ಕ್ರಮಕ್ಕೆ ಒತ್ತಾಯಿಸಿ ಪತ್ರಕರ್ತರ ಧರಣಿ
ವಕೀಲರಿಂದ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣ

ಬೆಂಗಳೂರು,ಫೆ.19: ದಿಲ್ಲಿಯ ಪಟಿಯಾಲ ಹೈಕೋರ್ಟ್‌ನ ಆವರಣದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ವಕೀಲರ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿ ಪ್ರೆಸ್‌ಕ್ಲಬ್ ಮುಂದೆ ಪತ್ರಕರ್ತರು ಧರಣಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಎಸ್.ಆರ್.ಆರಾಧ್ಯ, ಭಾರತ ಪ್ರಜಾಪ್ರಭುತ್ವ ದೇಶವಾಗಿದೆ. ಇಲ್ಲಿ ತಪ್ಪು ಮಾಡಿದವರನ್ನು ಶಿಕ್ಷಿಸಲು ನ್ಯಾಯಾಲಯವಿದೆ. ಇಂತಹ ದೇಶದಲ್ಲಿ ಕಾನೂನಿನ ಬಗ್ಗೆ ತಿಳಿವಳಿಕೆ ಇರುವಂತಹ ವಕೀಲರು ಗೂಂಡಾಗಿರಿ ನಡೆಸಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಟೀಕಿಸಿದರು. ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಾಕುಮಾರ್‌ನ ವಿಚಾರಣೆಗೆ ಸಂಬಂಧಿಸಿದ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಪಟಿಯಾಲ ಕೋರ್ಟ್ ಆವರಣದಲ್ಲಿ ನಡೆದಿರುವ ಹಲ್ಲೆಯು ಪತ್ರಿಕಾ ಸ್ವಾತಂತ್ರವನ್ನು, ಅಭಿವ್ಯಕ್ತಿ ಸ್ವಾತಂತ್ರವನ್ನು ದಮನ ಮಾಡುವ ಪ್ರಯತ್ನವಾಗಿದೆ ಎಂದ ಅವರು, ಹಿಂದೆ ಜನಾರ್ದನರೆಡ್ಡಿಯನ್ನು ವಿಚಾರಣೆಗೆ ಕರೆ ತಂದಾಗ ಬೆಂಗಳೂರಿನ ವಕೀಲರು ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದರು. ಈಗ ಅದು ದಿಲ್ಲಿಯಲ್ಲಿ ಮರುಕಳಿಸಿದೆ. ಇಂತಹ ಘಟನೆಗಳ ಹಿಂದೆ ದೊಡ್ಡ ಶಕ್ತಿಗಳ ಕೈವಾಡವಿರುತ್ತದೆ. ಅದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಜಾಪ್ರಭುತ್ವ ಉಳಿಯಲು ಪತ್ರಕರ್ತರ ಪಾತ್ರ ಅತ್ಯಂತ ಮುಖ್ಯವಾದುದಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ರಕ್ಷಣೆ ನೀಡಬೇಕು. ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವವರನ್ನು ಬಂಧಿಸಬೇಕು ಹಾಗೂ ಅವರನ್ನು ವೃತ್ತಿಯಿಂದ ವಜಾ ಮಾಡಬೇಕು ಎಂದು ಆರಾಧ್ಯ ಆಗ್ರಹಿಸಿದರು.
ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಎಸ್.ಶ್ರೀನಿವಾಸ್ ಮಾತನಾಡಿ, ದೇಶಪ್ರೇಮದ ಹೆಸರಿನಲ್ಲಿ ದೇಶದ್ರೋಹದ ಕೆಲಸಗಳನ್ನು ಮಾಡಲಾಗುತ್ತಿದೆ. ಈ ರೀತಿಯ ಗೂಂಡಾಗಿರಿಯನ್ನು ನಾವು ಸಹಿಸುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿನ ವಿಚಾರಗಳು ನೋಡುತ್ತಿದ್ದರೆ ಮುಂದಿನ ದಿನಗಳಲ್ಲಿ ವಿಚಾರ ಸ್ವಾತಂತ್ರದ ಮೇಲೆ ದಾಳಿ ನಡೆಯಲಿದೆ. ಹಾಗೂ ಭಾರತದ ಪತ್ರಿಕೋಧ್ಯಮ ಮತ್ತು ಪತ್ರಕರ್ತರಿಗೆ ರಕ್ಷಣೆ ಇಲ್ಲದಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ, ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅಗ್ನಿ ಪತ್ರಿಕೆಯ ವರದಿಗಾರನ ಮೇಲೆ ಕೆಲವು ಕೋಮುವಾದಿಗಳು ದಾಳಿ ನಡೆಸಿದರು. ಯಾವುದೇ ಒಂದು ಧರ್ಮದ, ಮೂಲಭೂತವಾದ ಸಿದ್ಧಾಂತದ ವಿರುದ್ಧ ಪ್ರಶ್ನಿಸಿಬಿಟ್ಟರೆ ಅವರ ಮೇಲೆ ದಾಳಿ ನಡೆಯುತ್ತಿರುತ್ತದೆ. ಅಭಿವ್ಯಕ್ತಿ ನಮ್ಮ ಪರಮೋಚ್ಚ ಹಕ್ಕು. ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.
ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ರಾಜಭವನದ ವರೆಗೆ ಪಾದಯಾತ್ರೆ ನಡೆಸಿ, ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಟಿವಿ ಜರ್ನಲಿಸ್ಟ್ ಸಂಘ, ಬೆಂಗಳೂರು ಪ್ರೆಸ್‌ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಹಲವಾರು ಪತ್ರಕರ್ತರು ಉಪಸ್ಥಿತರಿದ್ದರು.





