ಕೇಂದ್ರದ ನಿಲುವು ಸ್ಪಷ್ಟಪಡಿಸಲು ಜೆಡಿಎಸ್ ಆಗ್ರಹ
ಕಳಸಾ-ಬಂಡೂರಿ ನಾಲಾ ಯೋಜನೆ
ಬೆಂಗಳೂರು, ಫೆ. 19: ನೂತನ ‘ಬೆಳೆ ವಿಮಾ ಯೋಜನೆ’ ಅನುಷ್ಠಾನ ಸಂಬಂಧ ಫೆ.27ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ‘ಕಳಸಾ- ಬಂಡೂರಿ’ ಯೋಜನೆ ಜಾರಿ ಸಂಬಂಧ ಸ್ಪಷ್ಟಣೆ ನೀಡಬೇಕು ಎಂದು ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಆಗ್ರಹಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಒಂದು ಅವಧಿಗೆ ರೈತರ ಎಲ್ಲ ಸಾಲ ಮನ್ನಾ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿ ಸಂಬಂಧ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಆರೋಪ-ಪ್ರತ್ಯಾರೋಪ ಮಾಡುವುದನ್ನು ನಿಲ್ಲಿಸಿ ಆ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ಕೇಂದ್ರ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಕೋರಿದರು.
ರಾಜ್ಯದ 136 ತಾಲೂಕುಗಳು ಬರ ಪೀಡಿತ ಎಂದು ಈಗಾಗಲೇ ಘೋಷಿಸಿದ್ದು, ನಿರ್ಲಕ್ಷತೆ ಸರಿಯಲ್ಲ. ಇನ್ನೂ ಎರಡ್ಮೂರು ತಿಂಗಳು ಮಳೆ ಬೀಳದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಮಸ್ಯೆ ಇತ್ಯರ್ಥ್ಯಕ್ಕೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಕಳಸಾ-ಬಂಡೂರಿ ಯೋಜನೆ ವಿವಾದ ಸಂಬಂಧ ಮಧ್ಯ ಪ್ರವೇಶ ಸಾಧ್ಯವಿಲ್ಲ ಎಂದು ರಾಜ್ಯ ಸರಕಾರಕ್ಕೆ ಬರೆದಿರುವ ಪತ್ರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ ಅವರು, ಯೋಜನೆ ಜಾರಿಗೆ ಆಗ್ರಹಿಸಿ 200ದಿನಗಳು ನಡೆಸಿದ ಹೋರಾಟವನ್ನು ಹಗುರವಾಗಿ ಪರಿಗಣಿಸಬಾರದು ಎಂದರು.
ಕಳಸಾ-ಬಂಡೂರಿ ನಾಲಾ ಯೋಜನೆ ಧಾರವಾಡ ವ್ಯಾಪ್ತಿಯ ನಾಲ್ಕೈದು ಜಿಲ್ಲೆಗಳ ಜನತೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲಿದೆ. ಆ ಹಿನ್ನೆಲೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಜನತೆ ಹೋರಾಟ ನಡೆಸುವುದು ಅನಿವಾರ್ಯ. ಹೀಗಾಗಿ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.





