ಮಂಗಳೂರು : ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ

ಮಂಗಳೂರು,ಫೆ.20:ದಕ್ಷಿಣ ಕನ್ನಡ ಜಿಲ್ಲಾಡಳಿತ , ಕನ್ನಡ ಮತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕರಾವಳಿ ವಿಭಾಗ ಹಾಗೂ ಕರಾವಳಿ ಕುಲಾಲರ, ಕುಂಬಾರರ ಯುವವೇದಿಕೆ ಆಶ್ರಯದಲ್ಲಿ ನಡೆದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಇಂದು ದ.ಕ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿ.ಪಂ ಸಿಇಒ ಪಿ.ಐ.ಶ್ರೀವಿದ್ಯಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ನಡೆಯುವ ಜಾತಿಭೇಧ, ಅಹಿಂಸೆ ಮುಂತಾದ ಸಮಸ್ಯೆಗಳ ಬಗ್ಗೆ ಅಂದಿನ ಕಾಲದಲ್ಲಿ ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೆ ವಚನದ ಮೂಲಕ ಜಾಗೃತಿ ಮೂಡಿಸುತ್ತಾ ಸಮಾಜ ಸುಧಾರಣೆಗೆ ಕಾರಣರಾದ ಮಹಾನ್ ವ್ಯಕ್ತಿ ಸರ್ವಜ್ಞ. ಸಾಹಿತ್ಯವೆಂಬುದು ಕ್ಲಿಷ್ಟ ಭಾಷೆಯಲ್ಲಿದ್ದಾಗ ಅದು ಮೇಲ್ವರ್ಗದ ಜನರಿಗೆ ಮಾತ್ರ ಅರ್ಥ ಮಾಡಲು ಸಾಧ್ಯವಾಗದೆ ಇದ್ದಾಗ ಸರಳಭಾಷೆಯಲ್ಲಿ ಬರೆದು ಜನಸಾಮನ್ಯರಿಗೂ ಅರ್ಥವಾಗುವಂತೆ ಬರೆದು ಸಾಮಾಜಿಕ ಸುಧಾರಣೆಯ ಕೆಲಸವನ್ನು ಮಾಡಿದ್ದಾರೆ. ಪ್ರಸ್ತುತ ಇವರ ಚಿಂತನೆಯನ್ನು ಪಾಲಿಸುವ ನಿಟ್ಟಿನಲ್ಲಿ ಚಿಂತನೆಗಳನ್ನು ನಡೆಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ವಜ್ಞ ಜಯಂತಿ ಸಂದೇಶ ನೀಡಿದ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ ಸರ್ವಜ್ಞರ ಸಂದೇಶಗಳನ್ನು ಸಾರುವಂತಹ ಇಂತಹ ಮಹತ್ವದ ದಿನಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸುವ ಮೂಲಕ ಶಾಲಾಮಕ್ಕಳಲ್ಲಿಯೆ ಸರ್ವಜ್ಞ ವಿಚಾರಧಾರೆಗಳ ಬಗ್ಗೆ ತಿಳಿಹೇಳುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ.ಬಿ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಇಬ್ರಾಹಿಂ ಕೋಡಿಜಾಲ್, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಗಂಗಾಧರ್ ಉಪಸ್ಥಿತರಿದ್ದರು.







