ದುಬಾರಿ ಕಾರು-ವಾಚ್‌ಗಳ ಸರದಾರ ಕುಮಾರಸ್ವಾಮಿ:: ಉಗ್ರಪ್ಪ
ಕುಮಾರಸ್ವಾಮಿ ಬಳಿ ಇರುವ ದುಬಾರಿ ಕಾರುಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕರು

ಹೊಸದಿಲ್ಲಿ, ಫೆ.20: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್‌ನ ನಾಯಕರು ಇಂದು ಅವರ ಬಳಿ ಇರುವ ಕೋಟ್ಯಾಂತರ ರೂ. ಬೆಲೆ ಬಾಳುವ ದುಬಾರಿ ಕಾರು, ವಾಚ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ವಿಧಾನ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ವಿಎಸ್ ಉಗ್ರಪ್ಪ ಅವರು ಕುಮಾರ ಸ್ವಾಮಿ ಬಳಿ 25 ಲಕ್ಷ ರೂ.ನಿಂದ ಕೋಟಿ ರೂ. ತನಕ ಬೆಲೆ ಬಾಳುವ ವಾಚುಗಳಿವೆ ಎಂದು ಮಾಹಿತಿ ನೀಡಿದರು.
ಕುಮಾರ ಸ್ವಾಮಿ ಕಾರು ವಾಚ್‌ಗಳ ಸರದಾರ. ಅವರ ಬಳಿ 8 ಕಾರುಗಳಿವೆ. ಎರಡು ಕಾರುಗಳು ಇನ್ನೂ ರಿಜಿಸ್ಟ್ರೇಷನ್ ಆಗಿಲ್ಲ. ಕನಿಷ್ಠ 50 ವಾಚ್‌ಗಳಿವೆ. ಅವರ ಬಳಿ 3 ಕೋಟಿಯ ರೇಂಜ್ ರೋವರ್ ಕಾರು,1.2ಕೋಟಿಯ ಇನ್ಫಿನಿಟ್ ಕಾರು, ಹಮ್ಮರ್ ಫೋರ್ಶ್ ಕಾರು ಇದೆ, ಭಾರೀ ಬೆಲೆ ಬಾಳುವ ಬೈಕ್ ಇದೆ. ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಬಳಿ 8 ಕೋಟಿ ರೂ. ಬೆಲೆ ಬಾಳುವ ಲ್ಯಾಂಬರ್ಗಿನಿ ಕಾರು ಇದೆ. ಕುಮಾರಸ್ವಾಮಿ ವಜ್ರ ಖಚಿತ ಫ್ರಾಂಕ್ ಮುಲ್ಲರ್, ರಾಡೋ ವಾಚ್ ಹೊಂದಿದ್ದಾರೆ ಎಂದು ಉಗ್ರಪ್ಪ ವಿವರಿಸಿದರು.
ಕುಮಾರಸ್ವಾಮಿ ದುಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಾರು ಹಾಗೂ . 1.3 ಕೋಟಿ ರೂ. ಮೌಲ್ಯದ ವಾಚ್ ನ್ನು ಉಡುಗೊರೆಯಾಗಿ ಪಡೆದಿದ್ದರು . ಆದರೆ ಅವೆಲ್ಲವನ್ನು ಅವರು ಮುಚ್ಚಿಟ್ಟಿದ್ದಾರೆ ಎಂದು ಉಗ್ರಪ್ಪ ಅಪಾದಿಸಿದ್ದಾರೆ.
ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಪಡೆದ ಉಡುಗೊರೆಗಳನ್ನು ಹರಾಜು ಹಾಕಲಿ ಅಥವಾ ಅದನ್ನು ನಾಡಿನ ಆಸ್ತಿಯಾಗಿ ಇಡಲಿ. ಸ್ವಂತಕ್ಕೆ ಬಳಸುವುದು ಬೇಡ ಎಂದು ಮನವಿ ಮಾಡಿರುವ ವಿಎಸ್ ಉಗ್ರಪ್ಪ , ಎಚ್.ಎಂ.ರೇವಣ್ಣ ಮತ್ತಿತರ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪಡೆದಿರುವ ಗಿಫ್ಟ್ ಗಳನ್ನು ಬಹಿರಂಗಪಡಿಸಲಿ ಮತ್ತು ಹರಾಜು ಹಾಕಲಿ ಎಂದು ಸವಾಲು ಹಾಕಿದರು.





