ಭಾರತದಲ್ಲಿ ಗುರುತ್ವಾಕರ್ಷಕ ಅಲೆಗಳ ವೀಕ್ಷಣಾಲಯ ಸ್ಥಾಪನೆ

ವಾಶಿಂಗ್ಟನ್, ಫೆ.20: ಅತ್ಯಾಧುನಿಕ ಲೇಸರ್ ವ್ಯತಿಕರಣಮಾಪಕ (ಇಂಟರ್‌ಫರೋಮೀಟರ್) ಗುರುತ್ವಾಕರ್ಷಕ ಅಲೆಗಳ ವೀಕ್ಷಣಾಲಯ (ಲಿಗೋ)ದ ಸ್ಥಾಪನೆಗೆ ಭಾರತ ಸರಕಾರವು ತಾತ್ವಿಕ ಸಮ್ಮತಿಯನ್ನು ನೀಡಿದೆ. ಈ ಮಹತ್ವಾಕಾಂಕ್ಷಿ ವೀಕ್ಷಣಾಲಯವು 2023ರ ಅಂತ್ಯದೊಳಗೆ ಕಾರ್ಯಾರಂಭಿಸಲಿದೆಯೆಂದು ಅಮೆರಿಕದ ಉನ್ನತ ವಿಜ್ಞಾನಿ ಫ್ರೆಡ್ ರಾಬ್ ತಿಳಿಸಿದ್ದಾರೆ. ರಾಬ್ ಅವರು ಹ್ಯಾನ್‌ಫೋರ್ಡ್‌ನ ಲಿಗೋ ವೀಕ್ಷಣಾಲಯದ ವರಿಷ್ಠರೂ ಆಗಿದ್ದಾರೆ.
ಭಾರತದಲ್ಲಿ ಲಿಗೋ ವೀಕ್ಷಣಾಲಯಗಳ ನಿರ್ಮಾಣಕ್ಕೆ ಸಂಬಂಧಿಸಿ ಅಮೆರಿಕನ್ ಖಗೋಳ ವಿಜ್ಞಾನಿಗಳು ಹಲವು ಭಾರೀ ಭಾರತಕ್ಕೆ ಭೇಟಿ ನೀಡಿದ್ದು, ತಮ್ಮ ಭಾರತೀಯ ಸಹವರ್ತಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಕೇಂದ್ರ ಸಂಪುಟವು ಫೆಬ್ರವರಿ 17ರಂದು ಭಾರತದಲ್ಲಿ ಗುರುತ್ವಾಕರ್ಷಕ ಕಾಂತೀಯ ಅಲೆಗಳನ್ನು ಪತ್ತೆಹಚ್ಚುವ ಲಿಗೋ ವೀಕ್ಷಣಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಿತ್ತು. ಭಾರತದಲ್ಲಿ ನಿರ್ಮಾಣವಾಗಲಿರುವ ಲಿಗೋ ವೀಕ್ಷಣಾಲಯದಿಂದಾಗಿ, ಗುರುತ್ವಾಕರ್ಷಕ ಕಾಂತೀಯ ಅಲೆಗಳ ಮೂಲಗಳನ್ನು ಗುರುತಿಸುವ ಹಾಗೂ ಅವುಗಳ ಸಂಕೇತಗಳನ್ನು ವಿಶ್ಲೇಷಿಸುವ ವಿಜ್ಞಾನಿಗಳ ಸಾಮರ್ಥ್ಯವು ಹೆಚ್ಚಲಿದೆಯೆಂದು ಹೇಳಿಕೆ ತಿಳಿಸಿದೆ.





