ಟ್ವೆಂಟಿ-20: ಅಂತಿಮ ಎಸೆತದಲ್ಲಿ ಪಂದ್ಯ ಜಯಿಸಿದ ಆಫ್ರಿಕ ತಂಡ
ಗೆಲುವಿನ ರನ್ ಬಾರಿಸಿದ ಮೋರಿಸ್, ತಾಹಿರ್ ಪಂದ್ಯಶ್ರೇಷ್ಠ

ಕೇಪ್‌ಟೌನ್, ಫೆ.20: ಆಲ್‌ರೌಂಡರ್ ಕ್ರಿಸ್ ಮೋರಿಸ್ ಅಂತಿಮ ಎಸೆತದಲ್ಲಿ ಗೆಲುವಿನ ರನ್ ಬಾರಿಸುವ ಮೂಲಕ ದಕ್ಷಿಣ ಆಫ್ರಿಕ ತಂಡಕ್ಕೆ ಇಂಗ್ಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 3 ವಿಕೆಟ್ ಅಂತರದ ರೋಚಕ ಗೆಲುವು ತಂದುಕೊಟ್ಟರು.
ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 135 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕ ತಂಡಕ್ಕೆ ಅಂತಿಮ ಓವರ್‌ನಲ್ಲಿ ಗೆಲ್ಲಲು 15 ರನ್ ಅಗತ್ಯವಿತ್ತು. ಇಂಗ್ಲೆಂಡ್‌ನ ರೀಸ್ ಟಾಪ್ಲೆ ಅಂತಿಮ ಓವರ್ ಎಸೆದರು. ಮೊದಲ ಎಸೆತದಲ್ಲಿ ಒಂಟಿ ರನ್ ತೆಗೆದ ಕೈಲ್ ಅಬಾಟ್ ಅವರು ಮೋರಿಸ್‌ಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಮೋರಿಸ್ ಮುಂದಿನ 2 ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು. 4ನೆ ಎಸೆತದಲ್ಲಿ ರನ್ ಬರಲಿಲ್ಲ. 5ನೆ ಎಸೆತದಲಿ ್ಲಎರಡು ರನ್ ತೆಗೆದರು. ಅಂತಿಮ ಎಸೆತಗಳಲ್ಲಿ 2 ರನ್ ಅಗತ್ಯವಿತ್ತು. ಆಗ ಮತ್ತೆರಡು ರನ್ ಗಳಿಸಿದ ಮೋರಿಸ್ ಆಫ್ರಿಕ ತಂಡಕ್ಕೆ ಅಂತಿಮ ಎಸೆತದಲ್ಲಿ ರೋಚಕ ಗೆಲುವು ತಂದುಕೊಟ್ಟರು. ಅಂತಿಮ ಎಸೆತದಲ್ಲಿ ಎರಡು ರನ್ ಗಳಿಸುವಾಗ ಟಾಪ್ಲೆಗೆ ಅಬಾಟ್‌ರನ್ನು ರನೌಟ್ ಮಾಡಿ ಪಂದ್ಯವನ್ನು ಟೈಗೊಳಿಸುವ ಅವಕಾಶ ಲಭಿಸಿತ್ತು. ಆದರೆ, ಟಾಪ್ಲೆ ಈ ಅವಕಾಶವನ್ನು ಕೈಚೆಲ್ಲಿದರು. ಮೋರಿಸ್ 7 ಎಸೆತಗಳಲ್ಲಿ ಔಟಾಗದೆ 17 ರನ್ ಗಳಿಸಿದರು. ಮೋರಿಸ್ ಒಂದು ವಾರದ ಹಿಂದೆ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ 38 ಎಸೆತಗಳಲ್ಲಿ 62 ರನ್ ಗಳಿಸಿ ಆಫ್ರಿಕ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವನ್ನು 8 ವಿಕೆಟ್ ನಷ್ಟಕ್ಕೆ 134 ರನ್‌ಗೆ ನಿಯಂತ್ರಿಸಿದ್ದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್(4-21) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಮೊದಲ 4 ಓವರ್‌ಗಳಲ್ಲಿ 38 ರನ್ ಗಳಿಸಿದ ಇಂಗ್ಲೆಂಡ್‌ನ ಆರಂಭಿಕ ದಾಂಡಿಗರಾದ ಜಾಸನ್ ರಾಯ್(15) ಹಾಗೂ ಅಲೆಕ್ಸ್ ಹ್ಯಾಲೆಸ್(38) ಉತ್ತಮ ಆರಂಭವನ್ನು ನೀಡುವ ಸೂಚನೆ ನೀಡಿದ್ದರು. ಆದರೆ, ಈ ಜೋಡಿಯನ್ನು ಕಾಗಿಸೊ ರಬಾಡ ಬೇರ್ಪಡಿಸಿದರು. ಇನಿಂಗ್ಸ್‌ನ 6ನೆ ಓವರ್‌ನಲ್ಲಿ ದಾಳಿಗಿಳಿದ ತಾಹಿರ್ ಅವರು ಹ್ಯಾಲೆಸ್, ನಾಯಕ ಮೋರ್ಗನ್, ಸ್ಟೋಕ್ಸ್ ಹಾಗೂ ಮೊಯೀನ್ ಅಲಿ ವಿಕೆಟ್‌ನ್ನು ಉರುಳಿಸಿ ಆಂಗ್ಲರಿಗೆ ಆಘಾತ ನೀಡಿದರು.
ಗೆಲ್ಲಲು ಸುಲಭ ಸವಾಲು ಪಡೆದಿದ್ದ ದ. ಆಫ್ರಿಕಕ್ಕೆ ಹಾಶೀಮ್ ಅಮ್ಲ(22) ಹಾಗೂ ಎಬಿಡಿವಿಲಿಯರ್ಸ್(7) ಮೊದಲ ವಿಕೆಟ್‌ಗೆ 31 ರನ್ ಸೇರಿಸಿದರು. ಬಿಗಿ ಬೌಲಿಂಗ್ ಮಾಡಿದ ಆಳ್‌ರೌಂಡರ್ ಸ್ಟೋಕ್ಸ್ ಹಾಗೂ ಸ್ಪಿನ್ನರ್ ಆದಿಲ್ ರಶೀದ್ ಆಫ್ರಿಕ ರನ್ ಗಳಿಸದಂತೆ ನೋಡಿಕೊಂಡರು. ಜೋರ್ಡನ್(3-23) ಯಶಸ್ವಿ ಬೌಲರ್ ಎನಿಸಿಕೊಂಡರು.
ಆಫ್ರಿಕದ ಪರ ನಾಯಕ ಎಫ್‌ಡು ಪ್ಲೆಸಿಸ್(25) ಅಗ್ರ ಸ್ಕೋರರ್ ಎನಿಸಿಕೊಂಡರು. ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 20 ಓವರ್‌ಗಳಲ್ಲಿ 134/8
(ಜೋಸ್ ಬಟ್ಲರ್ ಔಟಾಗದೆ 32, ಹ್ಯಾಲೆಸ್ 27, ಇಮ್ರಾನ್ ತಾಹಿರ್ 4-21, ಕೈಲ್ ಅಬಾಟ್ 2-31)
ದಕ್ಷಿಣ ಆಫ್ರಿಕ: 20 ಓವರ್‌ಗಳಲ್ಲಿ 135/7
( ಎಫ್‌ಡು ಪ್ಲೆಸಿಸ್ 25, ಜೆಪಿ ಡುಮಿನಿ 23, ಹಾಶಿಮ್ ಅಮ್ಲ 22, ಮೋರಿಸ್ ಔಟಾದೆ 17, ಜೋರ್ಡನ್ 3-23, ಮೋಯಿನ್ ಅಲಿ 2-22)
..........







