ಸುಳ್ಯ: ಶಾಂತಿಯುತ ಮತದಾನ - ಹಲವೆಡೆ ಮತಯಂತ್ರ ದೋಷ, ಮತದಾನ ವಿಳಂಬ
ಮತದಾನ ಎರಡೂ ಕೈಗಳಿಗೆ ಶಾಯಿ ಹಾಕಿದ ಸಿಬ್ಬಂದಿ

ಸುಳ್ಯ ಸಮೀಪದ ನಾರ್ಕೋಡು ಮತಗಟ್ಟೆಯಲ್ಲಿ ಮತದಾರರ ಸರತಿ ಸಾಲು.
ಸುಳ್ಯ: ಸೋಣಂಗೇರಿ ಮತಗಟ್ಟೆಯಲ್ಲಿ ಮತಗಟ್ಟೆಯ ಮಹಿಳಾ ಅಧಿಕಾರಿಯೊಬ್ಬರು ಮತದಾನಕ್ಕೆ ಬರುತ್ತಿದ್ದ ಮತದಾರರಿಗೆ ಒಂದು ನಂಬರಿಗೆ ಮತದಾನ ಮಾಡುವಂತೆ ಸೂಚನೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಗೆ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಧಿಕಾರಿ ಮತಯಂತ್ರದ ಬಳಿಯೇ ಕೂತು ನಂಬರ್ ಸೂಚಿಸುತ್ತಿದ್ದರು ಎಂಬುದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಾಂಗ್ರಸ್ ಮುಖಂಡ ಚಂದ್ರಶೇಖರ್ ಕಾಮತ್ ಆರೋಪ. ಅವರೊಂದಿಗೆ ಶಿವಕುಮಾರ್ ಅವರು ಮತದಾನ ಕೇಂದ್ರಕ್ಕೆ ಬಂದು ಅಧಿಕಾರಿಯನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದರು. ಈ ವೇಳೆಗೆ ತಾಲೂಕು ಪಂಚಾಯಿತಿ ಸದಸ್ಯೆ ಗುಣವತಿ ಕೊಲ್ಲಂತಡ್ಕ ಕೂಡ ಆಗಮಿಸಿದರು. ವಿಷಯ ತಿಳಿದ ಸುಳ್ಯ ಎಸ್ಐ ಚಂದ್ರಶೇಖರ್ ಮತ್ತು ಚುನಾವಣಾಧಿಕಾರಿ ಅರುಣಪ್ರಭ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳನ್ನು ಮತ ಯಂತ್ರದಿಂದ ದೂರ ಕುಳ್ಳಿರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅಲ್ಲದೇ ಮತದಾನ ಕೇಂದ್ರದ ಒಳಗೆ ಪಕ್ಷದ ಏಜೆಂಟರ ಕೈಯಲ್ಲಿದ್ದ ಮೊಬೈಲುಗಳನ್ನು ಚುನಾವಣಾಧಿಕಾರಿಗಳು ವಶ ಪಡಿಸಿಕೊಂಡ ಘಟನೆಯು ನಡೆಯಿತು. ಸೊಣಂಗೇರಿ ಮತಕೆಂದ್ರದ ಬಳಿ 100 ಮೀಟರ್ ಒಳಗೆ ಇದ್ದ ಪಕ್ಷದ ಕಾರ್ಯಕರ್ತರನ್ನು ದೂರ ಓಡಿಸಿದ ಘಟನೆ ಕೂಡ ನಡೆಯಿತು.
ಎಡವಟ್ಟು:
ಬೆರಳಿಗೆ ಗುರುತು ಹಾಕುವ ಸಿಬ್ಬಂದಿಯ ಕಣ್ತಪ್ಪಿನಿಂದ ಕನಕಮಜಲು ಮತಗಟ್ಟೆಯಲ್ಲಿ ಮತದಾರ ಅಬೂಬಕರ್ ಎಂಬವರ ಎಡಗೈ ಹೆಬ್ಬರಳಿಗೆ ಶಾಯಿ ಹಾಕಿದ ಬಳಿಕ ತಪ್ಪಾಗಿದ್ದು ತಿಳಿದು ಬಲಗೈ ಹೆಬ್ಬರಳಿಗೆ ಶಾಯಿ ಗುರುತು ಹಾಕಿದ ಘಟನೆಯೂ ನಡೆಯಿತು.
ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಹಾಗೂ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ್ದ ಪೈಂಬೆಚ್ಚಾಲ್ ಮತಗಟ್ಟೆಯಲ್ಲಿ ಕನಿಷ್ಠ ಮತದಾನವಾಗಿದೆ.
ತಾಲೂಕಿನ ಬೆಳ್ಳಾರೆ, ನಾರ್ಣಕಜೆ, ಕೊಲ್ಲಮೊಗ್ರ, ನಾರ್ಕೋಡು, ಅಮೈ ಮಡಿಯಾರು, ದೇವಚಳ್ಳ ಮೊದಲಾದ ಕಡೆ ಮತಯಂತ್ರದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ವಿಳಂಬ ಆಗಿದೆ. ಅಮೈ ಮಡಿಯಾರಿನಲ್ಲಿ ಸಂಜೆ ವೇಳೆಗೆ ಬರೀ ಉದ್ದದ ಸರತಿ ಸಾಲು ಕಂಡು ಬಂತು. ಹೀಗಾಗಿ 6 ಗಂಟೆವರೆಗೂ ಮತದಾನ ಮುಗಿಯಲಿಲ್ಲ. ತಾಲ್ಲೂಕಿನ ಎಲ್ಲಾ ಬೂತ್ಗಳಲ್ಲಿ ಮತದಾನ ನೀರಸವಾಗಿದ್ದು. ಒಂದೆರಡು ಕಡೆ ಬಿಟ್ಟರೆ ಎಲ್ಲಿಯೂ ಮತದಾರರು ಸರತಿ ಸಾಲಿನಲ್ಲಿ ಕಂಡು ಬರಲಿಲ್ಲ. ಬೆಳ್ಳಾರೆಯ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಹಾಗೂ ಕೊಲ್ಲಮೊಗ್ರ ಮತಗಟ್ಟೆಯಲ್ಲಿ ಮತಯಂತ್ರ ಹಲವು ಬಾರಿ ಕೈಕೊಟ್ಟಿದ್ದು, ಮತದಾರರ ಆಕ್ರೋಶಕ್ಕೆ ಕಾರಣವಾಯಿತು.
ತಾಲ್ಲೂಕಿನಲ್ಲಿ 112 ಮತಗಟ್ಟೆಗಳನ್ನು ತೆರೆಯಲಾಗಿದೆ. ಇದರಲ್ಲಿ 19 ಅತಿ ಸೂಕ್ಷ್ಮ ಮತ್ತು 20 ಸೂಕ್ಷ್ಮ ಮತಗಟ್ಟೆಗಳು ಇದರಲ್ಲಿ 5 ನಕ್ಸಲ್ ಬಾಧಿತ ಮತಗಟ್ಟೆಗಳಾಗಿ ಘೋಷಣೆ ಮಾಡಲಾಗಿದೆ. ಸುಬ್ರಹ್ಮಣ್ಯದ ಕುಲ್ಕುಂದ, ಬಾಳುಗೋಡು, ಐನೆಕಿದು, ಕೊಲ್ಲಮೊಗ್ರ ಮತ್ತು ಕಲ್ಮಕಾರು ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಸಿಆರ್ಪಿ ಪೋಲೀಸ್ ಪಡೆಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಎಲ್ಲಾ ಮತಕೇಂದ್ರಗಳಿಗೆ 5 ಚುನಾವಣಾ ಸಿಬ್ಬಂದಿ ಮತ್ತು ಭದ್ರತೆಗೆ ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಕ್ಸಲ್ ಮತ್ತು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತ ಪಡೆಗಳನ್ನು ನಿಯೋಜನೆ ಮಾಡಲಾಗಿತ್ತು. ಇಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಸುಳ್ಯ ಸಮೀಪದ ಪೆರಾಜೆ ಕುಂಬಳಚೇರಿ ಮತಗಟ್ಟೆಗಳಲ್ಲಿ ಕಂಡು ಬಂದ ಸರತಿ ಸಾಲು.

ಸುಳ್ಯ ಸಮೀಪದ ಸಂಪಾಜೆ ಮತಗಟ್ಟೆಯಲ್ಲಿ ಕಂಡು ಬಂದ ಸರತಿ ಸಾಲು.

ಸುಳ್ಯ ಶಾಸಕ ಎಸ್.ಅಂಗಾರ ದೊಡ್ಡತೋಟ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.







