ಮೂಡುಬಿದಿರೆ : ಕಟೀಲು ಅಪ್ಪು ಭಟ್ಟನ ಆಪ್ತ ಸ್ನೇಹಿತ ಆತ್ಮಹತ್ಯೆ
ಮೂಡುಬಿದಿರೆ : ಅತ್ಯಾಚಾರ ಆರೋಪಿ ಕಟೀಲು ಅಪ್ಪು ಭಟ್ಟನ ಆಪ್ತ ಸ್ನೇಹಿತ ಶೇಖರ ಪೂಜಾರಿಯ ಮೃತದೇಹವು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಕೊಪ್ಪದ ಕುಮೇರು ಗುಡ್ಡ ಪ್ರದೇಶದಲ್ಲಿ ಶನಿವಾರ ರಾತ್ರಿ ಪತ್ತೆಯಾಗಿದೆ.
ಶೇಖರ ಪೂಜಾರಿ (46 ವ) ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಉಟೋಪಚಾರ ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದು. ಫೆ.10ರಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಫೆ.15ರಂದು ನಾಪತ್ತೆ ಪ್ರಕರಣ ದಾಖಲಾಗಿದೆ.
ಶನಿವಾರ ಸಂಜೆ ಶೇಖರ ಪೂಜಾರಿಯ ಮನೆ ಸಮೀಪದ ಮಹಿಳೆಯೊಬ್ಬರು ದನವನ್ನು ಹುಡುಕಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮೃತದೇಹವನ್ನು ಕಂಡು ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮೃತದೇಹದ ಬಳಿ ವಿಷದ ಬಾಟಲಿ ಪತ್ತೆಯಾಗಿರುವುದರಿಂದ ವಿಷ ಸೇವಿಸಿ ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಹಾಯಕ ಅರ್ಚಕ ಅಪ್ಪು ಭಟ್ಟನ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ಮನೆಯವರ ಜತೆ ಹಣಕಾಸಿನ ವ್ಯವಹಾರವನ್ನು ಶೇಖರ ಪೂಜಾರಿ ನಡೆಸಿರುವ ಬಗ್ಗೆ ಆತನ ಮೇಲೆ ಪೊಲೀಸ್ ಕೇಸು ದಾಖಲಾಗಿತ್ತು. ಇದರಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಿಸಲಾಗಿದೆ. ಶೇಖರ ಪೂಜಾರಿಗೆ ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳಿದ್ದಾರೆ.







