ಮುಲ್ಕಿ ಹೋಬಳಿಯಲ್ಲಿ ಶಾಂತಿಯುತ ಮತದಾನ : ಹಲವೆಡೆ ಕೈಕೊಟ್ಟ ಮತಯಂತ್ರಗಳು , ಮತದಾರರ ಅಸಮಾಧಾನ
ಮತದಾನದಲ್ಲಿ ಮಹಿಳೆಯರದ್ದೇ ಮೇಲುಗೈ

ಮುಲ್ಕಿ, ಫೆ.20: ಕಿನ್ನಿಗೋಳಿ ಜಿಲ್ಲಾ ಪಂಚಾಯತ್ ಮತ್ತು ಕಟೀಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಮತಯಂತ್ರಗಳು ಕೈಕೊಟ್ಟ ಪರಿಣಾಮ ಮತದಾರರು ಕಾದು ಹಿಂದಿರುಗಿದ ಘಟನೆಯ ನಡುವೆಯೂ ಜನತೆ ತಮ್ಮ ಹಕ್ಕುಗಳನ್ನು ಚಲಾಯಿಸಿದರು.
ಬೆಳಗ್ಗಿನಿಂದಲೇ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನವಾಗುತ್ತಿದ್ದಂತೆ ಆಮೆಗತಿಗೆ ತಲುಪಿ ಮತಗಟ್ಟೆಗಳು ಖಾಲಿ ಖಾಲಿಯಾಗಿದ್ದವು. ಮಧ್ಯಾಹ್ನದವರೆಗೆ ಹೆಚ್ಚಿನ ಶೇಖಡಾವಾರು ಮಹಿಳೆಯರೇ ಮತ ಚಲಾಯಿಸಿದ್ದು, ಒಟ್ಟು ಶೇ.25 ರಷ್ಟು ಮಾತ್ರ ಮತಗಳು ಚಲಾವಣೆಯಾಗಿತ್ತು.
ಕಟೀಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಡುಗೋಡು ಮತಗಟ್ಟೆ ಸಂಖ್ಯೆ 117 ರಲ್ಲಿ ಬೆಳಗ್ಗೆ ಮತ ಚಲಾವಣೆ ಆರಂಭವಾಗುತ್ತಲೇ ಮತಯಂತ್ರ ಕೈಕೊಟ್ಟ ಪರಿಣಾಮ ಚುಣಾವಣಾಧಿಕಾರಿ ಕಕ್ಕಾಬಿಕ್ಕಿಯಾದ ಘಟನೆ ನಡೆಯಿತು. ಬಳಿಕ ತಹಶಿಲ್ದಾರ್ ಅವರಿಗೆ ಮಾಹಿತಿ ನೀಡಿ ಅವರ ಸಮ್ಮುಖದಲ್ಲಿ ಮತಯಂತ್ರ ಬದಲಾಯಿಸಿ ಮತದಾನಕ್ಕೆ ಅನುವು ಮಾಡಲಾಯಿತಾದರೂ ಅದಾಗಲೇ ಒಂದುವರೆ ಗಂಟೆ ಕಾದು ಕುಳಿತ ಸುಮಾರು 30 ರಿಂದ 50 ಮಂದಿ ಮತದಾರರು ಚುನಾವಣಾಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಹಿಂದಿರುಗಿದ್ದರು ಎಂದು ತಿಳಿದು ಬಂದಿದೆ.
ಕಿನ್ನಿಗೋಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಂಜ ಎಂಬಲ್ಲಿ ಮತದಾನ ಕೇಂದ್ರದಲ್ಲಿ ಮತದಾನದ ಆರಂಭದಲ್ಲೇ ಮತಯಂತ್ರ ಕೆಟ್ಟಿದ್ದ ಕಾರಣ ಸುಮಾರು ಅರ್ಧಗಂಟೆ ತಡವಾಗಿ ಮತದಾನ ಆರಂಭಗೊಂಡಿದ್ದು, ಮತದಾರರು ಅಸಮಾಧಾನವ್ಯಕ್ತಪಡಿಸಿದ ಘಟನೆ ವರದಿಯಾಗಿದೆ. ಮುಲ್ಕಿ ಹೋಬಳಿಯ ಕರ್ನಿರೆ ಎಂಬಲ್ಲಿ ಮತದಾನದ ವೇಳೆ ಹಳೆಯ ಮತಯಂತ್ರಗಳಗಳನ್ನು ಬಳಕೆ ಮಾಡಿದ್ದ ಕಾರಣ ಮತ ಯಂತ್ರಕೆಟ್ಟುಹೋಗಿ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಬೇಕಿದ್ದ ಮತದಾನ ಪ್ರಕ್ರಿಯೆ ಹದಿನೈದು ನಿಮಿಷ ತಡವಾಗಿ ಆರಂಭಗೊಂಡಿತು ಎಂದು ತಿಳಿದು ಬಂದಿದೆ.
ಕಿನ್ನಿಗೋಳಿ ತಾಲೂಕು ಪಂಚಾಯತ್ ವ್ಯಾಪ್ತಿಯ ಏಳಿಂಜೆ ಎಂಬಲ್ಲಿನ 1 ನೇ ವಾರ್ಡ್‌ನಲ್ಲಿ ಬೆಳಗ್ಗೆ 10 ಗಂಟೆಯ ವೇಳೆಗೆ ಮತಯಂತ್ರಗಳು ಹಾಳಾದ ಪರಿಣಾಮ ಒಂದು ಗಂಟೆಗಳ ಕಾಲ ಮತದಾನ ನಿಲ್ಲಿಸಲಾಗಿತ್ತು. ಬಳಿಕ ಸರಿಪಡಿಸಿ ಮತದಾನ ಆರಂಭ ಗೊಂಡಿತು ಎಂದು ತಿಳಿದು ಬಂದಿದೆ.
ಕಿನ್ನಿಗೋಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಳೆಯಂಗಡಿ10 ರ ಮತದಾನ ಕೆಂದ್ರ 1 ರಲ್ಲಿ ಶೈಖ್ ನೈಜೀರ್ ಎಂಬ ಮತದಾರರೊಬ್ಬರ ಹೆಸರು ಮತದಾರ ಮಟ್ಟಿಯಲ್ಲಿ ಎರಡು ಬಾರಿ ಇದ್ದ ಕಾರಣ ಕೆಲಕಾಲ ಸ್ಥಬ್ಧಗೊಂಡ ಮತದಾನ, ಚುನಾವಣಾಧಿಕಾರಿಯ ಸೂಚನೆಯ ಮೇರೆಗೆ ಒಂದು ಹೆಸರು ತೆಗೆದು ಹಾಕಿ 15 ನಿಮಿಷಗಳ ಬಳಿಕ ಮತದಾನಕ್ಕೆ ಅವಕಾಶ ಕಲ್ಪಿಸಿದ ಘಟನೆ ನಡೆದಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ:
.jpg)
ಮುಲ್ಕಿ ಕಟೀಲು ಸುತ್ತಮುತ್ತಲಿನ ಬೂತ್‌ಗಳಿಗೆ ಭೇಟಿ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಮತದಾರರನ್ನು ಹುರಿದುಂಬಿಸಿದರು.
ಹಿರಿಯರಿಂದ ಮತದಾನ: ಸುಮಾರು 108 ವರ್ಷದ ಅಜ್ಜ ಜೋಸೆಫ್ ಮೆನೇಜಸ್ ತನ್ನ ಕುಟುಂಬಿಕರೊಂದಿಗೆ ಕಟೀಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಳ್ಕುಂಜೆ ಮತಗಟ್ಟೆ ಸಂಖ್ಯೆ 78 ರಲ್ಲಿ ತನ್ನ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಯುವ ಪೀಳಿಗೆಗೆ ಮತದಾನದ ಸಂದೇಶ ನೀಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನ ಜೀವನದ ಉದ್ದಕ್ಕೂ ಎಲ್ಲಾ ಚುನಾವಣೆಗೆ ಹಾಜರಾಗಿ ಮತದಾನ ಮಾಡಿದ್ದೇನೆ. ಸಮರ್ಥ ಅಭ್ಯರ್ಥಿ ಆಯ್ಕೆಗೆ ಎಲ್ಲರೂ ಮತದಾನ ಮಾಡಬೇಕು ಎಂದು ಕರೆ ನೀಡಿದರು
ಸುಮಾರು 90 ವರ್ಷದ ಅಜ್ಜ ಚಂದ್ರಯ್ಯ ಮಡಿವಾಳ ಹಾಗೂ ಹಳೆಯಂಗಡಿ ಪರಿಸರದ 90 ವರ್ಷ ಪ್ರಾಯದ ಝುಲೈಕಾ ಎಂಬವರು ತನ್ನ ಮೊಮ್ಮಕ್ಕಳ ಸಹಾಯದೊಂದಿಗೆ ಸಮೀಪದ ಮತಗಟ್ಟೆಗಳಿಗೆ ತೆರಳಿ ಮತಚಲಾಯಿಸಿ ಯುವ ಮತದಾರರಿಗೆ ಮಾದರಿಯಾದರು.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳು ಕಾಣೆ: ಕಳೆದ ಗ್ರಾಮ ಪಂಚಾಯತ್ ಚುನಾವಣೆಯ ವೇಳೆ ಮುಲ್ಕಿ ಹೋಬಳಿಯ ಕೆಲವೊಂದು ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳು ಘೋಶಿಸಿದ್ದ ಜಿಲ್ಲಾಡಳಿತ ಸಿಸಿ ಕ್ಯಾಮರಾಗಳನ್ನು ಅಲವಡಿಸಿ ಬಿಗಿ ಭಧ್ರತೆ ಒದಗಿಸಿತ್ತು. ಆದರೆ ಈ ಬಾರಿಯ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ವೇಳೆ ಅಂತಹಾ ಯಾವುದೇ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಾಗಲೀ, ಸಿಸಿ ಕ್ಯಾಮರಾಗಳು ಕಂಡು ಬರದೆ ಕಾಣೆಯಾಗಿದ್ದವು.



.jpg)








