ಜೀವಕ್ಕೆ ಕುತ್ತು ತರುತ್ತಿರುವ 'ಡೆಡ್ಲೀ ಸೆಲ್ಫಿ'....!!!!

ಹೌದು. ನಮ್ಮನ್ನು ಬೆಚ್ಚಿ ಬೀಳಿಸುವ ವರದಿಯೊಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಹುಚ್ಚು ಸೆಲ್ಫಿ ತೆಗೆಯುವ ಭರದಲ್ಲಿ ಸಾವಿಗೀಡಾಗುತ್ತಿರುವ ಮಂದಿಗಳ ಪೈಕಿ ವಿಶ್ವದಲ್ಲಿ ಭಾರತವು ಮೊದಲನೇ ಸ್ಥಾನದಲ್ಲಿದೆ. ಇತ್ತೀಚೆಗಷ್ಟೇ ಮುಂಬೈನ ಬಾಂದ್ರಾದ ಅರಬ್ಬೀ ಸಮುದ್ರದ ತೆರೆಗಳ ಮುಂದೆ ನಿಂತು ಸೆಲ್ಫಿ ತೆಗೆಯುತ್ತಿದ್ದ ಮೂವರು ಯುವತಿಯರು ನೀರುಪಾಲಾದರು. ಇದನ್ನು ಕಂಡು ಕೂಡಲೇ ಅವರನ್ನು ರಕ್ಷಿಸಲೆಂದು ನೀರಿಗೆ ಹಾರಿದ ವ್ಯಕ್ತಿಯೋರ್ವರೂ ನೀರಿನಲ್ಲಿ ಮುಳುಗಿ ಮೃತಪಟ್ಟರು. ಇಂತಹಾ ನೂರಾರು ಸುದ್ದಿಗಳು ಪ್ರತಿನಿತ್ಯ ಭಾರತದಿಂದ ವರದಿಯಾಗುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ತಿಳಿಸಿದೆ. ಸೆಲ್ಫಿ ತೆಗೆಯುವಾಗ ಯಾವುದೇ ಮುನ್ನೆಚ್ಚರಿಕೆಯ ಬಗ್ಗೆ ಗಮನ ಕೊಡದೇ ಇರುವುದರಿಂದಲೇ ವಿಶ್ವದಲ್ಲಿ ಸೆಲ್ಫಿ ಹುಚ್ಚಿಗೆ ಸಂಭವಿಸುತ್ತಿರುವ ಇಂತಹಾ ಸಾವಿನ ವರದಿಗಳ ಪೈಕಿ ಅರ್ಧದಷ್ಟು ವರದಿಗಳು ಭಾರತದಲ್ಲಿಯೇ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಅಲ್ಲದೇ, ಕಳೆದ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಜಪಾನ್ನ 60-66 ರ ಹರೆಯದ ಹಿರಿಯ ಗೆಳೆಯರಿಬ್ಬರು ವಿಶ್ವದ ಅದ್ಬುತಗಳಲ್ಲೊಂದಾಗಿರುವ ತಾಜ್ ಮಹಲ್ ಮೆಟ್ಟಿಲುಗಳ ಮೇಲೆ ನಡೆದುಕೊಂಡು ಹೋಗ್ತಾ ಸೆಲ್ಫಿ ತೆಗೆಯುತ್ತಿದ್ದಾಗ ಕಾಲು ಜಾರಿಬಿದ್ದ ಪರಿಣಾಮ ತಲೆಗೆ ತೀವ್ರ ತರಹದ ಗಾಯಗೊಂಡು 66 ರ ಹರೆಯದ ಹಿದೆಟೋ ಹುವೆಡಾ ಎಂಬವರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇನ್ನೊರ್ವ ಗೆಳೆಯ ಕಾಲು ಮುರಿದ ಘಟನೆಗಳನ್ನು ನೋಡುವಾಗ, ನಮ್ಮಲ್ಲಿ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಯಾಕೆ ಅಂತ ಕೇಳಿದಲ್ಲಿ ನಾವು ಪ್ರವಾಸ ಹೋದೆಡೆ, ಸಾರ್ವಜನಿಕ ಜೀವನದಲ್ಲಿರುವಾಗ ಅಪರೂಪದ ಗೆಳೆಯರು ಸಿಕ್ಕರೆ, ಬೈಕಲ್ಲಿ ತ್ರಿಬಲ್ ರೈಡ್ ಮಾಡುತ್ತಾ, ಕಾರು, ರೈಲು ಅಥವಾ ಮತ್ತಿತರ ವಾಹನಗಳಲ್ಲಿ ಪ್ರಯಾಣಿಸುವಾಗ ತೆಗೆಯಲು ಶ್ರಮಿಸುವ 'ಡೆಡ್ಲೀ ಸೆಲ್ಫಿ'ಗಿಂತ ಮುಂಚೆ ಎಷ್ಟು ಬಾರಿ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದ್ದೀರಿ ಎಂಬುದು. ಕೇವಲ ಒಂದು ಸೆಲ್ಫಿಯ ಹುಚ್ಚಾಟಕ್ಕೆ ಸೃಷ್ಟಿಕರ್ತನಿಂದ ಅನುಗ್ರಹೀತವಾದ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಆಧುನಿಕ ಕಾಲದ ದುರಂತ ಎಂದರೆ ತಪ್ಪಾಗಲಾರದು.
ಹೌದು. ನಾವು ತುಂಬಾ ಆಧುನಿಕತೆಯಿಂದ ಜೀವನ ಸಾಗಿಸುತ್ತಿದ್ದೇವೆ. ಆದರೆ ಈ ಮಧ್ಯೆ ನಮ್ಮ ಜೀವನ ಶೈಲಿಯಲ್ಲಿನ ಹಲವಾರು ಬದಲಾವಣೆಗಳು ನಮ್ಮ ಜೀವಕ್ಕೆ ಕುತ್ತು ತರುತ್ತಿರುವುದಂತೂ ಅಕ್ಷರಶಃ ಸತ್ಯ. ಅಂತಹಾ ಜೀವನ ಶೈಲಿಗಳಲ್ಲಿ ಕೈಯಲ್ಲೊಂದು ಫ್ರಂಟ್ ಕ್ಯಾಮೆರಾ ಇರುವ ಆಂಡ್ರಾಯ್ದ್ ಅಥವಾ ಅದಕ್ಕಿಂತಲೂ ಮುಂದುವರಿದಿರುವ ಮೊಬೈಲ್ ನಲ್ಲಿ ನಾವು ಮನಸ್ಸಾದಗೆಲ್ಲಾ ತೆಗೆಯುವ ಹವ್ಯಾಸ ಇಂದು ಹಲವು ಜೀವಗಳನ್ನು ಬಲಿತೆಗೆಯುತ್ತಿರುವುದು ನಿಜಕ್ಕೂ ಖೇದನೀಯ.
ನಮ್ಮ ದೇಶದಲ್ಲಿ ಪ್ರಧಾನಿ ಮೋದಿಯವರು 2014 ರ ಚುನಾವಣೆಯ ಸಂದರ್ಭ ಮತ ಚಲಾಯಿಸಿದ ಬಳಿಕ ತೆಗೆದಿದ್ದ ಸೆಲ್ಫಿಯನ್ನು ಟ್ವಿಟರ್, ಫೇಸ್ ಬುಕ್ ನಂತಹಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಬಳಿಕ ಯುವಜನತೆಯಲ್ಲಿ ಸೆಲ್ಫೀ ತೆಗೆಯುವ ಹುಚ್ಚಾಟ ಹೆಚ್ಚಾಯ್ತು ಎಂದರೆ ತಪ್ಪಾಗಲಾರದು. ಏಕೆಂದರೆ ಪ್ರಧಾನಿಯವರ ಸೆಲ್ಫಿಯನ್ನು ಮಾಧ್ಯಮಗಳು ಅಷ್ಟೊಂದು ಪ್ರಚಾರ ನೀಡಿದ್ದರಿಂದ ಸೆಲ್ಫಿ ತೆಗೆಯುವ ಹೊಸ ಹವ್ಯಾಸ ವ್ಯಾಪಕವಾಯಿತು. ಪ್ರಧಾನಿ ಮೋದಿಯವರು ಸುರಕ್ಷಿತ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದಿದ್ದರೆ, ಯುವಕರು ಅದೇ ಟ್ರೆಂಡನ್ನು ಅಸುರಕ್ಷಿತ ಸ್ಥಳಗಳಲ್ಲಿ ನಿಂತು ತೆಗೆಯುತ್ತಿರೋದೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತಿದೆ.
ಕೆಲವರಿಗೆ ಎಷ್ಟು ಸೆಲ್ಫಿಯ ಹುಚ್ಚು ಎಂದರೆ ಎಲ್ಲಿಯಾದರೂ ಅಪಘಾತವಾಗಿದ್ದರೆ ಅದರ ಎದುರು ನಿಂತು ಸೆಲ್ಪಿ ಪೋಟೊ ತೆಗೆದು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು, ಬೆತ್ತ ಕೊಟ್ಟು ಪೆಟ್ಟು ತಿನ್ನುತ್ತಿರುವ ಕೆಲಸಕ್ಕೂ ಕೈ ಹಾಕಿ, ಸಾರ್ವಜನಿಕವಾಗಿ ಅವಮಾನ ಮಾಡಿಕೊಂಡ ಘಟನೆಗಳು ಕೂಡ ನಡೆಯುತ್ತಿದೆ. ಇತ್ತೀಚೆಗೆ ಅಂದರೆ ಡಿ.31, 2015 ರ ಮಧ್ಯರಾತ್ರಿ ಹೊಸ ವರ್ಷಾಚರಣೆಯ ವೇಳೆ ದುಬೈಯಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡ ಬುಜರ್್ ಖಲೀಫದ ಸಮೀಪದ ಫೈವ್ ಸ್ಟಾರ್ ಹೊಟೇಲ್ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 16 ಮಂದಿ ಗಾಯಾಳುಗಳಾಗಿ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವಾಗ ಅತೀಕಿ ಎಂಬಾತ ತಾನಿದ್ದ ಫ್ಲಾಟಿನಿಂದ ತನ್ನ ಪತ್ನಿಯೊಂದಿಗೆ ನಿಂತು ಹಿಂಬದಿಯಲ್ಲಿ ಅವಘಡಕ್ಕೊಳಗಾಗಿರುವ ಕಟ್ಟಡ ಕಾಣುವಂತೆ ತೆಗೆದ ಸೆಲ್ಫಿಯನ್ನು ತನ್ನ ಇನ್ಸ್ಟ್ರಾಗ್ರಾಂ. ಫೇಸ್ ಬುಕ್, ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದಾಗ, ಇಡೀ ವಿಶ್ವವೇ ಅವರನ್ನು ವಿವಿಧ ಕಟುವಾದ ಕಮೆಂಟುಗಳ ಹೀಯಾಳಿಸಿತಲ್ಲದೆ, ವಿಶ್ವಾದ್ಯಂತ ಸುದ್ದಿಯಾದರು. ಬಳಿಕ ಫೋಟೋವನ್ನು ಖಾತೆಯಿಂದ ತೆಗೆದು, ವಿಶ್ವದ ಕ್ಷಮೆಯಾಚಿಸಿದರು. ಇಂತಹ ಘಟನೆಗಳು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪ್ರಶ್ನಿಸುತ್ತದೆ.
ಎಲ್ಲವೂ ಆಧುನಿಕತೆಯಿಂದ ಕೂಡಿರುವಾಗ ಡಿಜಿಟಲ್ ಮಾಧ್ಯಮವನ್ನು ಯಾವ ರೀತಿಯಲ್ಲಿ ಜಾಗರೂಕತೆಯಿಂದ ಬಳಸಬೇಕೆಂಬ ಪರಿಜ್ಞಾನವಿದ್ದರೆ ಒಳಿತು. ಸೆಲ್ಫಿಯನ್ನು ತೆಗೆಯೋದಕ್ಕೆ ಖಂಡಿತ ವಿರೋಧ ಇಲ್ಲ. ಅದು ಅವರವರ ಸ್ವಾತಂತ್ರ್ಯ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಆದರೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್, ಕಮೆಂಟ್ ಗಳನ್ನು ಗಿಟ್ಟಿಸಲು ಡೆಡ್ಲಿ ಸೆಲ್ಫಿ ಎಂಬ ಶಿರೋನಾಮೆಯೊಂದಿಗೆ ಪ್ರಕಟಿಸುವುದಕ್ಕೆ ನಿಮಗೆ ಅವಕಾಶ ಸಿಗೋದೆ ಕಡಿಮೆ ಇರಬಹುದು. ಯಾಕೆಂದೆರೆ ಡೆಡ್ಲಿ ಸೆಲ್ಫಿಯ ಭರದಲ್ಲಿ ನೀವು ಡೆಡ್ ಆಗಿ(ಮರಣ) ಇರುವ ಸಾಧ್ಯತೆಗಳು ಹೆಚ್ಚಿರಬಹುದು. ಮೊಬೈಲ್ ಫೋಬಿಯಾಗೆ ಬಲಿಯಾಗದಂತೆ ಎಚ್ಚರಿಕೆ ವಹಿಸೋದು ಒಳಿತು.
ಆದ್ದರಿಂದ ಸೆಲ್ಫಿಗಳು ತೆಗೆಯುವ ಮುನ್ನ ಕೆಲ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕಾದುದು ಸೆಲ್ಫಿ ಪ್ರಿಯರಿಗೆ ಅವಶ್ಯಕವಾಗಿದೆ. ಅವರಿಗಾಗಿ ಕೆಲವೊಂದು ಸೂಕ್ತ ಸಲಹೆಗಳು. ಈ ಸಲಹೆಗಳನ್ನು ಒಪ್ಪಿಕೊಳ್ಳುವುದು ಬಿಡುವುದು ನಿಮ್ಮ ವಿಚೇಚನೆಗೆ ಬಿಟ್ಟದ್ದು.
1. ನೀವು ಸೆಲ್ಫಿ ತೆಗೆಯಲು ನಿಂತಿರುವ ಸ್ಥಳವು ಅಪಾಯಕಾರಿ ಅಥವಾ ಅವಘಡಕ್ಕೊಳಗಾಗುವ ಸಾಧ್ಯತೆ ಕಡಿಮೆ ಎಂಬ ಖಾತ್ರಿ ಇದ್ದರೆ ಮಾತ್ರ ತೆಗೆಯಿರಿ. ಉದಾಹರಣೆಗೆ ಕಟ್ಟಡದ ತುದಿ, ಪರ್ವತದ ತುದಿ, ನದಿ ತೀರ, ಸೇತುವೆ, ಸಮುದ್ರ ತೀರ ಇತ್ಯಾದಿ.
2. ಪರವಾನಿಗೆ ಇರುವ ಮೆಷಿನ್ ಗನ್ ಅಥವಾ ನಾಡ ಬಂದೂಕು, ವಸ್ತು ಸಂಗ್ರಹಾಲಯಗಳ ಭೇಟಿ ನೀಡಿದ ಸಂದರ್ಭ ಅಂತಹ ವಸ್ತುಗಳ ಜೊತೆ ಪೋಸ್ ಕೊಡಲು ಬಯಸುವ ಕೆಲ ಮಂದಿ, ಸೆಲ್ಫಿ ಭರದಲ್ಲಿ ಅದು ಗುಂಡುಗಳಿಂದ ತುಂಬಿದೆಯೇ ಎಂದು ಪರೀಕ್ಷಿಸಿ. ಇಲ್ಲವಾದಲ್ಲಿ ಅದು ಕಂಟಕವಾಗಬಹುದು.
3. ಝೂ ಗಳಿಗೆ ಭೇಟಿ ನೀಡಿದ ಸಂದರ್ಭ ಸಾಹಸ ಪ್ರದಶರ್ಿಸುವ ಭರದಲ್ಲಿ ಕ್ರೂರ ಪ್ರಾಣಿಗಳ ಮುಂದೆ(ಶಾರ್ಕ್ , ಆನೆ, ಸಿಂಹ, ನಾಗರಹಾವು ಇತ್ಯಾದಿ) ನಿಂತು ಸೆಲ್ಫಿ ತೆಗೆಯಲು ಬಯಸದಿರಿ. ಅದು ಸಾಕು ಪ್ರಾಣಿಗಳಾದಲ್ಲಿ ತೊಂದರೆ ಇರದು. ಎಚ್ಚರಿಗೆ ಅತ್ಯಗತ್ಯ.
4. ಬೃಹತ್ ಯಂತ್ರಗಳು ಚಾಲನೆಯಲ್ಲಿರುವಾಗ ದಯವಿಟ್ಟು ಸೆಲ್ಫಿ ತೆಗೆಯಲು ಮುಂದಾಗದಿರಿ. ಸೆಲ್ಫಿಗೆ ಹೋದ ಅಂಗ ಮತ್ತೆ ಬಾರದು.
5. ವಿದ್ಯುತ್ ಕಂಬ, ಎಲೆಕ್ಟ್ರಾನಿಕ್ ಸಾಧನ, ಪೆಟ್ರೋಲ್ ಬಂಕ್ಗಳ ಮುಂದೆ ಸೆಲ್ಫಿ ತೆಗೆಯಲು ಮುಂದಾಗದಿರಿ. ಪೋಟೋ ತೆಗೆಯುವಾಗ ಬರುವ ಮೊಬೈಲ್ ವಿಕಿರಣಗಳಿಂದ ಅವಘಡ ಸಾಧ್ಯತೆ ಹೆಚ್ಚು.
ಆದ್ದರಿಂದ ಭಾರತದಲ್ಲಿ ಸೆಲ್ಫಿ ತೆಗೆಯುವ ಭರದಲ್ಲಿ ಸಂಭವಿಸುತ್ತಿರುವ ಸಾವುಗಳ ಪಟ್ಟಿಯಲ್ಲಿ ನಮ್ಮ ಹೆಸರು ಸೇರ್ಪಡೆಯಾಗಬಾರದು ಎಂಬ ಇಚ್ಛೆಯಿದ್ದರೆ ಜಾಗರೂಕತೆ ವಹಿಸುವುದು ಅಷ್ಟೇ ಮುಖ್ಯ. ಸೃಷ್ಟಿಕರ್ತನು ಕರುಣಿಸಿರುವ ಜೀವ ಅಮೂಲ್ಯವಾದುದು. ಸಾಧನೆ ಮಾಡಲೇಬೇಕೆಂಬ ಮನಸ್ಸಿದ್ದರೆ ಹಲವಾರು ಕ್ಷೇತ್ರಗಳು ಕೈ ಬೀಸಿ ಕರೆಯುತ್ತಲೇ ಇದೆ. ಅದರಲ್ಲಿ ಸಾಧಿಸಿ ಸಮಾಜಕ್ಕೆ ಸಚಿತ್ರ (ಸೆಲ್ಫಿ) ಮಾದರಿಯಾಗೋಣ. ಹುಚ್ಚು ಸಾಹಸ ಮಾಡಿ, ತಂದೆ-ತಾಯಿ, ಕುಟುಂಬಿಕರ, ಸಮಾಜದ ಕಣ್ಣೀರಿಗೆ ಕಾರಣರಾಗದಿರೋಣ.
★★★★★
ಮಾರುಕಟ್ಟೆಗೆ ಲಗ್ಗೆ ಇಟ್ಟ ಸೆಲ್ಫಿ ಸ್ಟಿಕ್:
ಜನರ ಮನಸ್ಥಿತಿಯನ್ನೆ ಅಂದರೆ ಜೀವನಶೈಲಿಯಲ್ಲಾಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುವ ಕಂಪೆನಿಗಳು ಸೆಲ್ಫಿ ತೆಗೆಯಲು ಪರದಾಡುವ ಜನರಿಗೆ ಸೆಲ್ಫಿ ಸ್ಟಿಕ್(ಸೆಲ್ಫಿ ಬಡಿಗೆ) ಅನ್ನು ಕೂಡ ಪರಿಚಯಿಸಿ, ಅದನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಮಾಡಿದೆ. ಗುಂಪಿನಲ್ಲಿ ಸೆಲ್ಫಿ ಫೋಟೊ ತೆಗೆಯಲು ಬಯಸುವವರಿಗೆ ಇದು ವರದಾನವಾಗಿ ಪರಿಣಮಿಸಿದೆ. ಮಾರುಕಟ್ಟೆಯಲ್ಲಿ ಸೆಲ್ಫಿ ಸ್ಟಿಕ್ನ ಬೆಲೆಯ ಸುಮಾರು 250 ರೂ. ಯಿಂದ 2000 ರೂ. ಗಳವರೆಗೆ ಲಭ್ಯವಿದೆ. ತಯಾರಕರು ಬಳಸುತ್ತಾರೋ ಮಾಹಿತಿ ಇಲ್ಲದಿದ್ದರೂ, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಡಿಜಿಟಲ್ ಮಾಧ್ಯಮದ ಸಾಧನಗಳಲ್ಲಿ ಸೆಲ್ಫಿ ಸ್ಟಿಕ್ ಹೊಸ ಸೇರ್ಪಡೆ ಎಂಬುವುದರಲ್ಲಿ ಎರಡು ಮಾತಿಲ್ಲ.







