕು ಎಂದು ಹೇಳಿದರು.
ಸಹ್ಯಾದ್ರಿ ಸಂಚಯದ ನಾಯಕ ದಿನೇಶ್ ಹೊಳ್ಳ, ಶಶಿಧರ್ ಶೆಟ್ಟಿ, ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ನಾಯಕರಾದ ಪ್ರಶಾಂತ್ ಡಿಕೋಸ್ತ, ಕೈಲಾರ್‌ರಾಜ್ ಗೋಪಾಲ ಭಟ್, ಇರ್ಷಾದ್ ಯು.ಟಿ., ಯೂನಿಕ್ ಅಬ್ದುರ್ರಹ್ಮಾನ್, ಇಸ್ಮಾಯೀಲ್ ಕೆಂಪಿ, ಅರುಣ್, ಗಣೇಶ್, ನಾರಾಯಣ ಬಂಗೇರ ಉಪಸ್ಥಿತರಿದ್ದರು.





