ದಾಳಿ ಪೂರ್ವನಿಯೋಜಿತ: ಚಾಟಿ ಬೀಸಿದ ಎನ್‌ಎಚ್‌ಆರ್‌ಸಿ

ನವದೆಹಲಿ: ಜೆಎನ್‌ಯು ವಿದ್ಯಾರ್ಥಿ ಮುಖಂಡರ ಮೇಲೆ ಪಾಟಿಯಾಲಹೌಸ್ ಕೋರ್ಟ್ ಆವರಣದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದೆಹಲಿ ಪೊಲೀಸರಿಗೆ ಚಾಟಿ ಬೀಸಿದೆ. ಇದು ಪೂರ್ವನಿಯೋಜಿತ ಹಾಗೂ ಸಂಘಟಿತ ಕೃತ್ಯವಾಗಿದ್ದು, ಇದನ್ನು ತಡೆಯಲು ಪೊಲೀಸರು ವಹಿಸಿದ ನಿರ್ಲಕ್ಷ್ಯ, ದೊಡ್ಡ ಭದ್ರತಾ ಲೋಪ ಎಂದು ಅಭಿಪ್ರಾಯಪಟ್ಟಿದೆ.
ಕಸ್ಟಡಿ ವೇಳೆ ಕನ್ಹಯ್ಯ ಕುಮಾರ್ ಮೇಲೆ ಮಾನಸಿಕ ಒತ್ತಡ ಹೇರಲಾಗಿದೆ ಹಾಗೂ ಆತನ ಭಾವನಾತ್ಮಕ ಮನವಿಯನ್ನು ಪೊಲೀಸರೇ ಬರೆಸಿದ್ದಾರೆ ಎಂದು ಎನ್‌ಎಚ್‌ಆರ್‌ಸಿ ಆಕ್ಷೇಪಿಸಿದೆ.
ಗುರುವಾರ ತಿಹಾರ್ ಜೈಲಿನಲ್ಲಿ ಕನ್ಹಯ್ಯ ಕುಮಾರ್‌ನನ್ನು ಆಯೋಗದ ಸದಸ್ಯರು ಭೇಟಿ ಮಾಡಿದರು. ಪಟಿಯಾಲಾಹೌಸ್ ಘಟನೆ ಸಂಘಟಿತ ಹಾಗೂ ಪೂರ್ವನಿಯೋಜಿತ. ಇದನ್ನು ತಡೆಯಲು ಪೊಲೀಸರು ವಿಫಲವಾದದ್ದು ದೊಡ್ಡ ಭದ್ರತಾಲೋಪ ಹಾಗೂ ಕರ್ತವ್ಯದಿಂವ ವಿಮುಖರಾದಂತಾಗಿದೆ ಎಂದು ಹೇಳಿದೆ. ಜತೆಗೆ ಕನ್ಹಯ್ಯ ಭದ್ರತೆ ಬಗೆಗೂ ತೀವ್ರ ಕಳವಳ ವ್ಯಕ್ತಪಡಿಸಿದೆ.
ಫೆಬ್ರುವರಿ 17ರಂದು ಕನ್ಹಯ್ಯ ಅವರನ್ನು ಪಟಿಯಾಲಾಹೌಸ್ ಕೋರ್ಟ್ ಅವರಣಕ್ಕೆ ವಿಚಾರಣೆಗೆ ಕರೆತಂದಾಗ ಅವರನ್ನು ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡಲಾಗಿತ್ತು. ನ್ಯಾಯಾಲಯ ಕೊಠಡಿಯೊಳಗೆ ಕೂಡಾ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಲಾಗಿತ್ತು. ಆದರೂ ಪೊಲೀಸರು ಮೂಕಪ್ರೇಕ್ಷಕರಾದರು ಎಂದು ಆಯೋಗ ವರದಿಯಲ್ಲಿ ಹೇಳಿದೆ.







