ಪ್ರಾಚೀನ ವಿಜ್ಞಾನದ ಸಂಶೋಧನೆಗೆ ಐಐಟಿಗಳಲ್ಲಿ ಸಂಸ್ಕೃತ ವಿಭಾಗ ಸ್ಥಾಪನೆ

ಹೊಸದಿಲ್ಲಿ,ಫೆ.20: ವಿದ್ಯಾರ್ಥಿಗಳು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಪುರಾತನ ಸಾಹಿತ್ಯವನ್ನು ಅಧ್ಯಯನ ಮಾಡಲು ನೆರವಾಗುವಂತೆ ಐಐಟಿಗಳು ಸೇರಿದಂತೆ ಕೇಂದ್ರ ಸರಕಾರವು ನಡೆಸುತ್ತಿರುವ ಪ್ರಮುಖ ಎಂಜಿನಿಯರಿಂಗ್ ಮತ್ತು ವೈಜ್ಞಾನಿಕ ಶಿಕ್ಷಣಸಂಸ್ಥೆಗಳು ಸಂಸೃತ ವಿಭಾಗವನ್ನು ಹೊಂದಿರಬೇಕು ಎಂದು ಶಿಕ್ಷಣ ಸಚಿವಾಲಯವು ನೇಮಕಗೊಳಿಸಿರುವ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ನೇತೃತ್ವದ ಸಮಿತಿಯು ಶಿಫಾರಸು ಮಾಡಿದೆ.
ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅವಧಿಯಲ್ಲಿ ಸಂಸ್ಕೃತ ಶಿಕ್ಷಣ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಈ ಸಂಸ್ಥೆಗಳು ಅವಕಾಶ ಕಲ್ಪಿಸಬೇಕು ಎಂದೂ ಸಮಿತಿಯು ಹೇಳಿದೆ.
ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಿದರೆ ಸಣ್ಣ, ಆದರೆ ಗುರಿಕೇಂದ್ರಿತ ಯೋಜನೆಗಳ ಮೂಲಕ ಸಂಸ್ಕೃತ ಸಾಹಿತ್ಯದಲ್ಲಿ ಅಡಗಿರುವ ವೈಜ್ಞಾನಿಕ ಜ್ಞಾನವನ್ನು ಬೆಳಕಿಗೆ ತರುವಲ್ಲಿ ಅವರ ಪ್ರತಿಭೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಸಮಿತಿಯು ಹೇಳಿದೆ. ಸಂಸ್ಕೃತದ ಅಭಿವೃದ್ಧಿಗೆ 10 ವರ್ಷಗಳ ಮಾರ್ಗಸೂಚಿಯನ್ನು ರೂಪಿಸುವ ಹೊಣೆಯನ್ನು ಈ ಸಮಿತಿಗೆ ವಹಿಸಲಾಗಿತ್ತು.
ಪದವಿ ತರಗತಿಗಳಲ್ಲಿ ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ಜಾರಿಗೊಳಿಸುವಂತೆ ಮತ್ತು ಇತರ ವಿಷಯಗಳೊಂದಿಗೆ ಅದನ್ನು ಸಂಯೋಜಿಸುವಂತೆ ಸಮಿತಿಯು ಶಿಫಾರಸು ಮಾಡಿದೆ.
ಅಥರ್ವವೇದ,ವೈಶೇಷಿಕ ದರ್ಶನ ಇತ್ಯಾದಿಗಳು ಈವರೆಗೆ ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನಗೊಂಡ ಗ್ರಂಥಗಳಾಗಿದ್ದು, ಇವು ವೈಜ್ಞಾನಿಕ ಪರಿಕಲ್ಪನೆಗಳ ಭಂಡಾರಗಳು ಎನ್ನುವುದನ್ನು ಒಪ್ಪಿಕೊಳ್ಳಲಾಗಿದೆ.ಸಂಶೋಧನೆ ಮತ್ತು ಹೊಸಶೋಧಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿರುವ ಸಿದ್ಧಾಂತ ಶಿರೋಮಣಿ,ವೃಕ್ಷ ಆಯುರ್ವೇದದಂತಹ ನೂರಾರು ಸಾಹಿತ್ಯಗಳಿವೆ ಎಂದು ಸಮಿತಿಯು ಹೇಳಿದೆ.
ಪ್ರತಿ ರಾಜ್ಯದಲ್ಲಿ ಮಾದರಿ ಸಂಸ್ಕೃತ ಮಾಧ್ಯಮ ಶಾಲೆಗಳ ಸ್ಥಾಪನೆಗೂ ಸಮಿತಿಯು ಶಿಫಾರಸು ಮಾಡಿದೆ.







