ಆರ್‌ಟಿಇ-ಆರ್‌ಟಿಐ ಕಾಯ್ದೆಗಳ ದುರುಪಯೋಗ: ಸದಾನಂದಗೌಡ ಅಸಮಾಧಾನ
ಎಜು ಸ್ಟೇಟಸ್ ಇನ್ ಕರ್ನಾಟಕ-ವಿಚಾರ ಸಂಕಿರಣ

ಬೆಂಗಳೂರು, ಫೆ.19: ದೇಶದ ಬಹುತೇಕ ಜನರನ್ನು ಗಮನದಲ್ಲಿರಿಸಿಕೊಂಡು ಸರಕಾರ ಜಾರಿಗೊಳಿಸಿದ ಆರ್‌ಟಿಇ ಮತ್ತು ಆರ್‌ಟಿಐ ಕಾಯ್ದೆಗಳು ಇಂದು ದುರುಪಯೋಗವಾಗುತ್ತಿವೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಜ್ಯ ಅನುದಾನ ರಹಿತ ಶಾಲಾಡಳಿತ ಮಂಡಳಿ ಆಯೋಜಿಸಿದ್ದ ಎಜು ಸ್ಟೇಟಸ್ ಇನ್ ಕರ್ನಾಟಕ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಬಹುತೇಕ ಜನರಿಗೆ ಸದುಪಯೋಗವಾಗಲೆಂದು ಸರಕಾರ ಆರ್‌ಟಿಇ ಮತ್ತು ಆರ್‌ಟಿಐ ಕಾಯ್ದೆಗಳನ್ನು ಅನುಷ್ಠಾನಗೊಳಿಸಿತು. ಆದರೆ ಈ ಶಾಸನಗಳನ್ನು ಇಂದು ದುರು ಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಸರಕಾರದಿಂದ ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರಕಾರಕ್ಕೆ ಜನತೆಯ ಸಹಕಾರ ಮುಖ್ಯ. ಯಾವ ಕಾರ್ಯದಲ್ಲಿ ಪಾರದಶರ್ಕತೆಯಿರುತ್ತದೆಯೋ ಅಲ್ಲಿ ಸದುದ್ದೇಶ ಈಡೇರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎಲ್ಲ ಕ್ಷೇತ್ರಗಳಲ್ಲಿ ಸಮಸ್ಯೆಗಳಿರುತ್ತವೆ. ಕೇಂದ್ರ ಸರಕಾರ ಬಜೆಟ್‌ನಲ್ಲಿ ನ್ಯಾಯಾಂಗಕ್ಕೆ ಶೇ0.5ರಷ್ಟು ಮಾತ್ರ ಅನುದಾನ ನೀಡುತ್ತಿದೆ.ಆದರೆ ಶಿಕ್ಷಣ ಕ್ಷೇತ್ರಕ್ಕೆ ವಾರ್ಷಿಕ ಶೇ. 10ರಿಂದ 15 ರಷ್ಟು ಅನುದಾನವನ್ನು ಬಜೆಟ್‌ನಲ್ಲಿ ಹೆಚ್ಚಳ ಮಾಡುತ್ತದೆ. ಆದರೂ ಶಿಕ್ಷಣ ಕ್ಷೇತ್ರ ಸಮಸ್ಯೆಗಳಿಂದ ವಿಮುಕ್ತಿ ಹೊಂದಿಲ್ಲ ಎಂದು ಹೇಳಿದರು.
ಅನುದಾನ ರಹಿತ ಖಾಸಗಿ ಶಾಲೆಗಳು ತಮ್ಮ ಸಮಸ್ಯೆಗಳ ಕುರಿತು ಬಜೆಟ್‌ಗೂ ಮುನ್ನ ಸಲಹೆ ಮತ್ತು ಮನವಿ ಸಲ್ಲಿಸಿದರೆ ಸಮಸ್ಯೆಗಳಿಗೆ ಸ್ಪಂದಿಸಬಹುದಿತ್ತು. ಆದರೆ ಬಜೆಟ್ ಅವಧಿ ಮುಗಿಯುವ ಹಂತದಲ್ಲಿರುವುದರಿಂದ ಬಗೆಹರಿಸಲು ಸರಕಾರಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದ ಅವರು, ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಮನವರಿಕೆ ಮಾಡುತ್ತೇನೆ ಎಂದು ಸದಾನಂದಗೌಡ ಭರವಸೆ ನೀಡಿದರು.
ವಿಚಾರ ಸಂಕಿರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ಮಾತನಾಡಿ, ಬಡ ಮತ್ತು ಮಾಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡಲು ಆರ್‌ಟಿಇ ಜಾರಿಗೆ ಬಂತು. ಆದರೆ ಈಗ ಈ ಕಾಯ್ದೆ ಸಮಸ್ಯೆಗಳಿಗೆ ಸಿಲುಕಿಕೊಂಡಿದೆ. ಈ ಸಮಸ್ಯೆಗಳಿಗೆ ಕೂಡಲೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಆರ್‌ಟಿಐ ಕಾಯ್ದೆಯಡಿ ಶಿಕ್ಷಣ ನೀಡುತ್ತಿರುವ ಶಾಲೆಗಳಿಗೆ ಶುಲ್ಕ ಮರು ಪಾವತಿ ನೀಡಲು ನಾವು ಸಿದ್ಧರಿದ್ದೇವೆ. ಮಾರ್ಚ್ ತಿಂಗಳ ಅಂತ್ಯದೊಳಗೆ ಆರ್‌ಟಿಐ ಕಾಯ್ದೆಯಡಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಾಲೆಗಳು ಲೆಕ್ಕ ಪರಿಶೋಧನ ವರದಿಯನ್ನು ಸಲ್ಲಿಸಬೇಕು. ಅನುದಾನ ರಹಿತ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಮುಂದಿನ ಬಜೆಟ್ ಅಧಿವೇಶನದೊಳಗಾಗಿ ಸರಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.





