ಕನ್ಹಯ್ಯಾ ಬಿಡುಗಡೆಗೆ ಕಾರ್ನಾಡ್ ಆಗ್ರಹ

ಬೆಂಗಳೂರು, ಫೆ.19: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಹೀಗಾಗಿ ಆತನನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಆಗ್ರಹಿಸಿದ್ದಾರೆ.
ಶುಕ್ರವಾರ ‘ಜೆಎನ್‌ಯು ಉಳಿಸಿ-ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಿ’ ಎಂಬ ಘೋಷಣೆಯಡಿ ಎಸ್‌ಎಫ್‌ಐ ಸಂಘಟನೆ ನಗರದ ಪುರಭವನದ ಮುಂಭಾಗ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಸ್ವಾತಂತ್ರವಿದೆ. ಆ ಪ್ರಕಾರವಾಗಿಯೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಮಾತನಾಡಿದ್ದಾರೆ. ಅವರ ಮಾತುಗಳನ್ನು ಭಾರತೀಯರಾದ ಪ್ರತಿಯೊಬ್ಬರೂ ಒಪ್ಪಿಕೊಳ್ಳುವಂತಹದ್ದಾಗಿದೆ. ಹೀಗಾಗಿ ಕನ್ಹಯ್ಯಾನನ್ನು ಬಂಧಿಸಿರುವುದು ರಾಜಕೀಯ ಪಿತೂರಿಯಿಂದ ಕೂಡಿದೆ ಎಂದು ಅವರು ತಿಳಿಸಿದರು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ತಮಿಳುನಾಡು ಭಾರತದಿಂದ ಪ್ರತ್ಯೇಕವಾಗಲಿ ಎಂದು ಹೇಳಿಕೆ ನೀಡಿದ್ದರು. ಇದರಿಂದ ಯಾವ ಸಮಸ್ಯೆಯಾಗಿದೆ. ಹೀಗಾಗಿ ಹಿಂಸಾಚಾರ ನಡೆಸದೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಸ್ವಾತಂತ್ರ ಎಲ್ಲರಿಗೂ ಇದೆ ಎಂದು ಗಿರೀಶ್ ಕಾರ್ನಾಡ್ ಹೇಳಿದರು.
ಕನ್ಹಯ್ಯನ ಪ್ರಕರಣದಲ್ಲಿ ಪೊಲೀಸ್ ವ್ಯವಸ್ಥೆ ನಿಸ್ಪಕ್ಷಪಾತವಾಗಿ ತನಿಖೆ ನಡೆಸಿಲ್ಲ. ಕೆಲವು ಮೂಲಭೂತವಾದಿಗಳು ಕೊಟ್ಟ ದೂರನ್ನು ಆಧರಿಸಿ ಬಂಧಿಸಲಾಗಿದೆ. ಹಾಗೂ ನ್ಯಾಯಾಲಯದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ವಕೀಲರು ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಆದರೆ, ಈ ಬಗ್ಗೆ ಪೊಲೀಸ್ ಯಾವುದೇ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಕಾರಣ ಏನು ಎಂದು ಅವರು ಸಂಶಯ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಈ ಹಿಂದೆಯೇ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಕೋಮುವಾದಿ ಭಾರತದಲ್ಲಿ ಇರಲು ಬಯಸುವುದಿಲ್ಲವೆಂದು ಹೇಳಿದ್ದರು. ಈಗ ಅಂತಹ ಭಾರತದಲ್ಲಿ ನಾವು ಬದುಕುತ್ತಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಬಲಪಂಥೀಯ ವಿಚಾರಗಳನ್ನು ವಿರೋಧಿಸಿದ ಮಾತ್ರಕ್ಕೆ ವಿದ್ಯಾರ್ಥಿ ಮುಖಂಡ ಕನ್ಹಯ್ಯಾರಿಗೆ ದೇಶದ್ರೋಹಿ ಎಂಬ ಪಟ್ಟ ಕಟ್ಟಲಾಗಿದೆ. ಹಾಗಾದರೆ ನಾನು ಸಹ ಬಲಪಂಥೀಯ ವಿಚಾರಗಳನ್ನು ಒಪ್ಪುವುದಿಲ್ಲ. ಹೀಗಾಗಿ ಕೋಮುವಾದಿಗಳ ದೃಷ್ಟಿಯಲ್ಲಿ ನಾನೂ ದೇಶದ್ರೋಹಿಯೇ. ಒಟ್ಟಾರೆ ಕೋಮುವಾದಿ ಶಕ್ತಿಗಳು ಪ್ರಗತಿಪರ ವಿಚಾರಧಾರೆಯನ್ನು ಹೊಂದಿರುವವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದು ಅವರು ತಿಳಿಸಿದರು.
ಭಾರತದ ಸ್ವಾತಂತ್ರಕ್ಕಾಗಿ ಕಿಂಚಿತ್ತೂ ಕೊಡುಗೆ ನೀಡದ ಸಂಘಪರಿವಾರ, ಸ್ವಾತಂತ್ರದ ನಂತರದಲ್ಲಿ ಹಿಂಸಾಚಾರ ನಡೆಸುತ್ತಾ ಬರುತ್ತಿದೆ. ಮುಸ್ಲಿಮ್, ಕ್ರಿಶ್ಚಿಯನ್ ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಲಿತ, ಹಿಂದುಳಿದ ಸಮುದಾಯದ ವ್ಯಕ್ತಿಗಳಲ್ಲಿ ಕೋಮುವಾದಿ ಬೀಜಗಳನ್ನು ಬಿತ್ತುತ್ತಾ ಬರುತ್ತಿದೆ. ಕೋಮುವಾದಿಗಳ ಈ ಷಡ್ಯಂತ್ರವನ್ನು ತಡೆಯಬೇಕಾದರೆ ಪ್ರಗತಿಪರ ಸಂಘಟನೆಗಳು, ಸಾಹಿತಿಗಳು ಹಾಗೂ ವಿದ್ಯಾರ್ಥಿಗಳು ಒಟ್ಟಾಗಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು. ಹಿರಿಯ ಸಾಹಿತಿ ಡಾ.ಮರುಳಸಿದ್ದಪ್ಪ ಮಾತನಾಡಿ, ದೇಶದ ಭವಿಷ್ಯವನ್ನು ರೂಪಿಸುವ ವಿಶ್ವವಿದ್ಯಾನಿಲಯಗಳಲ್ಲಿ ಸಂಘಪರಿವಾರ ಜಾತಿ ತಾರತಮ್ಯ ಹಾಗೂ ಕೋಮುವಾದವನ್ನು ಬಿತ್ತುವ ಮೂಲಕ ವಿಶ್ವವಿದ್ಯಾನಿಲಯದ ಘನತೆಯನ್ನು ಹಾಳು ಮಾಡುತ್ತಿದೆ. ಇದರಿಂದ ದೇಶದ ಭವಿಷ್ಯ ಕುಂಠಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಹಾಗೂ ಸಾಹಿತಿ ಲಲಿತಾ ನಾಯಕ್, ಪತ್ರಕರ್ತೆ ಗೌರಿ ಲಂಕೇಶ್, ದಸಂಸ ಮುಖಂಡ ಮಾವಳ್ಳಿ ಶಂಕರ್, ಹಿಂದುಳಿದ ವರ್ಗಗಳ ಮುಖಂಡ ನರಸಿಂಹಯ್ಯ, ಮಾನವ ಹಕ್ಕುಗಳ ಹೋರಾಟಗಾರ ನಗರಗೆರೆ ರಮೇಶ್, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಂಬರೀಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೇಶದಲ್ಲಿ ಎಬಿವಿಪಿ ಅಪಾಯಕಾರಿ ಸಂಘಟನೆಯಾಗಿದ್ದು, ಒಂದು ವೇಳೆ ದೇಶ ವಿಭಜನೆಯಾಗುವುದಾದರೆ ಅದು ಎಬಿವಿಪಿ ಸಂಘಟನೆಯ ಷಡ್ಯಂತ್ರದಿಂದ ಮಾತ್ರ ಸಾಧ್ಯ. ಹೀಗಾಗಿ ಈ ಸಂಘಟನೆಯ ಕುರಿತು ಸಾರ್ವಜನಿಕರು ಜಾಗೃತಗೊಳ್ಳುವ ಅಗತ್ಯವಿದೆ. ಗಿರೀಶ್ ಕಾರ್ನಾಡ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ.







