ಖಾಸಗಿ ಕ್ಷೇತ್ರದತ್ತ ಯುವಜನರನ್ನು ನಿರ್ದೇಶಿಸುತ್ತಿರುವ ಕೊಲ್ಲಿ ದೇಶಗಳು
ಕುಸಿಯುತ್ತಿರುವ ತೈಲ ಬೆಲೆ ಪರಿಣಾಮ
ದುಬೈ, ಫೆ.19: ಪೆಟ್ರೋಡಾಲರ್‌ಗಳು ಕೊಲ್ಲಿಯ ಅರಬ್ ದೇಶಗಳಿಗೆ ದಶಕಗಳ ಕಾಲ ಸಂಪತ್ತಿನ ಹೊಳೆಯನ್ನೇ ಹರಿಸಿದವು. ಆಗ ಜನರಿಗೆ ತಕ್ಕಮಟ್ಟಿನ ಶಿಕ್ಷಣವನ್ನು ನೀಡಿ ಆರಾಮದಾಯಕ ಸರಕಾರಿ ಉದ್ಯೋಗವನ್ನು ನೀಡಿದರೆ ಸಾಕಿತ್ತು. ರಾಜಪ್ರಭುತ್ವಕ್ಕೆ ಯುವ ಜನರ ನಿಷ್ಠೆಯೂ ಲಭಿಸುತ್ತಿತ್ತು, ದೇಶದಲ್ಲಿ ಸ್ಥಿರತೆಯೂ ನೆಲೆಸಿತ್ತು.
ಆದರೆ, ಈಗ ಕಾಲ ಬದಲಾಗಿದೆ. ಕುಸಿಯುತ್ತಿರುವ ತೈಲ ಬೆಲೆಯಿಂದ ಕಂಗೆಟ್ಟಿರುವ ಕೊಲ್ಲಿ ಅರಬ್ ಸರಕಾರಗಳು, ಜಾಗತಿಕವಾಗಿ ಸ್ಪರ್ಧೆ ನೀಡಬಲ್ಲ ಉದ್ಯೋಗ ವಲಯದತ್ತ ತಮ್ಮ ಯುವ ಜನತೆಯನ್ನು ನಿರ್ದೇಶಿಸುತ್ತಿವೆ.
ಲಂಡನ್‌ನ ಇಂಪೀರಿಯಲ್ ಕಾಲೇಜ್ ವಿದ್ಯಾರ್ಥಿ ತಾಲಿಬ್ ಅಲ್ಹಿನೈ ತನ್ನ ಸಹಪಾಠಿಗಳೊಂದಿಗೆ ಸೇರಿ ಡ್ರೋನ್‌ನ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಇದು ಸರಕಾರಿ ಉದ್ಯೋಗ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಕೊಲ್ಲಿ ಯುವಜನತೆ ತಮ್ಮನ್ನು ತೊಡಗಿಸಿಕೊಳ್ಳಬಲ್ಲರು ಎಂಬ ಧನಾತ್ಮಕ ಸಂದೇಶವನ್ನು ಹರಡುವಲ್ಲಿ ಯಶಸ್ವಿಯಾಗಿದೆ. ಅವರ ಈ ಪ್ರತಿಕೃತಿ ‘‘ಉತ್ತಮ ಕೆಲಸಕ್ಕಾಗಿ ಡ್ರೋನ್’’ ಎಂಬ ಸರಕಾರಿ ಪ್ರಾಯೋಜಿತ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಗಳಿಸಿದೆ.
‘‘ಕೊಲ್ಲಿ ಅರಬ್ ಯುವಜನರು ತಮ್ಮ ಕಲ್ಪನೆಗಳನ್ನು ಬಳಸಿ ಜೀವನೋಪಾಯ ಗಳಿಸಲು ಕಾತರರಾಗಿದ್ದಾರೆ’’ ಎಂದು ಅಲ್ಹಿನೈ ಹೇಳಿದರು.
‘‘ತೈಲದ ಸಂಪತ್ತು ಕೊನೆಯವರೆಗೂ ನಮ್ಮ ಜೊತೆಗಿರಲಾರದು ಎಂಬ ವಾಸ್ತವವನ್ನು ನನ್ನ ತಲೆಮಾರು ಅರ್ಥಮಾಡಿಕೊಂಡಿದೆ. ವಿಶೇಷವಾಗಿ ಹೊಸತನದ ಉಪಕ್ರಮಗಳು ಮತ್ತು ತಂತ್ರಜ್ಞಾನದ ಮೂಲಕ ನಮ್ಮ ಸಮಾಜದ ಋಣ ಸಂದಾಯ ಮಾಡುವ ವೇಗವನ್ನು ಹೆಚ್ಚಿಸುವ ಅಗತ್ಯವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ಸೋಮಾರಿಗಳಾಗಿದ್ದೇವೆ ಎಂಬ ಸಾರ್ವತ್ರಿಕ ಅಭಿಪ್ರಾಯವನ್ನು ತೊಡೆದುಹಾಕುವ ಸಮಯ ಈಗ ಸನ್ನಿಹಿತವಾಗಿದೆ’’ ಎಂದು ಅವರು ಹೇಳುತ್ತಾರೆ.
ಕೊಲ್ಲಿ ಅರಬ್ ರಾಷ್ಟ್ರೀಯರ ಪೈಕಿ ಅರ್ಧಕ್ಕೂ ಹೆಚ್ಚಿನ ಮಂದಿ ಸರಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕುವೈತ್‌ನಲ್ಲಿ ಈ ಸಂಖ್ಯೆ ಸುಮಾರು 80 ಶೇಕಡ.
ಶೇ2.8ಕ್ಕೆ ಕುಸಿಯಲಿರುವ ಆರ್ಥಿಕತೆ
ಕೊಲ್ಲಿ ಸಹಕಾರ ಮಂಡಳಿಯ ಆರು ತೈಲ ರಫ್ತು ದೇಶಗಳ ಆರ್ಥಿಕ ಬೆಳವಣಿಗೆ 2014ರಲ್ಲಿದ್ದ 3.25 ಶೇಕಡದಿಂದ 2016ರಲ್ಲಿ 2.8 ಶೇಕಡಕ್ಕೆ ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಭವಿಷ್ಯ ನುಡಿದಿದೆ. ಅದೇ ವೇಳೆ ಖಾಸಗಿ ಕ್ಷೇತ್ರದ ಆರ್ಥಿಕ ಬೆಳವಣಿಗೆಯೂ ಕುಸಿದಿದೆ.
ಈ ಪರಿಸ್ಥಿತಿಯನ್ನು ಎದುರಿಸುವುದಕ್ಕಾಗಿ ಯುಎಇ ಮತ್ತು ಸೌದಿ ಅರೇಬಿಯಗಳು ವಿವಿಧ ಸೇವೆಗಳನ್ನು ಸರಕಾರಿ ಕ್ಷೇತ್ರದಿಂದ ಖಾಸಗಿ ಕ್ಷೇತ್ರಕ್ಕೆ ಪರಭಾರೆ ಮಾಡಲು ಈ ವರ್ಷ ಹಲವಾರು ಉಪಕ್ರಮಗಳನ್ನು ಆರಂಭಿಸಿವೆ.







