ಜಾಮೀನಷ್ಟೇ ಅಲ್ಲ; ಬಂಧನ ಪ್ರಶ್ನಿಸಿದ ಕನ್ಹಯ್ಯಿ

ನವದೆಹಲಿ: ಜವಾಹರಲಾಲ್ ನೆಹರೂ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಇನ್ನೂ ಮೂರು ದಿನವನ್ನು ತಿಹಾರ್ ಜೈಲಿನಲ್ಲಿ ಕಳೆಯುವುದು ಅನಿವಾರ್ಯವಾಗಿದ್ದು, ಇವರ ಬಿಡುಗಡೆ ಅರ್ಜಿಯನ್ನು ಮುಂದಿನ ವಾರವಷ್ಟೇ ದೆಹಲಿ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ.
ದಿನವಿಡೀ ಅವರ ಕಾನೂನು ತಜ್ಞರು ಪ್ರಯತ್ನ ನಡೆಸಿದರೂ, ಈ ಪ್ರಕರಣವನ್ನು ತೆಗೆದುಕೊಳ್ಳಲು ನಿರಾಕರಿಸಿತು. ಜತೆಗೆ ಶುಕ್ರವಾರ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲು ಕೂಡಾ ಸೂಚಿಸಲಿಲ್ಲ.
ಹೈಕೋರ್ಟ್‌ನ ರಿಜಿಸ್ಟ್ರಿ ಹಾಗೂ ಕುಮಾರ್ ಅವರ ಕಾನೂನು ತಂಡದ ನಡುವಿನ ಭಿನ್ನಾಭಿಪ್ರಾಯವೇ ಈ ವಿಳಂಬಕ್ಕೆ ಕಾರಣ ಎಂದು ತಿಳಿದುಬಂದಿದೆ. ಯಾವ ಆಧಾರದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎನ್ನುವುದೇ ಭಿನ್ನಾಭಿಪ್ರಾಯದ ಮೂಲ.
ತಮ್ಮ ಕಕ್ಷಿದಾರನಿಗೆ ಕೇವಲ ಜಾಮೀನು ದೊರಕಿಸಿಕೊಡುವುದಷ್ಟೇ ಕುಮಾರ್ ವಕೀಲರ ಗುರಿಯಲ್ಲ. ಬದಲಾಗಿ ಸಂವಿಧಾನದ 226ನೇ ವಿಧಿ ಅನ್ವಯ ರಿಟ್ ಅರ್ಜಿ ಸಲ್ಲಿಸಿ, ವಿದ್ಯಾರ್ಥಿ ಮುಖಂಡನ ವಿರುದ್ಧ ದೇಶದ್ರೋಹದ ಎಫ್‌ಐಆರ್ ರದ್ದತಿಗೆ ಕೋರುತ್ತಿದ್ದಾರೆ. ಇದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಈ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದಾರೆ.
ಆದರೆ ಪ್ರಕರಣವನ್ನು ಅಪರಾಧ ದಂಡಸಂಹಿತೆಯಡಿ ತೆಗೆದುಕೊಂಡರೆ ತನಿಖೆ ಚುರುಕುಗೊಳಿಸಬಹುದು ಎಂದು ಹೈಕೋರ್ಟ್ ರಿಜಿಸ್ಟ್ರಿ ಅಭಿಪ್ರಾಯಪಟ್ಟಿದೆ. ಆಗ ಸುಪ್ರೀಂಕೋರ್ಟ್‌ನಿಂದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪಡೆಯುವುದು ಸುಲಭ. ಅಪರಾಧ ದಂಡಸಂಹಿತೆಯ ಸೆಕ್ಷನ್ 439ರ ಅನ್ವಯ ಸಲ್ಲಿಕೆಯಾಗುವ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಲು ಮಾತ್ರ ಅವಕಾಶವಿದ್ದು, ಕುಮಾರ್ ಅವರ ಸ್ವಾತಂತ್ರ್ಯಕ್ಕೆ ನಿರ್ಬಂಧಗಳನ್ನು ವಿಧಿಸಬಹುದಾಗಿದೆ.
ಆದರೆ ಸಂವಿಧಾನದ 226ನೇ ವಿಧಿ ಅನ್ವಯ ಅರ್ಜಿ ಸಲ್ಲಿಸಿದರೆ, ಎಫ್‌ಐಆರ್ ರದ್ದುಪಡಿಸುವುದು ಸೇರಿದಂತೆ ಅನಿರ್ಬಂಧಿತ ಅಧಿಕಾರ ಹೈಕೋರ್ಟ್‌ಗೆ ಇರುತ್ತದೆ.







