ಆ್ಯಪಲ್ ಉತ್ಪನ್ನಗಳ ಬಹಿಷ್ಕಾರಕ್ಕೆ ಟ್ರಂಪ್ ಕರೆ !

ನ್ಯೂಯಾರ್ಕ್, ಫೆ.20 : ಸ್ಯಾನ್ ಬೆರ್ನಾರ್ಡಿನೋ ಹತ್ಯಾಕಾಂಡದ ಹಂತಕರುಗಳ ಐ-ಫೋನ್ ಅನ್‌ಲಾಕ್ ಮಾಡಲು ತಂತ್ರಜ್ಞಾನ ದೈತ್ಯ ಆ್ಯಪಲ್ ಕಂಪೆನಿಯು ಸಹಕರಿಸಲು ಒಪ್ಪುವ ತನಕ ಆ ಕಂಪೆನಿಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಅಮೆರಿಕದ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.
ದಕ್ಷಿಣ ಕ್ಯಾರೋಲಿನಾದ ಟೌನ್‌ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ ಕೆಲವೇ ಗಂಟೆಗಳ ಬಳಿಕ ಅವರು ತಮ್ಮ ಆ್ಯಪಲ್ ಐ-ಫೋನಿನಿಂದಲೇ ಹಲವಾರು ಟ್ವೀಟ್‌ಗನ್ನು ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಅವರು ಸೆಕ್ಯುರಿಟಿ ಸಂಖ್ಯೆಯನ್ನು ನೀಡುವ ತನಕ ನೀವು ಆ್ಯಪಲನ್ನು ಬಹಿಷ್ಕರಿಸಬೇಕೆಂದು ನನಗನಿಸುತ್ತದೆ ಎಂದು ಸಭೆಯಲ್ಲಿ ಹೇಳಿದ ಟ್ರಂಪ್ ನಿಮಗೆ ಏನನಿಸುತ್ತದೆ? ಎಂದವರು ಪ್ರಶ್ನಿಸಿದ್ದರು. ನಾನು ಕೂಡ ಅದರ ಬಗ್ಗೆಯೇ ಯೋಚಿಸುತ್ತಿದ್ದೇನೆ ಎಂದವರು ಹೇಳಿದ್ದರು.
ಅಮೆರಿಕದ ಫೆಡರಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ಶೂಟರುಗಳ ಐ-ಫೋನನ್ನು ಅನ್‌ಲಾಕ್ ಮಾಡಲು ಎಫ್‌ಬಿಐದೊಂದಿಗೆ ಕಂಪೆನಿ ಸಹಕರಿಸಬೇಕೆಂದು ಕೋರಿದಾಗ, ಆ್ಯಪಲ್ ಅದಕ್ಕೆ ನಿರಾಕರಿಸಿತ್ತು. ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಈ ಬೇಡಿಕೆಯನ್ನು ನಿರಾಕರಿಸಿದ್ದರು. ಕಂಪೆನಿಯ ವೆಬ್‌ಸೈಟಿನಲ್ಲಿ ಈ ಆದೇಶಕ್ಕೆ ಪ್ರತಿಕ್ರಿಯಿಸಿದ ಕುಕ್, ನ್ಯಾಯಾಲಯದ ಈ ಆದೇಶವನ್ನು ಆ್ಯಪಲ್ ವಿರೋಧಿಸುವುದಾಗಿ ಹೇಳಿದ್ದರು ಹಾಗೂ ಈ ಬಗ್ಗೆ ಸಾರ್ವಜನಿಕ ಸಂವಾದ ನಡೆಯುವ ಅಗತ್ಯವಿದೆಯೆಂದು ಅಭಿಪ್ರಾಯಿಸಿದ್ದರು.
ನಮ್ಮ ಗ್ರಾಹಕರ ಖಾಸಗಿ ತನಕ್ಕೆ ಬೆದರಿಕೆಯೊಡ್ಡುವಂತಹ ಕ್ರಮ ಕೈಗೊಳ್ಳಬೇಕೆಂದು ಸರಕಾರ ನಮ್ಮನ್ನು ಆಗ್ರಹಿಸಿದೆ,ಎಂದು ಅವರು ತಮ್ಮ ಕಂಪೆನಿಯ ವೆಬ್ ತಾಣದಲ್ಲಿ ಹೇಳಿಕೊಂಡಿದ್ದರು. ಅದೇ ಸಮಯ ಕುಕ್ ಶೂಟಿಂಗ್ ಘಟನೆಗೆ ತಮ್ಮಆಘಾತ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದು ನಮಗೆಭಯೋತ್ಪಾದಕರ ಬಗ್ಗೆ ಯಾವುದೇ ಕನಿಕರವಿಲ್ಲ ಎಂದಿದ್ದಾರೆ. ಕಳೆದ ವರ್ಷದ ಡಿಸೆಂಬರ್ 2ರಂದು ಕ್ಯಾಲಿಫೋರ್ನಿಯಾದ ಸ್ಯಾನ್‌ಬೆರ್ಡಿನೊದಲ್ಲಿ ಪಾಕ್ ಮೂಲದ ಅಮೆರಿಕನ್ ದಂಪತಿಯು ಸಾರ್ವಜನಿಕ ಸ್ಥಳದಲ್ಲಿ ಶೂಟೌಟ್ ನಡೆಸಿ 14 ಮಂದಿಯನ್ನು ಹತ್ಯೆಗೈದಿದ್ದರು. ಈ ಘಟನೆಯಲ್ಲಿ 22ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದವು. ಈ ದಂಪತಿಯ ಐಫೋನ್‌ನ್ನು ಅನ್‌ಲಾಕ್ ಮಾಡಲು ಸಹಕರಿಸುವಂತೆ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಕೋರಿದಾಗ ಆ್ಯಪಲ್ ಅದಕ್ಕೆ ನಿರಾಕರಿಸಿತ್ತು.





