ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಕಂಬಳ ನಿಷೇಧಕ್ಕೆ ಪಿಐಎಲ್ ಸಲ್ಲಿಕೆ
ಬೆಂಗಳೂರು, ಫೆ.19: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಕ್ರೀಡೆ ಕಂಬಳ ನಿಷೇಧಿಸಲು ಸೂಚಿಸುವಂತೆ ಕೋರಿ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ ಎಂಬ ಸಂಸ್ಥೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಪ್ರಾಣಿ ಹಿಂಸೆ ಕಾನೂನುಬಾಹಿರ ಎಂದು ಸುಪ್ರೀಂಕೊರ್ಟ್ ಆದೇಶವಿದೆ. ಆದರೂ, ಪ್ರಾಣಿವಧೆ ತಡೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ರಾಜ್ಯ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ರಾಜ್ಯದಲ್ಲಿ ಕಂಬಳ ಆಯೋಜಿಸುವುದಕ್ಕೆ 2015ರ ಡಿಸೆಂಬರ್ 15ರಂದು ಹೊರಡಿಸಿರುವ ಅಧಿಸೂಚನೆ ರದ್ದು ಮಾಡಬೇಕು.
ಕಂಬಳದಲ್ಲಿ ಬಳಸುವ ಎಮ್ಮೆಗಳ ದೇಹ ಓಡುವುದಕ್ಕೆ ಸಾಧ್ಯವಾಗುವುದಿಲ್ಲ. ಅವುಗಳನ್ನು ಕಂಬಳದಲ್ಲಿ ಬಳಸುವುದಕ್ಕಾಗಿ ಹಿಂಸೆ ನೀಡಲಾಗುತ್ತದೆ. 2014 ರಿಂದ 2015ರ ವರೆಗೆ ಒಟ್ಟು 65 ಪ್ರಾಣಿ ಹಿಂಸೆ ನೀಡಿದ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಕಂಬಳದಲ್ಲಿ ಹೊಡೆಯುವಾಗ ವಿನಾಕಾರಣ ಹಿಂಸಿಸಲಾಗುತ್ತದೆ ಎಂದು ಪ್ರಾಣಿ ಕಲ್ಯಾಣ ಮಂಡಳಿ ನೀಡಿದ ವರದಿಯಲ್ಲಿ ತಿಳಿಸಿದೆ. ಹೀಗಾಗಿ, ಕಂಬಳವನ್ನು ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ. ರವಿಮಳಿಮಠ ಅವರಿದ್ದ ನ್ಯಾಯಪೀಠ, ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.





