ಭಾರತದ ಜೊತೆಗಿನ ಬಾಂಧವ್ಯದ ಮರುಪರಿಶೀಲನೆ ಅಗತ್ಯ

ವಾಶಿಂಗ್ಟನ್, ಫೆ.20: ಭಾರತವು ಧಾರ್ಮಿಕ ಸ್ವಾತಂತ್ರ ಹಾಗೂ ಮಾವಹಕ್ಕುಗಳ ದಮನವನ್ನು ಮುಂದುವರಿಸಿದ್ದು, ಆ ದೇಶದ ಜೊತೆಗಿನ ತನ್ನ ವೃದ್ಧಿಸುತ್ತಿರುವ ಬಾಂಧವ್ಯದ ಬಗ್ಗೆ ಅಮೆರಿಕವು ‘ಮರುವೌಲ್ಯಮಾಪನ’ ನಡೆಸಬೇಕೆಂದು ರಿಪಬ್ಲಿಕನ್ ಸೆನೆಟರ್ ಒಬ್ಬರು ಒಬಾಮ ಆಡಳಿತಕ್ಕೆ ಶುಕ್ರವಾರ ಕರೆ ನೀಡಿದ್ದಾರೆ.
ಒಕ್ಲಹಾಮ ಪ್ರಾಂತದ ರಿಪಬ್ಲಿಕನ್ ಸೆನೆಟರ್ ಜೇಮ್ಸ್ ಲ್ಯಾಂಕ್‌ಫೋರ್ಡ್ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಈ ಬಗ್ಗೆ ಪತ್ರವೊಂದನ್ನು ಬರೆದಿದ್ದು, ಅಮೆರಿಕವು ಭಾರತದ ಜೊತೆಗಿನ ಬಾಂಧವ್ಯವನ್ನು ಜಾಗರೂಕತೆಯಿಂದ ಮರುಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ. ಭಾರತವು ಧಾರ್ಮಿಕ ಸ್ವಾತಂತ್ರ ಹಾಗೂ ಮಾನವಹಕ್ಕುಗಳ ದಮನವನ್ನು ಮುಂದುವರಿಸಿದೆ. ಎಲ್ಲಾ ಧರ್ಮಗಳ ಭಾರತೀಯ ಪ್ರಜೆಗಳ ಮಾನವಹಕ್ಕುಗಳನ್ನು ಹಾಗೂ ಧಾರ್ಮಿಕ ಸ್ವಾತಂತ್ರವನ್ನು ಬೆಂಬಲಿಸಲು ಅಮೆರಿಕ ಸರಕಾರವು ಭಾರತ ಜೊತೆಗಿನ ತನ್ನ ಸಾಂಸ್ಕೃತಿಕ ನಂಟನ್ನು ಬಳಸಿಕೊಳ್ಳಬೇಕೆಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಅಮೆರಿಕದ ಪ್ರತಿಯೊಂದು ರಾಜ್ಯವೂ ತಲಾ ಇಬ್ಬರು ಸೆನೆಟರ್‌ಗಳನ್ನು ಹೊಂದಿದೆ. ಇತರ ಸೆನೆಟರ್‌ಗಳಿಗೆ ಹೋಲಿಸಿದರೆ, ಜೂನಿಯರ್ ಸೆನೆಟರ್‌ಗೆ ಕಡಿಮೆ ಅಧಿಕಾರಾವಧಿ ಯಿರುತ್ತದೆ.
ಭಾರತವು ಧಾರ್ಮಿಕವಾಗಿ ವೈವಿಧ್ಯಮಯವಾದ ಸಮಾಜ ಹಾಗೂ ಜಾತ್ಯತೀತ ಸರಕಾರವನ್ನು ಹೊಂದಿದೆ. ಆದಾಗ್ಯೂ ಆ ದೇಶದಲ್ಲಿ ಮಾನವಹಕ್ಕುಗಳು ಹಾಗೂ ಧಾರ್ಮಿಕ ಸ್ವಾತಂತ್ರದ ಉಲ್ಲಂಘನೆಯಾಗುತ್ತಿದೆಯೆಂದು ಜೇಮ್ಸ್ ಲ್ಯಾಂಕ್‌ಫೋರ್ಡ್ ಆಪಾದಿಸಿದ್ದಾರೆ.
ಭಾರತದಲ್ಲಿ ಕ್ರೈಸ್ತರು ಹಾಗೂ ಮುಸ್ಲಿಮರು ಪದೇ ಪದೇ ಧಾರ್ಮಿಕ ಕಿರುಕುಳ ಹಾಗೂ ಹಿಂಸಾಚಾರಕ್ಕೆ ಗುರಿಯಾಗುತ್ತಿದ್ದಾರೆಂದು ಅವರು ಒಬಾಮಾಗೆ ಬರೆದಿರುವ ಸುದೀರ್ಘ ಪತ್ರದಲ್ಲಿ ದೂರಿದ್ದಾರೆ.





