ಎನ್‌ಡಿಎ ಸರಕಾರದ ‘ಮೈಲಿಗಲ್ಲು’ ಬಜೆಟ್ ತಯಾರಿಯಲ್ಲಿ ಪ್ರಧಾನಿ, ವಿತ್ತ ಸಚಿವರು ಬ್ಯುಸಿ
.jpg)
ನವದೆಹಲಿ : ಸಂಸತ್ತಿನಲ್ಲಿ 2016-2017ನೇ ಸಾಲಿನ ಬಜೆಟ್ ಮಂಡಿಸಲು ಇನ್ನು ಹತ್ತೇ ದಿನಗಳು ಬಾಕಿಯುಳಿದಿರುವಂತೆಯೇ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತವರ ತಂಡ ಬಜೆಟ್ ತಯಾರಿಯಲ್ಲಿ ಕಾರ್ಯನಿರತವಾಗಿದ್ದು ಈ ಸಾಲಿನ ಬಜೆಟ್ ಎನ್‌ಡಿಎ ಸರಕಾರದ ಮೈಲಿಗಲ್ಲು ಬಜೆಟ್ ಆಗಲಿದೆಯೆಂಬ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಕಾರ್ಯಾಲಯದ ಹಲವು ಪ್ರಮುಖ ಅಧಿಕಾರಿಗಳು ಕೂಡ ಈ ಪ್ರಕ್ರಿಯೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಫೆಬ್ರವರಿ 29ರಂದು ಬಜೆಟ್ ಮಂಡನೆಯಾಗಲಿರುವುದರಿಂದ ಪ್ರಧಾನಿ ಹಾಗೂ ವಿತ್ತ ಸಚಿವರು ಕೆಲವೊಂದು ವಿನೂತನಪ್ರಸ್ತಾಪಗಳನ್ನು ಮಾಡಲು ಇಚ್ಛುಕರಾಗಿದ್ದು ಅವುಗಳನ್ನು ಪರಿಶೀಲಿಸುತ್ತಿದ್ದಾರೆ. ‘‘ಪ್ರಧಾನಿ ಹಾಗೂ ವಿತ್ತ ಸಚಿವರು ಬ್ರಾಡ್‌ಶೀಟುಗಳನ್ನು ಪರಿಶೀಲಿಸುತ್ತಿದ್ದು ನಂತರ ಸೂಕ್ತ ನಿರ್ಧಾರಕ್ಕೆ ಬರಲಿದ್ದಾರೆ’’ಎಂದು ಬಜೆಟ್ ತಯಾರಿಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿತ್ತ ಸಚಿವಾಲಯವು ಸಲ್ಲಿಸುವ ಹಲವಾರು ಪ್ರಸ್ತಾವನೆಗಳ ಪಟ್ಟಿಯನ್ನೇ ಬ್ರಾಡ್‌ಶೀಟ್ ಎನ್ನಲಾಗುತ್ತದೆ. ವಿತ್ತ ಸಚಿವರು ಪರಿಗಣಿಸಿದ ಮೇಲೆ ಪ್ರಧಾನಿಯವರ ಗಮನಕ್ಕೆಅದನ್ನು ತಂದು ನಂತರ ಅಂತಿಮಗೊಳಿಸಲಾಗುತ್ತದೆ.
ಕಳೆದ ತಿಂಗಳು ಬಜೆಟ್ ತಯಾರಿ ಆರಂಭಗೊಳ್ಳುತ್ತಲೇ ಪ್ರಧಾನಿಯವರು ಕಾರ್ಯದರ್ಶಿಗಳ ಎಂಟು ತಂಡಗಳನ್ನು ರಚಿಸಿಅವರಿಗೆ ಹೊಸ ಹೊಸ ಐಡಿಯಾಗಳೊಂದಿಗೆ ಬರಲು ತರಬೇತಿಗಳನ್ನು ಕೂಡ ಆಯೋಜಿಸಿದ್ದರು. ಸರಕಾರ ಈಗಾಗಲೇ ತಜ್ಞರಿಂದ, ಅಧಿಕಾರಿಗಳಿಂದ ಹಾಗೂ ಸಾರ್ವಜನಿಕರಿಂದ ಬಜೆಟ್ ಬಗೆಗಿನ ಸಲಹೆಗಳನ್ನು ಕೇಳಿದ್ದು ಸುಮಾರು 7000 ಸಲಹೆಗಳು ಬಂದಿವೆಯೆನ್ನಲಾಗಿದೆ. ಮೇಲಾಗಿ ಪ್ರಧಾನಿ ಕಾರ್ಯಾಲಯವಿರುವ ಸೌತ್ ಬ್ಲಾಕ್ ಹಾಗೂ ನಾರ್ತ್ ಬ್ಲಾಕ್ ಅಧಿಕಾರಿಗಳೂ ನಿಯಮಿತವಾಗಿ ಬಜೆಟ್ ಸಂಬಂಧಿತ ಸಭೆ ನಡೆಸುತ್ತಿದ್ದಾರೆ. ಮುಖ್ಯವಾಗಿ ತೆರಿಗೆ ವ್ಯವಸ್ಥೆಯನು ಸರಳಗೊಳಿಸಲು,ಗ್ರಾಮೀಣ ಆರ್ಥಿಕತೆ ಅಭಿವೃದ್ಧಿಗೆ ಒತ್ತು ನೀಡಲು ಹಾಗೂ ಹೂಡಿಕೆಗೆ ಮತ್ತಷ್ಟು ಉತ್ತೇಜನ ನೀಡುವಲ್ಲಿನ ಯೋಜನೆ ಹಾಗೂ ಪ್ರಸ್ತಾಪಗಳು ಬಜೆಟ್ಟಿನಲ್ಲಿ ಒಳಗೊಳ್ಳುವಂತೆ ನೋಡಿಕೊಳ್ಳಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಸರಕಾರೀ ಫೈನಾನ್ಸ್ ಕಂಪೆನಿಗಳ ಕೊಳೆಯುತ್ತಿರುವಸೊತ್ತಿನ ಜವಾಬ್ದಾರಿಯನ್ನು ವಹಿಸಲು ಬ್ಯಾಡ್ ಬ್ಯಾಂಕ್ ಒಂದನ್ನು ಸ್ಥಾಪಿಸುವ ಪ್ರಸ್ತಾಪವಿದೆಯೆಂದು ಹೇಳಲಾಗುತ್ತಿದ್ದರೂ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಇದರ ಪರವಾಗಿಲ್ಲವೆನ್ನಲಾಗುತ್ತಿದೆ. ಸಾಲ ನೀಡಿರುವ ಸಂಸ್ಥೆಗಳು ಸರಕಾರಿ ಸಂಸ್ಥೆಗಳೇ ಆಗಿರುವಾಗ ಇನ್ನೊಂದು ಸರಕಾರಿ ಪ್ರಾಯೋಜಿತ ಸಂಸ್ಥೆಯ ಅಗತ್ಯವಿಲ್ಲವೆಂದು ಅವರ ಅಂಬೋಣ.
ಸರಕಾರದ ಮಹತ್ವಾಕಾಂಕ್ಷೆಯ ಜನ್ ಧನ್ ಯೋಜನಾದಲ್ಲಿ ಇನ್ನೂ ಹಲವು ಹೊಸ ಅಂಶಗಳನ್ನು ಸೇರಿಸಲಾಗುವುದೆಂದೂ ತಿಳಿಯಲಾಗಿದೆ.







